ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಷಾ ಕೈಗೆ ಪೂರ್ಣ ಉಸ್ತುವಾರಿ

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಚುನಾವಣೆ ನಿರ್ವಹಣೆ ಕೌಶಲವನ್ನು ಪಣಕ್ಕಿಟ್ಟಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು, ಗುಜರಾತ್‌ ವಿಧಾನಸಭೆ ಚುನಾವಣೆ ಗೆಲ್ಲುವುದಕ್ಕಾಗಿ ರಾತ್ರಿ ಹಗಲೆನ್ನದೆ ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನರಾಗಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ದೈನಂದಿನ ಪ್ರಚಾರದ ವಿಚಾರದವರೆಗೆ ಎಲ್ಲದರ ಉಸ್ತುವಾರಿಯನ್ನೂ ಷಾ ಅವರೇ ವಹಿಸಿಕೊಂಡಿದ್ದಾರೆ ಎಂದು ನಿಕಟವರ್ತಿಗಳು ಹೇಳುತ್ತಿದ್ದಾರೆ. ಚುನಾವಣೆ ವಿಚಾರದಲ್ಲಿ ಯಾವ ಅಸಡ್ಡೆಯೂ ಉಂಟಾಗಬಾರದು ಎಂಬ ಕಾರಣಕ್ಕಾಗಿ ಷಾ ಅವರು ಗಾಂಧಿ ನಗರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ‘ಶ್ರೀ ಕಮಲಂ’ನಲ್ಲಿ ತಡರಾತ್ರಿವರೆಗೂ ಇರುತ್ತಾರೆ.

ಬಿಜೆಪಿಯ ಹಾಲಿ ಶಾಸಕರಲ್ಲಿ ಎಷ್ಟು ಜನರನ್ನು ಕೈಬಿಡಬೇಕು ಎಂಬುದನ್ನು ನಿರ್ಧರಿಸುವುದು ಷಾ ಮುಂದಿರುವ ದೊಡ್ಡ ಸವಾಲು. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವುದೇ ಈ ಬಾರಿ ಬಿಜೆಪಿಯ ಮುಖ್ಯ ಗುರಿ. ಹಾಗಾಗಿ 80ರಷ್ಟು ಶಾಸಕರಿಗೆ ಟಿಕೆಟ್‌ ದೊರೆಯುವುದು ಅನುಮಾನ ಎಂದು ಹಿರಿಯ ಮುಖಂಡರು ಹೇಳುತ್ತಿದ್ದಾರೆ. 2012ರ ಚುನಾವಣೆಯಲ್ಲಿ 30 ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

2007ರ ಚುನಾವಣೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿತ್ತು. ಆಗ ಅವರು 47 ಶಾಸಕರಿಗೆ ಟಿಕೆಟ್‌ ನೀಡಿರಲಿಲ್ಲ. 2002ರಲ್ಲಿ ಮೋದಿ ನೇತೃತ್ವದಲ್ಲಿ ಮೊದಲ ಬಾರಿ ಬಿಜೆಪಿ ಚುನಾವಣೆ ಎದುರಿಸಿದ್ದಾಗ 18 ಶಾಸಕರನ್ನು ಕೈಬಿಡಲಾಗಿತ್ತು.

ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅತಿ ಸಣ್ಣ ವಿಚಾರಗಳನ್ನೂ ಇಷ್ಟೊಂದು ಗಂಭೀರವಾಗಿ ಪರಿಗಣಿಸಿದ ಉದಾಹರಣೆ ಇಲ್ಲ. ‘ಆದರೆ, ಗುಜರಾತಿನ ವಿಚಾರಕ್ಕೆ ಬಂದರೆ ಷಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮಾತ್ರ ಅಲ್ಲ. ಗುಜರಾತ್‌ ರಾಜಕೀಯದಲ್ಲಿ ಅವರು ವಹಿಸಿದ ಪಾತ್ರವೇ ಅವರನ್ನು ಈ ಹಂತಕ್ಕೆ ತಂದಿದೆ. ಅಷ್ಟಲ್ಲದೆ ಇತ್ತೀಚಿನವರೆಗೆ ಅವರು ಇಲ್ಲಿನ ಶಾಸಕ ಆಗಿದ್ದರು’ ಎಂದು ಷಾ ಆಪ್ತರೊಬ್ಬರು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೊಣೆ ವಹಿಸಿಕೊಂಡಿದ್ದ ಷಾ ಅವರಿಗೆ ಭಾರಿ ಯಶಸ್ಸು ದೊರೆತಿತ್ತು. ಆದರೆ ಈ ಬಾರಿ ಗುಜರಾತಿನಲ್ಲಿ ಅವರ ಮುಂದೆ ಭಾರಿ ಸವಾಲು ಇದೆ. ‘ಭಾರಿ ಗೆಲುವು ಪಡೆಯಬೇಕಿದ್ದರೆ ಮೋದಿ ಅವರ ಜನಪ್ರಿಯತೆಯಷ್ಟೇ ಸಾಲದು ಎಂಬುದು ಬಿಜೆಪಿಗೆ ಅರ್ಥವಾಗಿದೆ’ ಎಂದು ಷಾ ಅವರ ಚುನಾವಣಾ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. ಎರಡು ದಶಕಗಳಿಂದ ಅಧಿಕಾರದಲ್ಲಿ ಇರುವುದರಿಂದ ಆಡಳಿತ ವಿರೋಧಿ ಅಲೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಹಾಗಾಗಿ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವಂತೆ ಇಲ್ಲ ಎಂಬುದು ಅವರ ಅಭಿಪ್ರಾಯ.

ಮೋದಿ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಪ್ರಧಾನಿಯಾದ ಬಳಿಕ ರಾಜ್ಯದ ಸಚಿವರು ಮತ್ತು ಬಿಜೆಪಿ ಮುಖಂಡರ ಕಾರ್ಯಕ್ಷಮತೆಯ ಬಗ್ಗೆ ಜನರಲ್ಲಿ ಅತೃಪ್ತಿ ಇದೆ ಎಂಬುದನ್ನೂ ಬಿಜೆಪಿ ಮುಖಂಡರು ಒಪ್ಪಿಕೊಳ್ಳುತ್ತಾರೆ.

ಮೋದಿ ಬಲ: ಇದೇ 15–16ರೊಳಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ. 20ರ ಬಳಿಕ ಮೋದಿ ಅವರು ರಾಜ್ಯದಾದ್ಯಂತ ಸಂಚರಿಸಿ ಹಲವು ಸಮಾವೇಶಗಳಲ್ಲಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ 32 ಜಿಲ್ಲೆಗಳಿದ್ದು ಒಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ರ‍್ಯಾಲಿಯಲ್ಲಿಯಾದರೂ ಮೋದಿ ಅವರು ಮಾತನಾಡಲಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT