ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ವಾಟ್ಸ್‌ಆ್ಯಪ್‌ಗೆ ನಿಷೇಧ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಗೂಢಲಿಪಿ’ ತಂತ್ರಜ್ಞಾನ ಪರಿಚಯಿಸಿರುವ ವಾಟ್ಸ್‌ಆ್ಯಪ್‌ ಹಾಗೂ ಇತರ ಮೊಬೈಲ್ ಸಂದೇಶವಾಹಕ ಸೇವೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು (ಟ್ರಾಯ್‌) ಸಂಪರ್ಕಿಸುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಮತ್ತು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ಅವರನ್ನೊಳಗೊಂಡ ಪೀಠ ಅರ್ಜಿದಾರ, ಮಾಹಿತಿ ಹಕ್ಕು ಕಾರ್ಯಕರ್ತ ಸುಧೀರ್‌ ಯಾದವ್‌ ಅವರಿಗೆ ಸಲಹೆ ನೀಡಿತು. ಸ್ವತಃ ವಾದ ಮಂಡಿಸಿದ ಸುಧೀರ್‌ ಅವರು, ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ‘ಗೂಢಲಿಪಿ’ ತಂತ್ರಜ್ಞಾನದ ಅಳವಡಿಕೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ದೂರಸಂಪರ್ಕ ಇಲಾಖೆಯು ಪ್ರತಿಕ್ರಿಯೆ ನೀಡಿರುವುದಾಗಿ ಹೇಳಿದರು.

ವ್ಯಕ್ತಿಯಿಂದ ವ್ಯಕ್ತಿಗೆ ರವಾನೆಯಾಗುವ ಸಂದೇಶ, ಕರೆಗಳು, ವಿಡಿಯೊ, ಆಡಿಯೊ, ಚಿತ್ರ ಮತ್ತು ದಾಖಲೆಗಳನ್ನು ಮೂರನೇ ವ್ಯಕ್ತಿ ವೀಕ್ಷಿಸಲು ಸಾಧ್ಯವಾಗದಂತೆ ವಾಟ್ಸ್‌ಆ್ಯಪ್‌ ‘ಗೂಢಲಿಪಿ’ ತಂತ್ರಜ್ಞಾನ ಅಳವಡಿಸಿದೆ. ಇದರಿಂದಾಗಿ ಉಗ್ರರ ಚಟುವಟಿಕೆಗಳ ಕುರಿತು ಸರ್ಕಾರದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ದೊರಕುವುದಿಲ್ಲ. ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಬಹುದು. ಹೀಗಾಗಿ ತನಿಖೆಗೆ ಅನುಕೂಲವಾಗುವಂತೆ ಮಾಹಿತಿಗಳನ್ನು ಪಡೆದುಕೊಳ್ಳಲು ಪೊಲೀಸರಿಗೆ ಅವಕಾಶ ನೀಡಬೇಕು ಎಂದು  ಒತ್ತಾಯಿಸಿದ್ದಾರೆ.  ವಾಟ್ಸ್‌ಆ್ಯಪ್‌ ಅಲ್ಲದೇ ಸೆಕ್ಯೂರ್ ಚಾಟ್‌, ಲ್ಯೂಪೋಸ್ಟ್‌, ಹೈಕ್‌, ವೈಬರ್‌, ವಿಕರ್‌ ಮಿ, ಟೆಲಿಗ್ರಾಮ್‌ ಸಂದೇಶವಾಹಕಗಳೂ ಗೂಢಲಿಪಿ ತಂತ್ರಜ್ಞಾನವನ್ನು ಬಳಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT