ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಸ್ಪೃಶ್ಯತೆ ನಿವಾರಣೆ

‘ಜನ ಧನ’ ಯೋಜನೆಗೆ ಚಾಲನೆ * ದಾಖಲೆ 1.5 ಕೋಟಿ ಖಾತೆ ಆರಂಭ
Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಮಹತ್ವಾ­ಕಾಂಕ್ಷೆಯ ‘ಜನ ಧನ ಯೋಜನೆ’ ಉದ್ಘಾಟನೆ­ಗೊಂಡ ಮೊದಲ ದಿನವೇ 1.5 ಕೋಟಿ ಕುಟುಂಬಗಳು ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದು, ಇದೊಂದು ವಿಶ್ವದಾಖಲೆ ಎನ್ನಲಾಗಿದೆ.

ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬ್ಯಾಂಕಿಂಗ್‌ ಕಾರ್ಯಕ್ರಮ ಎನ್ನಲಾದ ‘ಜನ ಧನ ಯೋಜನೆ’ಗೆ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು, ಮುಂಬರುವ ಗಣರಾಜ್ಯೋತ್ಸ­ವದ ವೇಳೆಗೆ (2015ರ ಜ. 26) ಈ ಯೋಜನೆಯ ವ್ಯಾಪ್ತಿಗೆ 7.5 ಕೋಟಿ ಬಡ ಕುಟುಂಬಗಳು ಒಳಪಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಮುಂಚೆ ಸರ್ಕಾರವು ಇದಕ್ಕೆ 2015ರ ಆ.15ರ ಗುರಿಯನ್ನು ಹಾಕಿಕೊಂಡಿತ್ತು.  ಉದ್ಘಾಟನಾ ಸಮಾರಂಭದಲ್ಲಿ ಮೋದಿ ಅವರು ಐದು ಕುಟುಂಬಗಳ ಸದಸ್ಯರಿಗೆ  ಬ್ಯಾಂಕ್‌ ಖಾತೆ ಪುಸ್ತಕಗಳನ್ನು ಹಾಗೂ ‘ರೂಪೆ’ ಡೆಬಿಟ್‌ ಕಾರ್ಡ್‌ (ಎಟಿಎಂ)  ವಿತರಿಸಿದರು.

ಸರ್ಕಾರ ರಚನೆಗೊಂಡ 100 ದಿನಗಳೊಳಗೆ ಚಾಲನೆ ಪಡೆದಿರುವ ಆರ್ಥಿಕ ಅಸ್ಪೃಶ್ಯತೆ ನೀಗಿಸುವ ಉದ್ದೇಶದ ಈ ಯೋಜನೆಯಡಿ ಬ್ಯಾಂಕ್‌ ಖಾತೆಗೆ ಒಂದು ರೂಪಾಯಿ ಹಣವನ್ನೂ ತುಂಬದೆ ಖಾತೆ ತೆರೆಯಬಹುದು. ಅಲ್ಲದೇ ಖಾತೆದಾರರಿಗೆ ‘ರೂಪೆ’ ಡೆಬಿಟ್‌ ಕಾರ್ಡ್‌ ನೀಡುವ ಜತೆಗೆ, 30,000 ರೂಪಾಯಿ ಮೊತ್ತಕ್ಕೆ ಜೀವ ವಿಮೆ ಹಾಗೂ ಇದರ ಜತೆಗೆ 1 ಲಕ್ಷ ರೂಪಾಯಿ ಮೊತ್ತಕ್ಕೆ ಅಪಘಾತ ವಿಮೆ ಒದಗಿಸಲಾಗುವುದು. ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು ( ಎಲ್‌ಐಸಿ)   ಜೀವ ರಕ್ಷೆಯನ್ನು ಒದಗಿಸಲಿದೆ.

ಜತೆಗೆ  5 ಸಾವಿರ ರೂಪಾಯಿಗಳ  ಓವರ್‌ ಡ್ರಾಫ್ಟ್‌ (ಸಾಲ) ಸೌಲಭ್ಯವನ್ನೂ ಯೋಜನೆ ಒಳ­ಗೊಂಡಿದೆ. ಖಾತೆ ತೆರೆದ ಆರು ತಿಂಗಳ ನಂತರ ಈ ಸವಲತ್ತು ಪಡೆಯ­ಬಹುದಾಗಿದೆ. ಮುಂದಿನ ವರ್ಷ­ಗಳಲ್ಲಿ ಈ ಖಾತೆದಾರರಿಗೆ ಸಣ್ಣಮೊತ್ತದ ಪಿಂಚಣಿ ಕೊಡುವ ಉದ್ದೇಶವನ್ನೂ ಯೋಜನೆ ಹೊಂದಿದೆ.

‘ನಾವು ಬಡತನ ನಿರ್ಮೂಲನೆ ಮಾಡ­ಬೇಕೆಂದರೆ ಅದಕ್ಕೆ ಮುನ್ನ ಆರ್ಥಿಕ ಅಸ್ಪೃಶ್ಯತೆ­ಯನ್ನು ನಿರ್ಮೂಲನೆ ಮಾಡಲೇಬೇಕಾಗುತ್ತದೆ. ಪ್ರತಿ­ಯೊಬ್ಬ ವ್ಯಕ್ತಿಗೂ ಆರ್ಥಿಕ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಅದನ್ನು ಗಮನದಲ್ಲಿ ಇರಿಸಿಕೊಂಡೇ ಈ ಯೋಜನೆಗೆ ಒತ್ತು ನೀಡಲಾಗಿದೆ’ ಎಂದು ಮೋದಿ ಹೇಳಿದರು.

ಈ ಯೋಜನೆಯು ಸರ್ಕಾರದ ಸಬ್ಸಿಡಿ ಯೋಜನೆಗಳಲ್ಲಿನ ಸೋರಿಕೆ­ಯನ್ನು ತಡೆಯುವ ಮೂಲಕ ಭ್ರಷ್ಟಾ­ಚಾರ ನಿರ್ಮೂಲನೆಗೆ ಸಹಕಾರಿ­ಯಾ­ಗುತ್ತದೆ. ಇದರಿಂದಾಗಿ ಬಡವರು ಹಣ ಲೇವಾದೇವಿದಾರರ ಉಪಟಳದಿಂದ ಪಾರಾಗ­ಬಹುದು. ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಪಾವತಿಸಲು ಸಾಧ್ಯವಾಗುವುದರಿಂದ ಸರ್ಕಾರದ ಸಬ್ಸಿಡಿ ಹೊರೆ ಗಣನೀಯ­ವಾಗಿ ಕಡಿಮೆಯಾಗುತ್ತದೆ ಎಂದರು.

ಆರ್ಥಿಕ ವ್ಯವಸ್ಥೆಯನ್ನು ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಗುರಿಯೊಂದಿಗೆ 1969ರಲ್ಲಿ ಬ್ಯಾಂಕು­ಗಳ ರಾಷ್ಟ್ರೀಕರಣ ಮಾಡ­ಲಾಯಿತು. ಆದರೆ ಸ್ವಾತಂತ್ರ್ಯ ಬಂದು 68 ವರ್ಷಗಳಾದರೂ ಬ್ಯಾಂಕಿಂಗ್‌ ವ್ಯವ­ಸ್ಥೆಯು ಇನ್ನೂ ರಾಷ್ಟ್ರದ ಶೇ 68ರಷ್ಟು ಜನರನ್ನೂ ತಲುಪಿಲ್ಲ ಎನ್ನಲು ವಿಷಾದ­ವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT