ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಶಾಲೆಗಳಿಗೂ ಕೇಸರಿ ಬಣ್ಣ

Last Updated 9 ಡಿಸೆಂಬರ್ 2017, 19:49 IST
ಅಕ್ಷರ ಗಾತ್ರ

ಲಖನೌ: ಶಾಲಾ ಪಠ್ಯಪುಸ್ತಕಗಳ ಮುಖಪುಟಗಳಿಗೆ ಕೇಸರಿ ಬಣ್ಣವನ್ನೇ ಬಳಸಬೇಕು ಎಂದು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ನಿರ್ಧಾರ ಕೈಗೊಂಡ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವ ಕಾರ್ಯ ಆರಂಭಗೊಂಡಿದೆ.

ರಾಜಧಾನಿ ಲಖನೌದಿಂದ 300 ಕಿ.ಮೀ ದೂರದಲ್ಲಿರುವ ಪಿಲಿಭಿಟ್‌ ಜಿಲ್ಲೆಯಲ್ಲಿ 100 ಪ್ರಾಥಮಿಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ ಎಂದು ವರದಿಯಾಗಿದೆ.

ಹಲವು ಕಡೆಗಳಲ್ಲಿ ಸ್ಥಳೀಯ ಗ್ರಾಮಸ್ಥರು ಇದನ್ನು ವಿರೋಧಿಸಿ, ತಡೆ ಒಡ್ಡಲು ಯತ್ನಿಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ವರದಿಗಳು ಹೇಳಿವೆ.

ಈ ಬಗ್ಗೆ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದಾಗ, ಅಂತಹ ಯಾವುದೇ ಆದೇ‌ಶ ಹೊರಡಿಸಲಾಗಿಲ್ಲ ಎಂದು ಹೇಳಿದ್ದಾರೆ.

‘ಗ್ರಾಮ ಪಂಚಾಯಿತಿಯ ಮುಖ್ಯಸ್ಥರ ಸಲಹೆಯ ಮೇರೆಗೆ ಕೆಲವು ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿದಿರಬಹುದು’ ಎಂದು ಪಿಲಿಭಿಟ್ ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಕ‌‌ೇಸರಿಮಯ: ಮುಂದಿನ ಶೈಕ್ಷಣಿಕ ವರ್ಷದಿಂದ 8ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳ ಮುಖಪುಟಗಳಲ್ಲಿ ಕೇಸರಿ ಬಣ್ಣ ಬಳಸಲು ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆಯಷ್ಟೇ ತೀರ್ಮಾನಿಸಿತ್ತು. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಚೀಲಗಳು ಈಗಾಗಲೇ ಕೇಸರಿ ಬಣ್ಣದ್ದಾಗಿವೆ.

ಕೇಸರಿ ಬಣ್ಣದ ಬಗ್ಗೆ ವಿಶೇಷ ಮೋಹ ಹೊಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಕಚೇರಿ ಇರುವ ಸಚಿವಾಲಯದ ಕಟ್ಟಡಕ್ಕೆ ಈಗಾಗಲೇ ಕೇಸರಿ ಬಣ್ಣ ಬಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಅವರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲೆಲ್ಲ ಕೇಸರಿ ಬಣ್ಣ ಬಳಸಲು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರಿ ನಿಗಮದ ಬಸ್‌ಗಳೆಲ್ಲ ಈಗ ಕೇಸರಿಮಯವಾಗಿವೆ.

ಸರ್ಕಾರದ ಈ ಯತ್ನವನ್ನು ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷವು ಅಧಿಕಾರದಲ್ಲಿದ್ದಾಗ ಸರ್ಕಾರಿ ಕಟ್ಟಡಗಳು ಮತ್ತು ಬಸ್‌ಗಳಿಗೆ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ನೀಲಿ ಬಣ್ಣ ಬಳಿಯಲಾಗಿತ್ತು.

ಅಂತಹ ಆದೇಶ ಹೊರಡಿಸಿಲ್ಲ–ಶಿಕ್ಷಣಾಧಿಕಾರಿ

ಸರ್ಕಾರದ ಯೋಜನೆಗಳಿಗೆಲ್ಲಾ ಕೇಸರಿ ಬಣ್ಣ ವಿರೋಧ ಪಕ್ಷಗಳ ಆಕ್ಷೇಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT