ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಪರಿಶೀಲನೆಗೆ ಕೇಂದ್ರ ಸೂಚನೆ

ಅನುಷ್ಠಾನ ಸಮಸ್ಯೆ ಬಗ್ಗೆ ವರದಿಗೆ ಕಾನೂನು ಆಯೋಗಕ್ಕೆ ಸಲಹೆ
Last Updated 1 ಜುಲೈ 2016, 23:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದನ್ನು ಪರಿಶೀಲನೆ ನಡೆಸುವಂತೆ ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಪ್ರಸ್ತಾಪವಾದಾಗಲೆಲ್ಲ ವಿವಾದ ಸೃಷ್ಟಿಸುವ ಏಕರೂಪ ನಾಗರಿಕ ಸಂಹಿತೆ ಮತ್ತೆ ಚರ್ಚೆಗೆ ಬಂದಿದೆ.

ಈ ಕ್ರಮವನ್ನು ಬಿಜೆಪಿ ಸ್ವಾಗತಿಸಿದ್ದರೆ ಮುಸ್ಲಿಂ ಮಜ್ಲಿಸ್‌  ಮತ್ತು ಇತರ ಕೆಲವು ಸಂಘಟನೆಗಳು ವಿರೋಧಿಸಿವೆ. ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಹಿಂದಿನಿಂದಲೂ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸುತ್ತಿವೆ. ಈಗ ಬಿಜೆಪಿ ನೇತೃತ್ವದ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಹೇಗೆ ಜಾರಿ ಮಾಡಬಹುದು ಎಂದು ವರದಿ ನೀಡುವಂತೆ ಕಾನೂನು ಆಯೋಗವನ್ನು ಕೋರಿದೆ. ಕಾನೂನು ಆಯೋಗದ ವ್ಯಾಪ್ತಿಯು ಸಲಹೆ ನೀಡುವುದಕ್ಕಷ್ಟೇ ಸೀಮಿತ.

ಮುಸ್ಲಿಮರಲ್ಲಿ ಪ್ರಚಲಿತವಿರುವ ‘ಮೂರು ತಲಾಖ್‌’ ಪದ್ಧತಿಯ ಸಾಂವಿಧಾನಿಕ ಮೌಲ್ಯದ ಬಗ್ಗೆ ತೀರ್ಪು ನೀಡುವ ಮೊದಲು ಇದಕ್ಕೆ ಸಂಬಂಧಿಸಿ ವ್ಯಾಪಕ ಚರ್ಚೆ ನಡೆಯಬೇಕು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಹೇಳಿತ್ತು. ವಿಚ್ಛೇದನ ಪಡೆಯುವುದಕ್ಕಾಗಿ ಮುಸ್ಲಿಂ ಗಂಡಸರು ‘ಮೂರು ತಲಾಖ್‌’ ಪದ್ಧತಿಯನ್ನು ಮನಸೋ ಇಚ್ಛೆ ಬಳಸುತ್ತಿದ್ದಾರೆ ಎಂಬ ದೂರುಗಳ ಕಾರಣ ಸುಪ್ರೀಂ ಕೋರ್ಟ್‌ ಚರ್ಚೆಗೆ ಕರೆ ನೀಡಿತ್ತು.

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಂವಿಧಾನದಲ್ಲಿಯೇ ಪ್ರಸ್ತಾವ ಇದೆ. ಆದರೆ ವೋಟ್‌ ಬ್ಯಾಂಕ್‌ ರಾಜಕಾರಣದ ಕಾರಣದಿಂದ ಅದನ್ನು ವಿರೋಧಿಸಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್‌ ಆಕ್ಷೇಪ:   ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಏಕರೂಪ ನಾಗರಿಕ ಸಂಹಿತೆ ವಿಚಾರವನ್ನು ಮತ್ತೆ ಎತ್ತಿರುವುದಕ್ಕೆ ಬಿಜೆಪಿಯನ್ನು ಕಾಂಗ್ರೆಸ್‌ ಟೀಕಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಬಿಜೆಪಿ ಗಂಭೀರವಾಗಿದ್ದರೆ ರಾಜಕೀಯ ಪಕ್ಷಗಳ ನಡುವೆ ಸಹಮತ ಮೂಡಿಸಲು ಯತ್ನಿಸಬೇಕು. ಸಮಾಜದ ವಿವಿಧ ವರ್ಗಗಳಲ್ಲೂ ಒಮ್ಮತ ಮೂಡಿಸಬೇಕು ಎಂದು ಕಾಂಗ್ರೆಸ್‌ ಹೇಳಿದೆ.  ‘ಸಮಸ್ಯೆ ಇರುವುದು ಏನೆಂದರೆ ಬಿಜೆಪಿ ಈ ವಿಚಾರವನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಸ್ತಾಪಿಸುತ್ತಿರುವುದು’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT