ಕೊಚ್ಚಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ತನ್ನ 5 ಕೆ.ಜಿ. ಭಾರದ ಅಡುಗೆ ಅನಿಲ ಸಿಲಿಂಡರ್ಗಳನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳ ಕಿರಾಣಿ ಅಂಗಡಿ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟ ಮಾಡಲು ಕ್ರಮ ಕೈಗೊಂಡಿದೆ.
ಬೆಂಗಳೂರು, ಚೆನ್ನೈ, ಗೋರಖ್ ಪುರ, ಲಖನೌ ಹಾಗೂ ಅಲಿಗಡಗಳಲ್ಲಿ ಗುರುವಾರ ಇಂತಹ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಐಒಸಿ ಪ್ರಕಟಣೆ ತಿಳಿಸಿದೆ.
ಸಬ್ಸಿಡಿ ರಹಿತ 5 ಕೆಜಿಯ ಇಂತಹ ಎಲ್ಪಿಜಿ ಸಿಲಿಂಡರ್ಗಳನ್ನು ಮೊದಲ ಬಾರಿಗೆ ಖರೀದಿಸುವಾಗ ₨ 1,600 ರಿಂದ ₨ 1,700ರತನಕ ಬೆಲೆ ಇರಲಿದೆ. ಖಾಲಿ ಸಿಲಿಂಡರ್ ನೀಡಿ ತುಂಬಿದ ಸಿಲಿಂಡರ್ ಪಡೆಯುವ ಸಂದರ್ಭದಲ್ಲಿ ಕೇವಲ ಉತ್ಪಾದನಾ ವೆಚ್ಚವನ್ನು ಮಾತ್ರ ಪಡೆಯಲಾಗುವುದು.
ವಲಸೆ ಬಂದ ವಿದ್ಯಾರ್ಥಿಗಳಿಗೆ, ಐಟಿ, ಬಿಪಿಒ ಉದ್ಯೋಗಿಗಳಿಗೆ ಹಾಗೂ ನಿಗದಿತ ವೇಳೆ ಇಲ್ಲದ ನೌಕರರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಆರಂಭಿಕವಾಗಿ ಐದು ನಗರಗಳ 11 ಕಿರಾಣಿ ಅಂಗಡಿಗಳಲ್ಲಿ ಈ ಹೊಸ ಸೇವೆ ಆರಂಭಿಸಲಾಗಿದ್ದು ಬರುವ ದಿನಗಳಲ್ಲಿ ಇನ್ನೂ 50 ನಗರಗಳಿಗೆ ವಿಸ್ತರಣೆ ಮಾಡಲಾಗುವುದು.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಇಂತಹ ಸಿಲಿಂಡರ್ಗಳ ಮಾರಾಟವನ್ನು ಆಯ್ದ ಪೆಟ್ರೋಲ್ ಬಂಕ್ಗಳಲ್ಲಿ ಆರಂಭಿಸಲಾಗಿತ್ತು.