ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಮೀರಿದ ವಿವಾಹ ಬಂಧನ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಗಡಿಯಲ್ಲಿನ ಬೆಳವಣಿಗೆಗಳಿಂದ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯದ ಮೇಲೆ ಕರಿನೆರಳು ಆವರಿಸಿರಬಹುದು. ಆದರೆ, ಎರಡು ರಾಷ್ಟ್ರಗಳ ಜನರ ಸಂಬಂಧದ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ. ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಎರಡು ದೇಶಗಳ ಮನೆತನದ ಮಧ್ಯೆ ನಡೆದ ವಿವಾಹ ಸಮಾರಂಭ.

ಸಿಯಾಚಿನ್ ಹೀರೊ ಎಂದೇ ಖ್ಯಾತಿ ಗಳಿಸಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಪ್ರೇಮ್‌ನಾಥ್ ಹೂನ್ ಅವರ ಮೊಮ್ಮಗ ಕಣ್ವ ಪ್ರತಾಪ್ ಹೂನ್ (27) ಅವರು ಪಾಕಿಸ್ತಾನದ ಬಾಲೆ ಸಾಮಿಯಾ ಅವರನ್ನು ವರಿಸುವ ಮೂಲಕ ಗಡಿಯಾಚೆಗಿನ ಎರಡೂ ಕುಟುಂಬಗಳ ಸ್ನೇಹವನ್ನು ಸಂಬಂಧವಾಗಿ ಬದಲಿಸಿದ್ದಾರೆ.

ಲಾಹೋರ್ ನಿವಾಸಿ ಮಿಯಾ ಮೊಹಮ್ಮದ್ ಸಿದ್ದಿಕ್ ಮತ್ತು ಷಾಜಿಯಾ ಸಿದ್ದಿಕ್ ಅವರ ಪುತ್ರಿ ಸಾಮಿಯಾ, ದುಬೈನಲ್ಲಿದ್ದಾಗ ಕಣ್ವ ಅವರ ಪ್ರೇಮಪಾಶಕ್ಕೆ ಬಿದ್ದಿದ್ದರು. ಆ ಪ್ರೇಮ, ವಿವಾಹ `ಬಂಧನ'ಕ್ಕೆ ಕಾಲಿರಿಸುವಂತೆ ಮಾಡಿದೆ.

ವಧು ಮತ್ತು ವರ ಇಬ್ಬರು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಕಣ್ವ ಅವರು ಹಿಮಾಚಲ ಪ್ರದೇಶದ ಸನಾವರ್‌ದಲ್ಲಿರುವ ಪ್ರತಿಷ್ಠಿತ ಲಾರೆನ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಬಳಿಕ ಅಮೆರಿಕದಲ್ಲಿ ಎಂಬಿಎ ಮಾಡಿದ್ದಾರೆ. ಸದ್ಯ ಅವರು ತಮ್ಮ ಕುಟುಂಬ ಪಾಲುದಾರಿಕೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.

ಶುಕ್ರವಾರ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿರುವ ವಧು ಹಾಗೂ ವರ ಸಂಬಂಧಿಕರು ಪಾಲ್ಗೊಂಡಿದ್ದರು. ಕೆಲ ರಾಜಕೀಯ ಮುಖಂಡರು ಭಾಗವಹಿಸಿದ್ದರು.

`ಗಡಿಯಾಚೆಗಿನ ಸಂಬಂಧ ಸಂತಸ ಉಂಟು ಮಾಡಿದೆ. ಈ ರೀತಿಯ ಸಂಬಂಧಗಳಿಂದ ಎರಡು ರಾಷ್ಟ್ರಗಳ ಜನರು ಮೇಲಿಂದ ಮೇಲೆ ಭೇಟಿಯಾಗಲು ಸಹಾಯವಾಗಲಿದೆ' ಎಂದು ಜನರಲ್ ಹೂನ್ ತಿಳಿಸಿದ್ದಾರೆ.

ಭಾರತೀಯ ಸೇನೆಯ ಪಶ್ಚಿಮ ಕಮಾಂಡ್‌ನ ಕಮಾಂಡರ್ ಆಗಿ ಹೂನ್ ಸೇವೆ ಸಲ್ಲಿಸಿದ್ದಾರೆ. ಜಗತ್ತಿನ ಅತಿ ದೊಡ್ಡ ಯುದ್ಧಭೂಮಿ ಸಿಯಾಚಿನ್ ಮರು ವಶಪಡಿಸಿಕೊಳ್ಳಲು ಏಪ್ರಿಲ್ 13, 1984ರಲ್ಲಿ ನಡೆದ ಯುದ್ಧದಲ್ಲಿ ಸೇನೆಯ ಮುಂದಾಳತ್ವ ವಹಿಸಿಕೊಂಡಿದ್ದರು.

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯ ಕಿರಿಯ ಸಹೋದರ, ಸದ್ಯ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಷಹಬಾಜ್ ಷರೀಫ್ ಅವರ ಪುತ್ರಿ ಖಬೀಜಾ ಅವರೊಂದಿಗೆ ಕಣ್ವ ವಿವಾಹವಾಗಿದ್ದಾರೆ ಎನ್ನುವ ವದಂತಿಯನ್ನು ಹೂನ್ ಅಲ್ಲಗಳೆದಿದ್ದಾರೆ. `ಇದು ಸಂಪೂರ್ಣ ಸುಳ್ಳು. ಇಂತಹ ಸುದ್ದಿ ಹಬ್ಬಿಸುವ ಮುನ್ನ ಜನ ಸ್ವಲ್ಪ ಯೋಚಿಸಬೇಕು' ಎಂದು ಹೇಳಿದ್ದಾರೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಎನ್. ಹೂನ್ ಅವರು ಉತ್ತಮ ವಾಗ್ಮಿಯಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿಯಲ್ಲಿ ತಂಟೆ ತಕರಾರು ನಡೆದಾಗಲೆಲ್ಲ ಪಾಕ್ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಪಾಕ್ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ. ಈ ಕಾರಣದಿಂದಲೇ ಪಾಕ್ ವಿರೋಧಿ ಎಂಬ ಹಣೆಪಟ್ಟಿ ಅವರಿಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿಚಾರಗಳಿಂದ ಬಹಳ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಲವು ಉದ್ಯಮ ಸಂಸ್ಥೆಗಳ ಒಡೆಯರಾಗಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT