ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವಕ್ಕೆ ಅದ್ಧೂರಿ ಆರಂಭ

ರಜನಿಕಾಂತ್‌ಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ
Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಣಜಿ: ಹತ್ತು ದಿನಗಳ ಕಾಲ ನಡೆಯುವ 45ನೇ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಗುರು­ವಾರ ಸಂಜೆ ಇಲ್ಲಿ ಅದ್ಧೂರಿಯಾಗಿ ಆರಂಭ­ಗೊಂಡಿತು. ಪಣಜಿ ಹೊರವಲಯದ ತಾಲೆ­ಗಾಂವ್‌ ಪ್ರದೇಶ­ದಲ್ಲಿ ನಿರ್ಮಾಣ­ಗೊಂಡಿರುವ ಗೋವಾ ವಿಶ್ವವಿದ್ಯಾ
ನಿಲ­ಯದ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟರಾದ ಅಮಿತಾಭ್‌ ಬಚ್ಚನ್‌, ರಜನಿಕಾಂತ್‌, ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ,  ಮುಖ್ಯಮಂತ್ರಿ ಪರ್ಸೇಕರ್‌ ಮತ್ತಿತರ ಗಣ್ಯರ ಸಮ್ಮುಖ­ದಲ್ಲಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಸಾಂಪ್ರದಾಯಕ ದೀಪ ಬೆಳಗಿಸಿ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹಿರಿಯ ಚಿತ್ರ ಸಾಹಿತಿ ಗುಲ್ಜಾರ್‌, ಇರಾನ್‌ ಚಿತ್ರ ನಿರ್ದೇಶಕ ಮೊಹಸಿನ್‌ ಮಖ್‌ಮಲ್‌ ಬಫ್‌, ತೆಲುಗು ನಟ ಪವನ್‌ ಕಲ್ಯಾಣ್‌ , ಕನ್ನಡ ನಟಿ ರಾಗಿಣಿ ದ್ವಿವೇದಿ ಹಾಗೂ ಚೀನಾ­ದೇಶದ ಕೆಲ ನಟ ನಟಿಯರು ಇದ್ದರು. 

ಭಾರತೀಯರಿಗೆ ಕ್ರಿಕೆಟ್‌ ಮತ್ತು ಸಿನಿಮಾ ಧರ್ಮ ಇದ್ದಂತೆ. ಬಹು ಭಾಷೆಗಳ ಭಾರತೀಯ ಸಿನಿಮಾಗಳು ಕೋಟ್ಯಂತರ ಜನರಿಗೆ ಮನರಂಜನೆಯ ಜತೆಗೆ  ಶಿಕ್ಷಣವನ್ನೂ ನೀಡುತ್ತಿವೆ. ಸಾಂಪ್ರದಾಯಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯಲಾಗದ ಅನೇಕ ಸಂಗತಿಗಳನ್ನು ದೇಶದ ಜನರು ಸಿನಿಮಾಗಳ ಮೂಲಕ ಕಲಿಯುತ್ತಾರೆ. ಭಾರತೀಯ ಸಿನಿಮಾ­ಗಳು ಕಾಲಕಾಲಕ್ಕೆ ಬದಲಾಗುವ ಸಾಮಾ­ಜಿಕ ವ್ಯವಸ್ಥೆಯ ಎಲ್ಲ ಮುಖ­ಗಳನ್ನು ಜನರಿಗೆ ಪರಿಚಯಿಸುತ್ತಿವೆ ಎಂದು  ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅರುಣ್‌ ಜೇಟ್ಲಿ ನುಡಿದರು.

ಭಾರತೀಯ ಸಿನಿಮಾ ಶತಮಾ­ನೋತ್ಸವ ಆಚರಣೆ ಸಂದರ್ಭದಲ್ಲಿ ಕೈಗೊಂಡ ನಿರ್ಧಾರದಂತೆ  ರಾಷ್ಟ್ರೀಯ ಸಿನಿಮಾ ಹೆರಿಟೇಜ್‌  ಮಿಷನ್‌  ಸ್ಥಾಪನೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ನುಡಿದ ಜೇಟ್ಲಿ ಎಲ್ಲ ಭಾರತೀಯ ಸಿನಿಮಾಗಳನ್ನು ಮುಂದಿನ ತಲೆಮಾರಿನ ಜನರಿಗಾಗಿ ಸಂರಕ್ಷಿಸುವುದಾಗಿ ಭರವಸೆ ನೀಡಿದರು.

ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಉದ್ದನೆಯ ಭಾಷಣ­ಗಳಿಗೆ  ಅವಕಾಶ ಇಲ್ಲ. ಆದರೆ ಅಮಿತಾಭ್‌ ಬಚ್ಚನ್‌ ಅರ್ಧ ತಾಸು ಕಾಲ ಭಾರತೀಯ ಸಿನಿಮಾದ ಮಹತ್ವದ ಹೆಜ್ಜೆ­ಗಳನ್ನು ಪ್ರೇಕ್ಷಕರ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ಭಾರತೀಯ ಸಿನಿಮಾ ಎಂದರೆ ಹಿಂದಿ ಸಿನಿಮಾಗಳು ಎಂಬ ಧಾಟಿಯಲ್ಲಿತ್ತು ಅವರ ಭಾಷಣ. ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ  ರೋಜಾ ಹೊರತುಪಡಿಸಿ ಉಳಿದ ಯಾವುದೇ ಭಾರತೀಯ ಸಿನಿಮಾಗಳ ಬಗ್ಗೆ ಅವರು ಚಕಾರ ಎತ್ತಲಿಲ್ಲ.

ರಜನಿಕಾಂತ್‌ಗೆ ಸನ್ಮಾನ: ಉದ್ಘಾಟನಾ ಸಮಾರಂಭ­ದಲ್ಲಿ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿ­ಕಾಂತ್‌ ಅವರಿಗೆ ಅವರ ಜೀವಮಾನದ ಸಾಧನೆಗಾಗಿ ಭಾರ­ತೀಯ ಸಿನಿಮಾ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವ ಜೇಟ್ಲಿ, ರಜನಿಕಾಂತ್‌ ಅವರಿಗೆ ಶಾಲು ಹೊದಿಸಿ, ನಗದು ಪುರಸ್ಕಾರದ ಚೆಕ್‌ ನೀಡಿದರೆ, ಅಮಿತಾಭ್‌ ಬಚ್ಚನ್‌ ಸ್ಮರಣಿಕೆ ವಿತರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಲಯಾಳ ಚಲನಚಿತ್ರ ಕಲಾವಿದೆ ಶೋಭನಾ ಮತ್ತು ನಟ ವಿನೀತ್‌ ತಂಡದವರು ನಡೆಸಿಕೊಟ್ಟ ಹಳೆಯ ಸಿನಿಮಾ ಹಾಡು­ಗಳ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ಉದ್ಘಾಟನಾ ಸಮಾರಂಭದ ನಡೆದ ಒಳಾಂಗಣ ಕ್ರೀಡಾಂಗಣದಲ್ಲಿ ಎಂಟು ಸಾವಿರ ಜನರು ಕುಳಿತು ಕಾರ್ಯ­ಕ್ರಮ ನೋಡುವ ಅವಕಾಶವಿದೆ. ಹತ್ತು ತಿಂಗಳ ಅವಧಿಯಲ್ಲಿ ಈ ಕ್ರೀಡಾಂಗಣ ನಿರ್ಮಾಣ ಮಾಡ­ಲಾಗಿರು­ವುದು ಗೋವಾ ಸರ್ಕಾದ ಹೆಗ್ಗಳಿಕೆ.

ನೂರಾರು ಜನರಿಗೆ ಪ್ರವೇಶ ಸಿಗಲಿಲ್ಲ. ಕೆಲವು ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಉದ್ಘಾಟನಾ ಚಿತ್ರದ ಪ್ರದರ್ಶನವನ್ನು ಪಣಜಿಯ ಕಲಾ ಅಕಾಡೆಮಿ­ಯಲ್ಲಿ ವ್ಯವಸ್ಥೆ ಮಾಡ­ಲಾಗಿತ್ತು. ತಾಲೆಗಾಂವ್‌ನ ಕಾರ್ಯ­ಕ್ರಮ ಮುಗಿಸಿ ಕಲಾ ಅಕಾಡೆಮಿಗೆ ಬರು­ವುದು ಅನೇಕರಿಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT