ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಶಾರುಖ್ ಖಾನ್

ಡ್ರಮ್ಸ್‌ ಆಫ್‌ ಇಂಡಿಯಾ ನೃತ್ಯ ಕಾರ್ಯಕ್ರಮದ ಮೂಲಕ ಉದ್ಘಾಟನೆ
Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಣಜಿ: ಭಾರತದ 48ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನೆ ಸೋಮವಾರ ಸಂಜೆ ವಿಭಿನ್ನ ರೀತಿಯಲ್ಲಿ ನೆರವೇರಿತು.

ಪಣಜಿ ಹೊರ ವಲಯದ ತಾಲೇಗಾವ್‌ನ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿ ರೂಪಿಸಿದ್ದ ಡ್ರಮ್ಸ್‌ ಆಫ್‌ ಇಂಡಿಯಾ ನೃತ್ಯ ಕಾರ್ಯಕ್ರಮದ ಮೂಲಕ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಆರಂಭವಾಯಿತು.

ನೃತ್ಯದ ಕೊನೆಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡ ಶಾರುಖ್‌ ಖಾನ್‌ ಎಲ್ಲರನ್ನೂ ಸ್ವಾಗತಿಸಿ, ಶುಭ ಕೋರಿ ಅಸಂಪ್ರದಾಯಕ ರೀತಿಯಲ್ಲಿ ಉದ್ಘಾಟನಾ ಭಾಷಣ ಮಾಡಿದರು.

ಕಥೆ ಹೇಳುವುದು ಮತ್ತು ಕಥೆ ಕೇಳುವುದೇ ಸಿನಿಮಾ. ವಿಭಿನ್ನ ಸಿದ್ಧಾಂತಗಳ ಹಲವಾರು ಪ್ರತಿಭಾವಂತರು ಒಟ್ಟಾಗಿ ದುಡಿದು ಸಿನಿಮಾ ಎಂಬ ಮ್ಯಾಜಿಕ್‌ ರೂಪಿಸುತ್ತಿದ್ದಾರೆ. ಕಥೆ ಹೇಳುವ ಮತ್ತು ಕೇಳುವ ಪ್ರಕ್ರಿಯೆ ಜಗತ್ತಿನ ಜನರನ್ನು ಒಂದುಗೂಡಿಸುತ್ತಿದೆ. ಸಿನಿಮಾ, ಭಾಷೆ ಮತ್ತು ದೇಶಗಳ ಗಡಿಗಳನ್ನು ಮೀರಿದೆ ಎಂದು ಶಾರುಖ್‌ ಚುಟುಕಾಗಿ ನುಡಿದರು. ಉಳಿದಂತೆ ಅವರ ಮಾತು ಗೋವಾ ಚಿತ್ರೋತ್ಸವದ ಮಹತ್ವದ ಕುರಿತಾಗಿತ್ತು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌, ಕೆನಡಾ ಸರ್ಕಾರದ ಕೌನ್ಸೆಲ್‌ ಜನರಲ್‌ ಗಾರ್ಡನ್‌ ರೀವ್‌, ಅಂತರ ರಾಷ್ಟ್ರೀಯ ಸಿನಿಮಾಗಳ ಆಯ್ಕೆ ಸಮಿತಿ ಅಧ್ಯಕ್ಷ ಮುಜಫರ್‌ ಅಲಿ, ನಟ ಶಾಹಿದ್‌ ಕಪೂರ್‌, ನಟಿ ಶ್ರೀದೇವಿ, ಇರಾನ್‌ ದೇಶದ ಚಿತ್ರ ನಿರ್ದೇಶಕ ಮಜೀದ್‌ ಮಜಿದಿ, ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಮತ್ತಿತರರು ಮಾತನಾಡಿದರು. ಎಲ್ಲರ ಮಾತುಗಳು ಸಿನಿಮಾ ಹಾಗೂ ಗೋವಾ ಚಿತ್ರೋತ್ಸವ ಕುರಿತ ಪ್ರಶಂಸೆಗೆ ಮೀಸಲಾಗಿತ್ತು.

ನೃತ್ಯ ಕಲಾವಿದೆಯರಾದ ಮಯೂರಿ ಉಪಾಧ್ಯಾಯ ಮತ್ತು ಮಾಧುರಿ ಉಪಾಧ್ಯಾಯ ಅವರ ತಂಡದವರು ನಡೆಸಿಕೊಟ್ಟ ಭಾರತೀಯ ಉತ್ಸವಗಳ ನೃತ್ಯ ರೂಪಕ ಮತ್ತು ಕಳೆದ ಒಂದು ವರ್ಷದ ಅವಧಿಯಲ್ಲಿ ಅಗಲಿದ ದೇಶದ ಹಲವಾರು ಸಿನಿಮಾ ಗಣ್ಯರನ್ನು ತೆರೆಯ ಮೇಲೆ ತೋರಿಸಿ ಸ್ಮರಿಸುವ ಗೀತ ರೂಪಕ ಗಮನ ಸೆಳೆಯಿತು.

ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹ, ಹಿಂದಿ ನಟ ನಾನಾ ಪಾಟೇಕರ್‌, ಅನುಪಮ್‌ ಖೇರ್‌ ಸೇರಿದಂತೆ ಹಲವಾರು ಸಿನಿಮಾ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT