ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟಿನಾಚೆಯ ಹೊಸತನಕ್ಕೆ ತುಡಿಯುತ್ತಿದ್ದ ಮೇರು ಪ್ರತಿಭೆ

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನನಗೆ ಬಾಲಮುರಳೀಕೃಷ್ಣ ಅವರ ಒಡನಾಟ ಲಭಿಸಿದ್ದು 70ರ ದಶಕದ ಕೊನೆಯಲ್ಲಿ. ಆಗ ನಾನು ಚಿಟ್ಟಿಬಾಬು ಅವರ ಬಳಿ ವೀಣಾವಾದನ ಕಲಿಯಲು ಹೋಗುತ್ತಿದ್ದೆ. ಚಿಟ್ಟಿಬಾಬು ಮತ್ತು ಬಾಲಮುರಳೀಕೃಷ್ಣ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು. ನಮ್ಮ ಗುರುಗಳು ಅವರನ್ನು ಹಿರಿಯಣ್ಣ ಅಂದುಕೊಂಡಿದ್ದರು.

ಅನಂತರ ನನಗೆ ಅವರ ಜತೆ ನಿಕಟ ಒಡನಾಟ ಬೆಳೆಯಿತು. ಅವರ ಜತೆ ತುಂಬಾ ಧ್ವನಿಸುರುಳಿಗಳಲ್ಲಿ ವೀಣೆ ನುಡಿಸಿದ್ದೇನೆ. ಎಂಬತ್ತರ ದಶಕದಲ್ಲಿ ಅವರು ಮುತ್ತುಸ್ವಾಮಿ ದೀಕ್ಷಿತರ ನವಗ್ರಹ ಕೃತಿಗಳ ಸಂಯೋಜನೆ ಮಾಡಿ ಧ್ವನಿಮುದ್ರಿಸಿದರು. ಆಗ ನಾನೇ ವೀಣೆ ನುಡಿಸಿದೆ. ಅದು ಅವರ ಜತೆ ವೀಣೆ ನುಡಿಸಿದ ಮೊದಲ ಕ್ಯಾಸೆಟ್‌. 

ತುಂಬಾ ಶಿಸ್ತಿನ ಮನುಷ್ಯ. ಬೆಳಿಗ್ಗೆ 8 ಗಂಟೆಗೆ ಧ್ವನಿಮುದ್ರಣ ಇದೆ ಎಂದರೆ 7.20ಕ್ಕೆ ಸಿದ್ಧರಾಗಿ ಕೂತಿರುತ್ತಿದ್ದರು. ಎಂಟು ಗಂಟೆಗೆ ಶುರು ಆಗಬೇಕು ಎಂದರೆ ಎಂಟು ಗಂಟೆಗೇ ಶುರು ಆಗಬೇಕು. ಐದು ಗಂಟೆಗೆ ಮುಗಿಯಬೇಕು ಎಂದರೆ ಐದು ಗಂಟೆಗೆ ಮುಗಿಯಲೇ ಬೇಕು. ಅದಕ್ಕಾಗಿ ಹಿಂದಿನ ದಿನವೇ ತಾಲೀಮು ಮಾಡಿಸಿ ಸಜ್ಜುಗೊಳಿಸುತ್ತಿದ್ದರು. ಎಲ್ಲರಿಗೂ ಸ್ಕ್ರಿಪ್ಟ್‌ ಕೊಟ್ಟಿರುತ್ತಿದ್ದರು. ನುಡಿಸಿ ಮುಗಿದ ನಂತರ ಅದನ್ನು ವಾಪಸ್‌ ಪಡೆದುಕೊಳ್ಳುತ್ತಿದ್ದರು.

ಅವರು ಮಾತನಾಡುವುದೇ ಕಡಿಮೆ. ಮಾತನಾಡಿದರೆ ಅದು ಸಂಗೀತದ ಕುರಿತಾಗಿಯೇ ಇರುತ್ತಿತ್ತು. ಉಳಿದ ಸಮಯದಲ್ಲಿ ಟಿವಿ ನೋಡಿಕೊಂಡು ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಇರುತ್ತಿದ್ದರು. ಅವರ ಸ್ವಭಾವವೇ ಹಾಗೆ.

ಅವರಿಗೆ ಸಿನಿಮಾಗಳನ್ನು ನೋಡುವ ವ್ಯಾಮೋಹ ತುಂಬ ಇತ್ತು. ಸಂಗೀತ ಬಿಟ್ಟರೆ ಅವರು ಸಿನಿಮಾ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದರು. ಅವರ ಮನೆಯಲ್ಲಿ ನಾವಿಬ್ಬರೂ ಜತೆ ಕೂತು ಜೇಮ್ಸ್‌ ಬಾಂಡ್‌ ಸಿನಿಮಾಗಳನ್ನು ನೋಡಿದ್ದೇವೆ. ಅದರಲ್ಲಿಯೂ ಇಂಗ್ಲಿಷ್‌ ಥ್ರಿಲ್ಲರ್‌ಗಳೆಂದರೆ ಅವರಿಗೆ ತುಂಬ ಇಷ್ಟ.

ಬೆಂಗಳೂರಿನಲ್ಲಿ ಸಂಗೀತ ಕಛೇರಿ ನಡೆಸುವಾಗಲೆಲ್ಲ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕರ್ನಾಟಕ ಸಂಗೀತದಲ್ಲಿ ಡೈನಾಮಿಕ್‌ ಆಗಿ ಯೋಚಿಸುತ್ತಿದ್ದ ಮನುಷ್ಯ ಅವರು. ಹೊಸ ರಾಗಗಳ ಪ್ರಯೋಗ ಆಗಲಿ, ಹೊಸ ತಾಳಗಳ ಪ್ರಯೋಗವಾಗಲಿ ತುಂಬಾ ಆಳವಾಗಿ ಯೋಚಿಸಿ ಚರ್ಚಿಸುತ್ತಿದ್ದರು.

ಪುರಂದರದಾಸರ ಅನೇಕ ಕೃತಿಗಳಿಗೆ ಸ್ವರಮಟ್ಟನ್ನು ಹಾಕಿ ಜನಪ್ರಿಯಗೊಳಿಸಿದರು. ಕರ್ನಾಟಕ ಸಂಗೀತದ ಬಹಳ ಕಛೇರಿಗಳು ಕರ್ನಾಟಕದಲ್ಲಿಯೇ ನಡೆಯುತ್ತಿದ್ದರಿಂದ ನಮ್ಮ ರಾಜ್ಯದ ಜತೆ ಅವರ ಒಡನಾಟ ನಿಕಟವಾಗಿಯೇ ಇತ್ತು. ಇಲ್ಲೊಂದು ಸಂಗೀತ ಸಂಸ್ಥೆಯನ್ನು ಪ್ರಾರಂಭಿಸಬೇಕು ಎಂಬ ಬಯಕೆಯೂ ಅವರಿಗಿತ್ತು. ಅದಕ್ಕಾಗಿ ಸರ್ಕಾರದ ಜತೆ ತುಂಬ ಸಲ ಮಾತನಾಡಿದ್ದು ನನಗೆ ಗೊತ್ತು. ಯಾಕೋ ಅದು ಫಲ ಕೊಡಲಿಲ್ಲ. ಇಲ್ಲಿನ ಅನೇಕ ಸಂಘ ಸಂಸ್ಥೆಗಳ ಜತೆಗೂ ಅವರು ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದರು.

ದೊರೆಸ್ವಾಮಿ ಅಯ್ಯಂಗಾರ್ ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲ ಸಂಗೀತಗಾರರ ಜತೆಗೂ ಅವರ ಒಡನಾಟ ಇತ್ತು. ಪಕ್ಕವಾದ್ಯದವರ ಜತೆ ವಿಶೇಷ ಆಪ್ತತೆ ಅವರಿಗಿತ್ತು.

ಬಾಲಮುರಳೀಕೃಷ್ಣ ಯಾರ ಜತೆ ಬೇಕಾದರೂ ಹಾಡಲಿಕ್ಕೆ ಸಿದ್ಧರಿದ್ದರು. ಅದು ಅವರ ಧನಾತ್ಮಕ ಗುಣ. ಯಾವುದೋ ಚಿಕ್ಕ ಹುಡುಗರು ಪಕ್ಕವಾದ್ಯ ನುಡಿಸುತ್ತಾರೆಂದರೂ ಯಾವುದೇ ಬಿಗುಮಾನ ಇಲ್ಲದೇ ಪ್ರೋತ್ಸಾಹಿಸುತ್ತಿದ್ದರು. ವೇದಿಕೆಯ ಮೇಲೂ ಸಹಕಲಾವಿದರನ್ನು ಸಾಕಷ್ಟು ಪ್ರೋತ್ಸಾಹಿಸುತ್ತಿದ್ದರು.

ಪ್ರಯೋಗಶೀಲ ಮನಸ್ಸು
ತುಂಬಾ ಪ್ರಯೋಗಶೀಲ ಮನಸ್ಸು ಅವರದು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಯಾವಾಗಲೂ ಸಿದ್ಧಚೌಕಟ್ಟಿನ ಆಚೆಯೇ ಯೋಚಿಸುತ್ತಿದ್ದ ಶ್ರೇಷ್ಠ ಸಂಗೀತಗಾರ.
ನನ್ನ ಮೇಲಂತೂ ಅವರ ಪ್ರಭಾವ ತುಂಬ ದೊಡ್ಡದು. ತಾಂತ್ರಿಕವಾಗಿ ಎಷ್ಟೇ ಪರಿಣತಿ ಹೊಂದಿದ್ದರೂ ಸಂಗೀತ ಜನರನ್ನು ಮುಟ್ಟುವುದು ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. ಈ ದೃಷ್ಟಿಯಲ್ಲಿ ಅವರು ನೀಡಿದ ಮಾರ್ಗದರ್ಶನ ನನ್ನ ಸಂಗೀತ ಬದುಕಿನಲ್ಲಿ ಅತ್ಯಂತ ಅಮೂಲ್ಯವಾದದ್ದು.

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕೊಡುಗೆ 
ಒಟ್ಟಾರೆ ಕರ್ನಾಟಕ ಸಂಗೀತಕ್ಕೆ ಅವರು ಅವರು ನೀಡಿದ ಕೊಡುಗೆಗಳನ್ನು ಎರಡು ರೀತಿಯಲ್ಲಿ ಗುರ್ತಿಸಬಹುದು. ಒಂದು ಸಂಗೀತ ಸಂಯೋಜಕರಾಗಿ, ಇನ್ನೊಂದು ಶ್ರೇಷ್ಠ ಗಾಯಕರಾಗಿ.

ಗಾಯಕರಾಗಿ ಏನೆಲ್ಲ ರಿಸ್ಕ್‌ಗಳನ್ನು ತೆಗೆದುಕೊಳ್ಳಬಹುದು, ಧೈರ್ಯವಾಗಿ ಮುನ್ನುಗ್ಗಬಹುದು ಎಂಬುದನ್ನು ತೋರಿಸಿ ಕರ್ನಾಟಕ ಸಂಗೀತಕ್ಕೆ ಹೊಸತನ ನೀಡಿದವರಲ್ಲಿ ಅವರು ಪ್ರಮುಖರು. ಸಂಗೀತ ಸಂಪ್ರದಾಯದಲ್ಲಿ ಏನು ಹೇಳಿದ್ದಾರೆ ಅದನ್ನು ಪ್ರಶ್ನಿಸಿ, ಪರೀಕ್ಷಿಸಿದವರು ಅವರು. ನಾಲ್ಕೇ ಸ್ವರದಲ್ಲಿ ರಾಗ ಮಾಡಬಾರದು ಎಂದಿರುವುದನ್ನು ‘ಯಾಕೆ ಮಾಡಬಾರದು? ನಾನು ಮಾಡಿತೋರಿಸುತ್ತೇನೆ’ ಎಂದು ಸಿದ್ಧಪಡಿಸಿ ತೋರಿಸುವ ದಿಟ್ಟತನ ಅವರಲ್ಲಿತ್ತು. ಸಂಯೋಜಕರಾಗಿಯೂ ಅದ್ಭುತವಾದ ಕೆಲಸ ಮಾಡಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿಯೂ ಅವರು ಹಾಡಿದ್ದಾರೆ. ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಸಿನಿಮಾ ಸಂಗೀತದವರು ನಮಗಿಂತ ತುಂಬಾ ಚಲನಶೀಲ ಮತ್ತು ಜೀವಂತವಾದದ್ದು. ಅವರೇ ಹೆಚ್ಚು ಸೃಜಶೀಲ ಮತ್ತು ಪ್ರಯೋಗಶೀಲರು. ಯಾಕೆಂದರೆ  ರಾಗ ಮಿಶ್ರಣಗಳನ್ನು ಪರಿಚಯಿಸಿದ್ದೇ ಅವರು’ ಎಂದು ಯಾವಾಗಲೂ ಹೇಳುತ್ತಿದ್ದರು.

ಬೇರೆಬೇರೆ ಪ್ರಕಾರದ ಸಂಗೀತಗಾರರ ಜತೆ ತುಂಬ ಜುಗಲ್‌ಬಂದಿಗಳನ್ನೂ ಮಾಡುತ್ತಿದ್ದರು. ಭೀಮಸೇನ ಜೋಶಿ, ಜಸ್‌ರಾಜ್‌ ಅವರ ಜತೆಗೆಲ್ಲ ಜುಗಲ್‌ಬಂದಿ ಮಾಡಿದ್ದಾರೆ.
ಎಲ್ಲ ಪ್ರಕಾರದ ಸಂಗೀತಕ್ಕೂ ತಮ್ಮ ಕೊಡುಗೆಯನ್ನು ನೀಡಿರುವುದಷ್ಟೇ ಅಲ್ಲದೇ, ಆ ಪ್ರಕಾರಕ್ಕೇ ಹೊಸತನವನ್ನು ಪರಿಚಯಿಸಿದ ಏಕೈಕ ಸಂಗೀತಗಾರ ಅವರು.
ಯಾವ ಸಂಗೀತ ಆದರೂ ಸರಿ, ಅದು ಮಧುರವಾಗಿರಬೇಕು. ಜನರನ್ನು ಮುಟ್ಟಬೇಕು ಎಂಬ ತೆರೆದ ಮನಸ್ಸು ಅವರದಾಗಿತ್ತು.

ನನ್ನ ಸಂಗೀತ ಬದುಕಿನ ಒಂದು ಭಾಗವೇ ಆಗಿದ್ದರು ಅವರು. ಅಷ್ಟೇ ಅಲ್ಲ, ಭಾರತೀಯ ಸಂಗೀತ ಜಗತ್ತಿನ ಮಹತ್ವದ ಭಾಗವೂ ಆಗಿದ್ದರು.
ಅವರಂಥ ಸಂಗೀತಗಾರರು ಎಷ್ಟು ವರ್ಷ ನಮ್ಮೊಟ್ಟಿಗಿದ್ದರೂ ಸಾಲದು. ಆದರೆ ಅವರನ್ನು ಕಳೆದುಕೊಂಡಿದ್ದೇವೆ. ಇಂದು ಕರ್ನಾಟಕ ಸಂಗೀತ ಕ್ಷೇತ್ರವು ಓರ್ವ ಮೇಧಾವಿಯನ್ನು ಕಳೆದುಕೊಂಡಿದೆ. ಇದು ದುಃಖದ ದಿನ. ಅವರನ್ನು ಕಳೆದುಕೊಂಡಿದ್ದರೂ ಅವರ ಸಂಗೀತ ನಮ್ಮ ಜತೆಗಿರುತ್ತದೆ ಎಂಬುದೊಂದೇ ಸಮಾಧಾನ.

ಪ್ರಾತ್ಯಕ್ಷಿಕೆಯೆಂಬ ಸಂಗೀತ ಪರೀಕ್ಷೆ!
ಎಂಟು ಹತ್ತು ವರ್ಷದ ಹಿಂದೆ ಅವರಿಗೆ ಚೌಡಯ್ಯ ಪ್ರಶಸ್ತಿ ಕೊಟ್ಟೆವು. ಆಗ ನಾನು ಅವರಿಗೆ ಫೋನ್‌ ಮಾಡಿ ಸಂಗೀತದ ಬಗ್ಗೆ ಒಂದು ಪ್ರಾತ್ಯಕ್ಷಿಕೆ ಕೊಡಿ ಎಂದು ಕೇಳಿಕೊಂಡೆ. ಸಾಮಾನ್ಯವಾಗಿ ಅವರು ಇಂಥ ಉಪನ್ಯಾಸ–ಪ್ರಾತ್ಯಕ್ಷಿಕೆಗಳನ್ನು ನೀಡಲು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ನಾನು ಕರೆದಿದ್ದೇನೆ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದರು.

‘ಯಾವ ವಿಷಯದ ಕುರಿತು ಪ್ರಾತ್ಯಕ್ಷಿಕೆ ನೀಡಬೇಕು’ ಎಂದು ಕೇಳಿದರು. ನಾನು ‘ನಿಮಗಿಷ್ಟ ಬಂದ ವಿಷಯದ ಕುರಿತು ಮಾತನಾಡಿ’ ಎಂದೆ. ಆದರೆ ಅವರು ‘ಇಷ್ಟೆಲ್ಲ ಯೋಜಿಸಿರುವ ನೀನು ನಾನು ಯಾವ ವಿಷಯದ ಕುರಿತು ಮಾತನಾಡಬೇಕು ಎಂಬ ಕುರಿತೂ ಯೋಚಿಸಿರುತ್ತೀಯಾ. ಹೇಳು’ ಎಂದು ಕೇಳಿದರು. ನಾನು ‘ಸ್ವರ ಪ್ರಸ್ತಾರದ ಸೌಂದರ್ಯಶಾಸ್ತ್ರ; ಕರ್ನಾಟಕ ಸಂಗೀತದಲ್ಲಿ ಸ್ವರವಿಸ್ತಾರ’ ಎಂಬ ವಿಷಯದ ಕುರಿತು ಮಾತನಾಡುವಂತೆ ಕೇಳಿಕೊಂಡೆ. ಅವರು ಒಪ್ಪಿದರು.

ಅವತ್ತು ಯಾವ ಹಿರಿಯ ಸಂಗೀತಗಾರರೂ ಅವರಿಗಿಂತ ಮುಂಚೆ ಉಪನ್ಯಾಸ –ಪ್ರಾತ್ಯಕ್ಷಿಕೆ ನೀಡಲು ಸಿದ್ಧರಿರಲಿಲ್ಲ. ಎಲ್ಲರೂ ‘ಗುರೂಜಿಗಿಂತ ಮೊದಲು ನಾವು ಮಾಡುವುದಿಲ್ಲ’ ಎಂದುಬಿಟ್ಟರು. ಆದ್ದರಿಂದ ಅವರದೇ ಮೊದಲನೇ ಪ್ರಾತ್ಯಕ್ಷಿಕೆಯಾಗಿತ್ತು.

‘ನಾನು ನಾಲ್ಕನೇ ತರಗತಿ ಓದಿದ್ದು. ಕಾಲೇಜಿಗೂ ಹೋಗಿಲ್ಲ. ಆದರೆ ಸುಮಾ ಇಂದು ನನ್ನನ್ನು ಪರೀಕ್ಷೆ ಮಾಡುತ್ತಿದ್ದಾರೆ’ ಎಂದು ಹೇಳಿಯೇ ಉಪನ್ಯಾಸಕ್ಕೆ ತೊಡಗಿದರು.
ಅವತ್ತು ಅವರು ವೇದಿಕೆ ಮೇಲೆ ಒಂದೇ ಒಂದು ಪೇಪರ್‌ ತಂದಿರಲಿಲ್ಲ. ನಾನು ಪಕ್ಕವಾದ್ಯ ಬೇಕಾ ಎಂದು ಕೇಳಿದಾಗ ‘ಬೇಡ ಬೇಡ, ಏನೂ ಬೇಡ’ ಎಂದು ಹೇಳಿ ಎರಡು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ನೀಡಿದರು.

ಹೇಗೆ ಸ್ವರಪ್ರಸ್ತಾರವನ್ನು ರಸಪೂರ್ಣವಾಗಿ ಹಾಕಬಹುದು ಎಂಬುದನ್ನು ಎಷ್ಟು ಅದ್ಭುತವಾಗಿ ವಿವರಿಸಿದರು ಎಂದರೆ ಅವರು ಎಂಥ ಮೇಧಾವಿ ಎಂಬುದಕ್ಕೆ ಅದು ನಿದರ್ಶನದಂತಿತ್ತು.
ಅದು ನನ್ನ ಪಾಲಿನ ಸ್ಮರಣೀಯ ಗಳಿಗೆ.

ಮುರಳೀಕೃಷ್ಣ  ಬಾಲಮುರಳೀಕೃಷ್ಣ ಆಗಿದ್ದು...
*ಜನನ: ಜುಲೈ 6, 1930ರಂದು. ಅವಿಭಜಿತ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶಂಕರಗುಪ್ತಂನಲ್ಲಿ.
*ತಂದೆ ಪಟ್ಟಾಭಿರಾಮಯ್ಯ, ತಾಯಿ ಸೂರ್ಯಕಾಂತಮ್ಮ. ಇಬ್ಬರೂ ಸಂಗೀತದಲ್ಲಿ ಹೆಸರು ಮಾಡಿದ್ದರು.
*ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಾಲಮುರಳೀಕೃಷ್ಣ, ತಂದೆಯ ಆಸರೆಯಲ್ಲಿ ಬೆಳೆದರು.
*ಪರುಪಲ್ಲಿ ರಾಮಕೃಷ್ಣಯ್ಯ ಪಂತುಲು ಅವರಲ್ಲಿ ಸಂಗೀತಾಭ್ಯಾಸ.
*ಎಂಟನೆಯ ವಯಸ್ಸಿನಲ್ಲಿದ್ದಾಗ ಬಾಲಮುರಳೀಕೃಷ್ಣ ಅವರು ತ್ಯಾಗರಾಜರ ಆರಾಧನಾ ಕಾರ್ಯಕ್ರಮವೊಂದರಲ್ಲಿ ಸಂಗೀತ ಕಛೇರಿ ನಡೆಸಿದರು.
*ಹರಿಕಥಾ ವಿದ್ವಾಂಸ ಸೂರ್ಯನಾರಾಯಣ ಮೂರ್ತಿ ಭಾಗವತರ್‌ ಅವರು ಮುರಳೀಕೃಷ್ಣ ಅವರ ಪ್ರತಿಭೆಯನ್ನು ಕಂಡು, ‘ಬಾಲಮುರಳೀಕೃಷ್ಣ’ ಎಂದು ಕರೆದರು.
*15ನೇ ವಯಸ್ಸಿಗೇ 72 ಮೇಳಕರ್ತ ರಾಗಗಳಲ್ಲಿ ಪ್ರಾವೀಣ್ಯ ಗಳಿಸಿದ್ದರು.
*ಬಾಲಮುರಳೀಕೃಷ್ಣ ಅವರು ವಿಶ್ವದಾದ್ಯಂತ 25 ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಪ್ರಶಸ್ತಿಗಳು
*1971 : ಪದ್ಮಶ್ರೀ ಪ್ರಶಸ್ತಿ
*1976 : ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ
(ಹಿಮಾದ್ರಿ ಸುತೆ ಪಾಹಿಮಾಂ– ಹಂಸಗೀತೆ )
*1978 : ಸಂಗೀತ ಕಲಾನಿಧಿ ಪ್ರಶಸ್ತಿ
*1980 : ಶ್ರೀ ರಾಜಲಕ್ಷ್ಮಿ ಪ್ರತಿಷ್ಠಾನ ನೀಡುವ ರಾಜಲಕ್ಷ್ಮಿ ಪ್ರಶಸ್ತಿ
*1987 : ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ
(ಮಧ್ವಾಚಾರ್ಯ ಚಿತ್ರ)
*1991 : ಪದ್ಮ ವಿಭೂಷಣ ಪ್ರಶಸ್ತಿ
*2005 : ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆ ತೋರಿದ್ದಕ್ಕೆ ಫ್ರಾನ್ಸ್‌ ಸರ್ಕಾರದಿಂದ ಗೌರವ

ಲೇಖಕಿ– ಪ್ರಸಿದ್ಧ ವೀಣಾವಾದಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT