ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಲೋಕಪಾಲ್‌ ‘ಮಹಾಜೋಕ್‌ಪಾಲ್‌’

ಕೇಜ್ರಿವಾಲ್‌, ಎಎಪಿ ವಿರುದ್ಧ ಪ್ರಶಾಂತ್‌ ಭೂಷಣ್‌ ವಾಗ್ದಾಳಿ
Last Updated 28 ನವೆಂಬರ್ 2015, 19:28 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಸಿದ್ಧಪಡಿಸಿದ ಜನಲೋಕಪಾಲ್‌ ಮಸೂದೆ ಅತ್ಯಂತ ದುರ್ಬಲ ರೂಪದ ‘ಮಹಾಜೋಕ್‌ಪಾಲ್‌’ ಮಸೂದೆ ಎಂದು ಪಕ್ಷದ ಉಚ್ಚಾಟಿತ ನಾಯಕ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಶನಿವಾರ ಇಲ್ಲಿ ಲೇವಡಿ ಮಾಡಿದರು.

ನೋಯ್ಡಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಅಣ್ಣಾ ಚಳವಳಿ ಕಾಲಕ್ಕೆ ರೂಪಿಸಲಾದ ಜನಲೋಕಪಾಲ್‌ನ ರೂಪುರೇಷೆಗಳನ್ನು  ದುರ್ಬಲಗೊಳಿಸುವ ಮೂಲಕ ಜನರಿಗೆ ಭಾರಿ ವಂಚನೆ ಮಾಡುತ್ತಿದ್ದಾರೆ’ ಎಂದು ದೂರಿದರು.

ದೆಹಲಿ ಸರ್ಕಾರ ಇನ್ನೂ ಬಹಿರಂಗಗೊಳಿಸದ ಈ ಮಸೂದೆಯ ಕೆಲವು ಅಂಶಗಳನ್ನು ಪತ್ರಕರ್ತರ ಮುಂದೆ ಓದಿದ ಅವರು, ತಮ್ಮನ್ನು ಪ್ರಶ್ನಿಸದೇ ಇರುವಂತಹ ವಾತಾವರಣ ಸೃಷ್ಟಿಸುವ ಮೂಲಕ ಕೇಜ್ರಿವಾಲ್‌ ಮಸೂದೆ ಜಾರಿಯಾಗದಿರುವಂತೆ ಹುನ್ನಾರ ನಡೆಸಿದ್ದಾರೆ ಎಂದರು.

ಬಲಿಷ್ಠ ಲೋಕಪಾಲ್ ಬೇಕಿಲ್ಲ: ‘ಭಾರತದಲ್ಲಿ ಯಾವುದೇ ಹೋರಾಟಗಾರ ಅಥವಾ ಚಳವಳಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ವಂಚಿಸಿದ ಇತಿಹಾಸವಿಲ್ಲ. ಕೇಂದ್ರದ ಸಚಿವರು ಮತ್ತು  ಅಧಿಕಾರಿಗಳನ್ನು ಈ ಮಸೂದೆಯ ವ್ಯಾಪ್ತಿಗೆ ಸೇರಿಸಲಾಗಿದೆ. ಅವರನ್ನು ಮಸೂದೆಯ ವ್ಯಾಪ್ತಿಗೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದ ಕಾರಣ ಕೇಂದ್ರ ಸರ್ಕಾರ ಅದನ್ನು ಅಂಗೀಕರಿಸುವುದಿಲ್ಲ ಎಂಬುದು ನಿಶ್ಚಿತ. ಆಗ ಕೇಜ್ರಿವಾಲ್‌ ಅವರು, ಕೇಂದ್ರ ಸರ್ಕಾರ ಮಸೂದೆ ತಡೆ ಹಿಡಿದಿದೆ ಎಂದು ಪ್ರಚಾರ ಮಾಡಿಕೊಂಡು ಓಡಾಡುತ್ತಾರೆ. ವಾಸ್ತವವಾಗಿ ಮಸೂದೆ ಜಾರಿಗೊಳಿಸುವ ಹಾಗೂ  ಬಲಿಷ್ಠ ಲೋಕಪಾಲ ರಚಿಸುವ ಉದ್ದೇಶವೇ ಕೇಜ್ರಿವಾಲ್‌ ಅವರಿಗಿಲ್ಲ’ ಎಂದೂ ಭೂಷಣ್‌ ಆರೋಪಿಸಿದರು.

‘ನಾವು ಕೇಳುವುದು ಲೋಕಪಾಲ್ ನೇಮಕ ಮತ್ತು ವಜಾ, ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು’ ಎಂದರು. ಎಎಪಿಯ ಮತ್ತೊಬ್ಬ ಉಚ್ಚಾಟಿತ ಶಾಸಕ ಪಂಕಜ್‌ ಪುಷ್ಕರ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
*
ಭೂಷಣ್‌ ಬಿಜೆಪಿ ಸೇರಲಿ: ಎಎಪಿ
ನವದೆಹಲಿ (ಪಿಟಿಐ):
ಜನಲೋಕಪಾಲ್‌ ಬಗ್ಗೆ ತೀಕ್ಷ್ಣವಾಗಿ ಟೀಕಿಸಿರುವ ಪ್ರಶಾಂತ್‌ ಭೂಷಣ್‌ ಅವರು ಬಿಜೆಪಿ ಸೇರಿ ಆ ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (ಪಿಆರ್ಒ) ಕೆಲಸ ಮಾಡುವುದು  ಸೂಕ್ತ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಇಲ್ಲಿ ತಿರುಗೇಟು ನೀಡಿದೆ.

ಪ್ರಶಾಂತ್‌ ಭೂಷಣ್‌ ಲೇವಡಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಎಎಪಿ ವಕ್ತಾರ ರಾಘವ್‌ ಛಡ್ಡಾ, ಬಿಜೆಪಿ ಮತ್ತದರ ಮುಖಂಡ ಅರುಣ್‌ ಜೇಟ್ಲಿ ಹಾಗೂ ಭೂಷಣ್‌ಗಳ ನಡುವೆ ಅವರು ಪಿಆರ್‌ಒ ಆಗಿ ಕೆಲಸ ಮಾಡುವುದು ಒಳ್ಳೆಯದು ಎಂದರು.
*
ಲೋಕಪಾಲ ಕಾಯ್ದೆಯನ್ನು ಕೇಜ್ರಿವಾಲ್‌ ‘ಜೋಕ್‌ಪಾಲ್‌’ ಎಂದು ಲೇವಡಿ ಮಾಡಿದ್ದರು. ಆದರೆ ದೆಹಲಿ ಸರ್ಕಾರದ ಜನಲೋಕಪಾಲ್‌ ‘ಮಹಾಜೋಕ್‌ಪಾಲ್‌’
- ಪ್ರಶಾಂತ್‌ ಭೂಷಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT