ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿಯಲ್ಲಿ ಹೀರೊ, ಕೆಲಸದಲ್ಲಿ ಝೀರೊ: ಕಾಂಗ್ರೆಸ್‌ ಟೀಕೆ

Last Updated 6 ಜೂನ್ 2017, 17:50 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರು ವರ್ಷಗಳ ಆಡಳಿತವನ್ನು ನಿರಾಶಾಜನಕ ಮತ್ತು ಭಯ ಬಿತ್ತುವ ಪರ್ವ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಕಟು ಟೀಕೆಗೆ ಗುರಿ ಮಾಡಿದೆ.

ಮಂಗಳವಾರ ಇಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಸಮಿತಿ ಸಭೆಯ ಕಲಾಪ ವಿವರಗಳನ್ನು ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಸುದ್ದಿಗಾರರೊಂದಿಗೆ ಹಂಚಿ­ಕೊಂಡರು. ಮೋದಿ ಸರ್ಕಾರವನ್ನು ‘ಟಿ.ವಿ ಮೇಲೆ ಹೀರೊ, ಕೆಲಸ ಮಾಡೋದರಲ್ಲಿ ಝೀರೊ’ ಎಂದು ಕಟಕಿದರು.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ­ಯನ್ನು ಹೂಡುವ ಕುರಿತು ಹೆಚ್ಚು ಚರ್ಚೆ ನಡೆಯಲಿಲ್ಲ. ಸೋನಿಯಾ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ಸಣ್ಣ ಉಪ­ಸಮಿತಿಯೊಂದನ್ನು ಮಾಡಿ ಮುಂದಿನ ದಾರಿಯ ಕುರಿತು ಚರ್ಚಿಸಬೇಕೆಂದು ನಿರ್ಧರಿಸಲಾಗಿತ್ತು. ಈ ಉಪಸಮಿತಿಯ ಸಭೆ ಒಂದೆರಡು ವಾರದಲ್ಲಿ ನಡೆಯಲಿದೆ ಎಂದು ಆಜಾದ್ ವಿವರಿಸಿದರು.

ಕಾಶ್ಮೀರದ ಜನತೆಯೊಂದಿಗೆ ಘರ್ಷಣೆಗೆ ಇಳಿಯುವ ಮತ್ತು ಅವರನ್ನು ಭಾರತದಿಂದ ದೂರ ಮಾಡುವ ತಪ್ಪು ನೀತಿಯನ್ನು ಮೋದಿ ಸರ್ಕಾರ ಅನುಸರಿಸಿದೆ. ಈ ಘರ್ಷಣೆಯಲ್ಲಿ ನಮ್ಮ ಯೋಧರು, ಕಾಶ್ಮೀರಿ ನಾಗರಿಕರು ಸಾಯುತ್ತಿದ್ದಾರೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಆರು ತಿಂಗಳ ಅಂತರದ ನಂತರ ನಡೆದ ಇಂದಿನ ಕಾಂಗ್ರೆಸ್ ಕಾರ್ಯಸಮಿತಿ ಸಭೆಯನ್ನು ಉದ್ದೇಶಿಸಿ ಸೋನಿಯಾ­ಗಾಂಧಿ, ಮಾಜಿ ಪ್ರಧಾನಿ ಮನ­ಮೋಹನಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತಾಡಿದರು.

ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚುನಾವಣೆಗಳನ್ನು ನಡೆಸಲು ಸಭೆ ತೀರ್ಮಾನಿಸಿತು. ಭಯ ಬೆದರಿಕೆಯನ್ನು ಬಳಸಿ ವ್ಯಕ್ತಿ ಅಥವಾ ಪ್ರತಿಪಕ್ಷಗಳ ಸರ್ಕಾರಗಳನ್ನು ಕೆಡವಿದ್ದೇ ಅಲ್ಲದೆ ದೇಶದ ಅಲ್ಪಸಂಖ್ಯಾತರು, ದಲಿತರು, ಯುವ­ಜನರು, ಮಹಿಳೆಯರನ್ನು ಈ ಭಯದ ಶಿಕಾರಿಗಳನ್ನಾಗಿ ಮಾಡಲಾಯಿತು. ಸರ್ಕಾರಕ್ಕೆ ‘ಹೌದಪ್ಪ’ ಆಗಲು ಒಲ್ಲದ, ಮತ್ತು ಸರ್ಕಾರದ ದಾರಿಯನ್ನು ತುಳಿಯಲು ಒಪ್ಪದ ಸಮೂಹ ಮಾಧ್ಯಮ­ಗಳನ್ನು ಬೇಟೆಯಾಡುವ ನಮೂನೆಯನ್ನು ಕಳೆದ 24 ತಾಸುಗಳಲ್ಲಿ ನೋಡಿದ್ದೇವೆ. ಲಕ್ಷ ಕೋಟಿ ರುಪಾಯಿಗಳಷ್ಟು ಬ್ಯಾಂಕ್ ಸಾಲದ ಬಾಕಿಯನ್ನು ಈ ಸರ್ಕಾರಕ್ಕೆ ಬೇಕಾದವರು ಉಳಿಸಿಕೊಂಡಿದ್ದಾರೆ. ಅದರೆ ಖಾಸಗಿ ಬ್ಯಾಂಕೊಂದರ ಜೊತೆ ಸುದ್ದಿವಾಹಿನಿಯೊಂದು ಹೊಂದಿದ್ದ ₹50 ಕೋಟಿ ಸಾಲದ ವಿವಾದವನ್ನು ಭಾರೀ ದೊಡ್ಡದೆಂದು ತೋರಿಸುವ ಪ್ರಯತ್ನ ನಡೆಯಿತೆಂದು ಸಭೆ ಟೀಕಿಸಿದ್ದಾಗಿ ಆಜಾದ್ ತಿಳಿಸಿದರು.

ನೋಟು ರದ್ದತಿಯಿಂದ ಪ್ರಗತಿ ಕುಂಠಿತ: ಮನಮೋಹನ್‌

ಆರ್ಥಿಕ ಪ್ರಗತಿ ಕುಸಿತಕ್ಕೆ ಕಳೆದ ವರ್ಷದ ನೋಟು ರದ್ದತಿಯೇ ಮುಖ್ಯ ಕಾರಣ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಹೇಳಿದರು. 

ಸರ್ಕಾರ ಮಾಡುತ್ತಿರುವ ವೆಚ್ಚದಿಂದಾಗಿ ಮಾತ್ರ ಅರ್ಥ ವ್ಯವಸ್ಥೆ ಮುಂದಕ್ಕೆ ಸಾಗುತ್ತಿದೆ. ಖಾಸಗಿ ವಲಯದಲ್ಲಿ ಹೂಡಿಕೆಯೇ ಇಲ್ಲ ಎಂದು ಸಿಂಗ್ ಕಳವಳ ವ್ಯಕ್ತಪಡಿಸಿದರು.

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಶೇ 6.1ರಷ್ಟಿತ್ತು ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಗ್‌, ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ ವೃದ್ಧಿ (ಜಿವಿಎ) ಇನ್ನೂ ಕಡಿಮೆ ಆಗಿದೆ. ಅದು ಶೇ 5.6ರಷ್ಟಾಗಿತ್ತು ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಗತಿಯನ್ನು ಅರ್ಥ ಮಾಡಿಕೊಳ್ಳಲು ಅರ್ಥಶಾಸ್ತ್ರಜ್ಞರು ಈ ಮಾನದಂಡವನ್ನು ಬಳಸುತ್ತಿದ್ದಾರೆ.

ಜಿವಿಎ ಪ್ರಗತಿ ಕುಂಠಿತವಾಗಿದೆ ಎಂದರೆ ಉದ್ಯೋಗ ಸೃಷ್ಟಿಯ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅರ್ಥ. ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ ಎಂದು ಸಿಂಗ್‌ ವಿವರಿಸಿದರು.

ಕೈಗಾರಿಕಾ ಕ್ಷೇತ್ರದ ಜಿವಿಎ 2016ರ ಮಾರ್ಚ್‌ನಲ್ಲಿ ಶೇ 10.7ರಷ್ಟಿತ್ತು. ಆದರೆ ಈ ಮಾರ್ಚ್‌ ಹೊತ್ತಿಗೆ ಅದು ಶೇ 3.8ಕ್ಕೆ ಇಳಿದಿದೆ. ನಿರ್ಮಾಣ ಕ್ಷೇತ್ರ ನಕಾರಾತ್ಮಕ ಪ್ರಗತಿ ದಾಖಲಿಸಿದೆ. ಇದಕ್ಕೆ ನೋಟು ರದ್ದತಿಯೇ ಕಾರಣ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT