ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ತಿರಸ್ಕರಿಸಲು ಸುಪ್ರೀಂ ಆದೇಶ

ಅಪರಾಧ ಹಿನ್ನೆಲೆ, ಆಸ್ತಿ ವಿವರ ನೀಡದ ಅಭ್ಯರ್ಥಿ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಪರಾಧ ಹಿನ್ನೆಲೆ ಮತ್ತು ಆಸ್ತಿ ವಿವರಗಳನ್ನು ಬಹಿರಂಗಪಡಿಸದ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಬೇಕು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಮತದಾರರಿಗೆ ತಮ್ಮ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ತಿಳಿಯುವ ಮೂಲಭೂತ ಹಕ್ಕಿದೆ. ಆದ್ದರಿಂದ ನಾಮಪತ್ರದಲ್ಲಿ ವಿವರಗಳನ್ನು ತುಂಬದೆ ಖಾಲಿ ಬಿಡುವುದು ಹಕ್ಕು ಚ್ಯುತಿ ಆಗುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ನಾಮಪತ್ರ ತಿರಸ್ಕರಿಸುವ ಅಧಿಕಾರವನ್ನು ಚುನಾವಣಾ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ನ್ಯಾಯಪೀಠವು ತಿಳಿಸಿದೆ. ಅಭ್ಯರ್ಥಿಗಳು ನಾಮಪತ್ರಗಳಲ್ಲಿ ಮಹತ್ವದ ಮಾಹಿತಿಗಳನ್ನು ನೀಡದಿರುವುದನ್ನು ಪತ್ತೆ ಹಚ್ಚಿದ್ದ ರಿಸರ್ಜನ್‌್ಸ ಇಂಡಿಯಾ ಸ್ವಯಂ ಸೇವಾ ಸಂಸ್ಥೆಯು 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.

ಸ್ವಯಂ ಸೇವಾ ಸಂಸ್ಥೆಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು, ‘ನಾಮಪತ್ರಗಳಲ್ಲಿ ಕೇಳಿರುವ ಮಾಹಿ­ತಿಗಳನ್ನು ಒದಗಿಸದೆ ಇರುವುದು ಸುಪ್ರೀಂಕೋರ್ಟ್‌ನ ಈ ಮೊದಲಿನ ಆದೇಶವನ್ನು ಧಿಕ್ಕರಿಸಿದಂತಾಗುತ್ತದೆ’ ಎಂದು ತಿಳಿಸಿದ್ದರು. ಅಪರಾಧ ಹಿನ್ನೆಲೆ ಮತ್ತು ಆಸ್ತಿ ವಿವರಗಳನ್ನು  ಬಹಿರಂಗ ಪಡಿಸುವ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದರೆ ಪರಿಪೂರ್ಣ ನಾಮಪತ್ರ ಎಂದು ಪರಿಗಣಿಸಲಾಗುದು ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಚುನಾವಣಾ ಆಯೋಗವು ಸಹ ಸ್ವಯಂ ಸೇವಾ ಸಂಸ್ಥೆಯ ಅರ್ಜಿಗೆ ಬೆಂಬಲ ಸೂಚಿಸಿತ್ತು.

ನಾಮಪತ್ರಗಳಲ್ಲಿ ಕೇಳಲಾದ ವಿವರಗಳನ್ನು ಒದಗಿಸದ ಅಭ್ಯರ್ಥಿಗಳ ನಾಮಪತ್ರವನ್ನು ತಿರಸ್ಕರಿಸುವ ಅಧಿಕಾರವನ್ನು ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಎಂದು ಆಯೋಗವು ಹೇಳಿತ್ತು. ನಾಮಪತ್ರದಲ್ಲಿ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ಆಸ್ತಿ ಮತ್ತು ಸಾಲಗಳ ವಿವರ, ಅಪರಾಧವೆಸಗಿದ್ದರೆ ಅವುಗಳ ವಿವರಗಳನ್ನು ತುಂಬಿ ಜತೆಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂದು ಈ ನ್ಯಾಯಪೀ­ಠವು ಮಧ್ಯಂತರ ಆದೇಶ ನೀಡಿತ್ತು.

ಈ ಆದೇಶದ ನಂತರವೂ ಆಸ್ತಿ ಮತ್ತು ಅಪರಾಧ ಹಿನ್ನೆಲೆಯ ವಿವರಗಳನ್ನು ಒದಗಿಸದೇ ಇದ್ದ ಉದಾಹರಣೆಗಳನ್ನು ಸ್ವಯಂಸೇವಾ ಸಂಸ್ಥೆ ನ್ಯಾಯಪೀಠದ ಗಮನಕ್ಕೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT