ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಸಂಸತ್‌ ಬಜೆಟ್‌ ಅಧಿವೇಶನ

Last Updated 5 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಳ ಸೋಮವಾರ­ದಿಂದ ಆರಂಭ­ವಾಗುವ ಸಂಸತ್ತಿನ ಬಜೆಟ್‌ ಅಧಿವೇಶನ­ದಲ್ಲಿ ಆಡಳಿತ ಮತ್ತು ವಿರೋಧ ಪಕ್ಷ­ಗಳ ನಡುವೆ ಜಟಾ­ಪಟಿಗೆ ಕಾರಣ­ವಾಗುವ ಸಾಧ್ಯತೆಯಿದೆ.

ಸದನದ ಸುಗಮ ಕಲಾಪಕ್ಕೆ ಸಹಕರಿಸು­ವಂತೆ ಮನವಿ ಮಾಡಲು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಶನಿವಾರ ಕರೆದಿದ್ದ ಸರ್ವಪಕ್ಷಗಳ ಭೋಜನ ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಳ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು  ಒತ್ತಾಯಿಸಿವೆ.

ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಇರಾಕಿನಲ್ಲಿರುವ ಭಾರತೀ­ಯರ ಸ್ಥಿತಿಗತಿ ಕುರಿತು ಸರ್ಕಾರ ಸಂಸತ್ತಿನ ಉಭಯ ಸದನ­ಗಳಲ್ಲೂ ಹೇಳಿಕೆ ನೀಡಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅನಂತರ ತಿಳಿಸಿದರು. ತಿಂಗಳಿಗೂ ಹೆಚ್ಚು ಕಾಲ ನಡೆಯುವ ಸದನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈಲು ದರ ಹೆಚ್ಚಳ, ತಮಿಳು ಮೀನುಗಾರರ ಸಮಸ್ಯೆ ಕುರಿತು ಚರ್ಚಿ­ಸಲು ಅವಕಾಶ ನೀಡಬೇಕೆಂದು ವಿವಿಧ ಪಕ್ಷಗಳ ನಾಯಕರು ಒತ್ತಾಯಿಸಿದರು.

ಯಾವುದೇ ವಿಷಯದ ಮೇಲೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ಸದನದ ಘನತೆ– ಗೌರವ ಕಾಪಾಡಲು ವಿರೋಧ ಪಕ್ಷಗಳು ಸಹಕಾರ ನೀಡ­ಬೇಕು ಎಂದು ನಾಯ್ಡು ಮನವಿ ಮಾಡಿದರು.ಒಟ್ಟು 28 ದಿನ ಹಾಗೂ 168 ಗಂಟೆ ನಡೆಯಲಿರುವ ಕಲಾಪದಲ್ಲಿ ವಿವಿಧ ಸಚಿವಾಲಯಗಳ ಅನುದಾನ ಮೇಲಿನ ಬೇಡಿಕೆ ಕುರಿತು ಜುಲೈ 31ರೊಳಗೆ ಚರ್ಚಿಸಿ ಸದನ ಒಪ್ಪಿಗೆ ನೀಡಲಿದೆ. ಇನ್ನು ವಿವಿಧ ಸಚಿವಾಲಯಗಳ ಸ್ಥಾಯಿ ಸಮಿತಿ­ಗಳು ರಚನೆ ಆಗದಿರುವ ಹಿನ್ನೆಲೆ­ಯಲ್ಲಿ ಸದನವೇ ಚರ್ಚಿಸಿ ಅನುಮತಿ ನೀಡಲಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಪೋಲಾವರಂ ಯೋಜನೆ ಸೇರಿದಂತೆ ಸದ್ಯ ಅನೇಕ ಸುಗ್ರೀವಾಜ್ಞೆ­ಗಳನ್ನು ಬದಲಾಯಿಸಲು ಮಸೂದೆ­ಗಳನ್ನು ಮಂಡಿಸಲಾಗುತ್ತಿದೆ.

ಸದನದಲ್ಲಿ ಅನೇಕ ಮಸೂದೆಗಳು ಮಂಡನೆ ಆಗಲಿವೆ. ವಾಣಿಜ್ಯ ಸಚಿವಾ­ಲಯ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಮಸೂದೆ ತರಲಿದೆ. ಬಹು ಕಾಲದಿಂದ ಸದನದ ಒಪ್ಪಿಗೆಗಾಗಿ ಕಾದಿರುವ ಮಸೂದೆಗಳನ್ನು ಪರಿಶೀಲಿಸಿ ಆದ್ಯತೆ ಮೇಲೆ ಮಂಡಿಸಲಾಗುವುದು. ಈ ವಿಷಯದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವರು ವಿವರಿಸಿದರು.

ಸಾಮಾನ್ಯ ಬಜೆಟ್‌ ಮತ್ತು ರೈಲ್ವೆ ಬಜೆಟ್‌ ಮಂಡಿಸಿದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈಲು ದರ ಏರಿಕೆಯಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಚರ್ಚೆ ನಡೆಯಬೇಕು ಎಂದು ಟಿಎಂಸಿ ನಾಯಕ ಕಲ್ಯಾಣ್‌ ಬ್ಯಾನರ್ಜಿ ಹೇಳಿದರು. ಒಕ್ಕೂಟ ವ್ಯವಸ್ಥೆ ಬಗೆಗೆ ಸರ್ಕಾರ ಹೊಂದಿರುವ ಧೋರಣೆ­­ಯನ್ನು ಟಿಎಂಸಿ ನಾಯಕ ಅತ್ಯಂತ ಕಟುವಾಗಿ ಟೀಕಿಸಿದರು.

ಎನ್‌ಡಿಎ ಸರ್ಕಾರ ಒಕ್ಕೂಟ ವ್ಯವಸ್ಥೆ­ಯನ್ನು ಗೌರವಿಸುವುದಾಗಿ ಹೇಳುತ್ತಿದೆ. ಆದರೆ, ಕೃತಿಯಲ್ಲಿ ಕಾಣುತ್ತಿಲ್ಲ. ವಿವಿಧ ಸಚಿವರು ರಾಜ್ಯಕ್ಕೆ ಬರೆದಿರುವ ಪತ್ರ­ಗಳು ಇದಕ್ಕೆ ಸಾಕ್ಷಿಯಾಗಿದೆ. ಟಿಎಂಸಿಗೆ ಸಂಸತ್ತಿನಲ್ಲಿ ಸೂಕ್ತ ಕೊಠಡಿ ನಿಗದಿ ಮಾಡಿಲ್ಲ. ಪಕ್ಷಗಳ ಬಲಾಬಲದ ಮೇಲೆ ಚರ್ಚೆಗೆ ಅವಧಿ ನಿಗದಿ ಮಾಡುವ ನಿಯ­ಮವನ್ನು ಕೊಠಡಿ ನಿಗದಿ ಮಾಡಲು ಅನುಸರಿಸಬೇಕು ಎಂದು ಬ್ಯಾನರ್ಜಿ ಆಗ್ರಹಿಸಿದರು.

ಸರ್ವ ಪಕ್ಷ ಸಭೆ ಸೌಹಾರ್ದ ವಾತಾ­ವರಣದಲ್ಲಿ ನಡೆಯಿತು. ಸುಗಮವಾಗಿ ಕಲಾಪ ನಡೆಸಲು ಸಹಕಾರ ನೀಡುವು­ದಾಗಿ ಎಲ್ಲರೂ ಭರವಸೆ ನೀಡಿದ್ದಾರೆ. ಯಾವುದೇ ವಿಷಯದ ಮೇಲೆ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳಿದೆ. ಕೆಲವು ವಿಭಿನ್ನ ಸಲಹೆಗಳು ಬಂದಿವೆ. ಅವನ್ನು ಕಲಾಪ ಸಲಹಾ ಸಮಿತಿ ಸಭೆ ಬಳಿಕ ಚರ್ಚಿಸಲಾಗುವುದು ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸಭೆ ಬಳಿಕ ತಿಳಿಸಿದರು. ಈ ಸಲ ಸದನದಲ್ಲಿ ಮಾತನಾಡುವ ಸದಸ್ಯರ ಚಿತ್ರಗಳನ್ನು ಪರದೆ ಮೇಲೆ ಬರಲಿವೆ ಎಂದೂ ಅವರು ವಿವರಿಸಿದರು.

ಕಾಂಗ್ರೆಸ್‌ ನಾಯಕರಾದ ಮಲ್ಲಿ­ಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಡಿಯ ಬಿ. ಮಹ­ತಾಬ್‌, ಸಿಪಿಎಂನ ಕರುಣಾಕರ್‌, ಸಮಾಜ­ವಾದಿ ಪಕ್ಷದ ಧರ್ಮೇಂದ್ರ ಯಾದವ್‌ ಸಭೆಯಲ್ಲಿ ಭಾಗವಹಿಸಿ­ದ್ದರು. ಸರ್ಕಾರದ ಪರವಾಗಿ ಸಂಸ­ದೀಯ ವ್ಯವಹಾರಗಳ ರಾಜ್ಯ ಸಚಿವ­ರಾದ ಪ್ರಕಾಶ ಜಾವಡೇಕರ್‌, ಸಂತೋಷ್‌ ಗಂಗ್ವಾರ್‌ ಮತ್ತು ಗ್ರಾಹಕ ವ್ಯವಹಾರ ಸಚಿವ ರಾಂವಿಲಾಸ್‌ ಪಾಸ್ವಾನ್‌ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಭೋಜನ ಕೂಟದಲ್ಲಿ ಭಾಗ­ವಹಿಸಿದರಾದರೂ, ಚರ್ಚೆಯಲ್ಲಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT