ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌–ಶರದ್‌ ಜಟಾಪಟಿ

ಕೇಂದ್ರದಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಪಕ್ಷದ ಹಿರಿಯ ಮುಖಂಡ ಶರದ್‌ ಯಾದವ್‌ ನಡುವಿನ ಸಂಘರ್ಷ ತಾರಕಕ್ಕೇರಿದೆ.

ರಾಜಧಾನಿಯಲ್ಲಿ ಶನಿವಾರ ನಡೆದ ಜೆಡಿಯು ಕಾರ್ಯಕಾರಣಿಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಬಣ ಮತ್ತೆ ಎನ್‌ಡಿಎ ತೆಕ್ಕೆಗೆ ಮರಳುವ ನಿರ್ಧಾರ ತೆಗೆದುಕೊಂಡಿದೆ.

ಈ ನಡುವೆ ಹಿರಿಯ ನಾಯಕ ಶರದ್‌ ಯಾದವ್ ವಿರುದ್ಧ ಕಿಡಿ ಕಾರಿದ ನಿತೀಶ್‌, ‘ನಿಮಗೆ ನಿಜವಾಗಲೂ ತಾಕತ್ತು ಇದ್ದರೆ ಪಕ್ಷ ಒಡೆಯಿರಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.

ನಿರೀಕ್ಷೆಯಂತೆ ಕಾರ್ಯಕಾರಿಣಿಯಿಂದ ದೂರ ಉಳಿದ ಬಂಡಾಯ ನಾಯಕ ಶರದ್‌ ಯಾದವ್‌ ಬಣ ಕಾರ್ಯಕಾರಿಣಿಗೆ ಸಮಾನಂತರವಾಗಿ ಜನ ಅದಾಲತ್‌ ಸಮಾರಂಭ ನಡೆಸುವ ಮೂಲಕ ನಿತೀಶ್ ಬಣಕ್ಕೆ ಸಡ್ಡು ಹೊಡೆದಿದೆ.

ಪಕ್ಷದಿಂದ ಉಚ್ಚಾಟಿಸಲಾದ ರಾಜ್ಯಸಭಾ ಸದಸ್ಯ ಅಲಿ ಅನ್ವರ್‌, ಮಾಜಿ ಸಚಿವ ರಾಮೈ ರಾಮ್‌ ಹಾಗೂ ನೂರಾರು ಬೆಂಬಲಿಗರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ನಡುವೆ ಮುಖ್ಯಮಂತ್ರಿ ಅಧಿಕೃತ ನಿವಾಸದ ಬಳಿ ಎರಡೂ ಬಣಗಳ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

‘ಒಬ್ಬ ಶಾಸಕ ಇಲ್ಲ’
‘ನನ್ನ ಜತೆ 71 ಶಾಸಕರು, 30 ವಿಧಾನ ಪರಿಷತ್‌ ಸದಸ್ಯರು, ಇಬ್ಬರು ಸಂಸದರಿದ್ದಾರೆ. ನಿಮ್ಮೊಂದಿಗೆ ಒಬ್ಬ ಶಾಸಕನೂ ಇಲ್ಲ’ ಎಂದು ನಿತೀಶ್‌ ಹೇಳಿದ್ದಾರೆ.

‘ನಿಮ್ಮೊಂದಿಗೆ ಇರುವ ಏಕೈಕ ರಾಜ್ಯಸಭಾ ಸದಸ್ಯ ಅಲಿ ಅನ್ವರ್‌ ಕೂಡ 2012ರಲ್ಲಿ ಬಿಜೆಪಿ ಶಾಸಕರ ಬೆಂಬಲದೊಂದಿಗೆ ಮೇಲ್ಮನೆ ಪ್ರವೇಶಿಸಿದವರು’ ಎಂದು ಲೇವಡಿ ಮಾಡಿದ್ದಾರೆ.

‘ಒಂದು ವೇಳೆ ಪಕ್ಷವನ್ನು ಪಡೆ ಯುವ ಸಾಹಸಕ್ಕೆ ಮುಂದಾದರೆ ಮೂರನೇ ಎರಡರಷ್ಟು ಬಹುಮತ ಇಲ್ಲದ ಕಾರಣ ನಿಮ್ಮ ಸದಸ್ಯತ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ನಿತೀಶ್ ಎಚ್ಚರಿಕೆ ನೀಡಿದ್ದಾರೆ.

ಶರದ್‌ ಯಾದವ್‌ ಅವರು ಜೆಡಿಯುನ ಹಿರಿಯ ನಾಯಕರಾಗಿದ್ದು, ಪಕ್ಷದ ವೇದಿಕೆಯಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದು ಹಿರಿಯ ನಾಯಕ ಕೆ.ಸಿ. ತ್ಯಾಗಿ ಆಹ್ವಾನ ನೀಡಿದ್ದಾರೆ.

‘ಪಕ್ಷದ ಎಲ್ಲ 71 ಶಾಸಕರು, 30 ವಿಧಾನ ಪರಿಷತ್‌ ಸದಸ್ಯರು, 20 ಜಿಲ್ಲಾಧ್ಯಕ್ಷರ ಪೈಕಿ 16 ಜನರು ಹಾಗೂ ಪದಾಧಿಕಾರಿಗಳು ಇಂದು ನಡೆದ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗ ಪಕ್ಷದಲ್ಲಿ ಒಡಕು ಎಲ್ಲಿಂದ ಬಂತು’ ಎಂದ ಅವರು ಪಕ್ಷ ವಿಭಜನೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

2013ರಲ್ಲಿ ಬಿಜೆಪಿ ಜತೆಗಿನ ಎರಡು ದಶಕದ ಮೈತ್ರಿ ಕಡಿದುಕೊಂಡಿದ್ದ ಜೆಡಿಯು ನಂತರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆ ಕೈಜೋಡಿಸಿತ್ತು.
*
ಶಿಸ್ತು ಕ್ರಮ!
ಶರದ್‌ ಯಾದವ್‌ ವಿರುದ್ಧ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಪಕ್ಷ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದೆ. ಆಗಸ್ಟ್‌ 27ರಂದು ಆರ್‌ಜೆಡಿ ಕರೆ ನೀಡಿರುವ ರ‍್ಯಾಲಿಯಲ್ಲಿ ಭಾಗವಹಿಸದಂತೆ ಯಾದವ್‌ ಅವರಿಗೆ ಪಕ್ಷ ತಾಕೀತು ಮಾಡಿದೆ. ಒಂದು ವೇಳೆ ಪಕ್ಷದ ಆದೇಶ ಉಲ್ಲಂಘಿಸಿ ರ‍್ಯಾಲಿಯಲ್ಲಿ ಭಾಗವಹಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT