ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲೆಂ ಬಸ್‌ ದುರಂತಕ್ಕೆ ಮೂರು ಕಾರಣ...

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಮಹಬೂಬನಗರದ ಪಾಲೆಂ ಬಳಿ  ಬೆಂಗಳೂರು ಮೂಲದ ವೋಲ್ವೊ ಬಸ್‌  ಅಪಘಾತದಿಂದ ಅಗ್ನಿ ದುರಂತಕ್ಕೀಡಾದ ಬಗ್ಗೆ ಆಂಧ್ರ­ಪ್ರದೇಶ ವಿಧಿವಿಜ್ಞಾನ ಪ್ರಯೋಗಾಲಯ (ಎಪಿಎಸ್‌­ಎಫ್‌ಎಲ್‌) ವರದಿ ನೀಡಿದೆ. 45 ಪ್ರಯಾಣಿಕರನ್ನು ಬಲಿತೆಗೆದುಕೊಂಡ ಈ ದುರಂತಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಪಟ್ಟಿ ಮಾಡಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಯೋ­ಗಾಲಯದ ತಜ್ಞರ ತಂಡವು ಸಂಗ್ರಹಿಸಿದ ಸಾಕ್ಷ್ಯ­ಗಳನ್ನು ಪ್ರಯೋಗಾಲಯ ವಿವರವಾಗಿ ವಿಶ್ಲೇಷಿಸಿದೆ. ಇದರಲ್ಲಿ ಪ್ರಮುಖವಾಗಿ ಅತಿವೇಗ, ಚಾಲಕನ ಆಸನದ ಕೆಳಗೆ ಬ್ಯಾಟರಿ ಅಳವಡಿಕೆ ಮಾಡಿದ್ದು, ಮತ್ತು ಅಲೋಹದಿಂದ (ಫೈಬರ್‌) ಮಾಡ ಲಾಗಿದ್ದ ಇಂಧನ ಸಂಗ್ರಹಾಗಾರಗಳು ಬಸ್‌ ಹೊತ್ತಿ ಉರಿಯಲು ಕಾರಣ ಎಂದು ಉಲ್ಲೇಖಿಸಲಾಗಿದೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಸ್‌ ಗಂಟೆಗೆ 120 ಕಿ.ಮೀ.ನಷ್ಟು ವೇಗದಲ್ಲಿ ಸಂಚರಿಸು ತ್ತಿತ್ತು. ರಸ್ತೆಯಿಂದ 10–12 ಅಂಗುಲದಷ್ಟು ಎತ್ತರದಲ್ಲಿದ್ದ ರಸ್ತೆ ವಿಭಜಕದ ಮೇಲೆ ಬಸ್ ಹತ್ತಿತು. 29.2 ಮೀಟರ್ ದೂರ ಸಾಗಿ, ಆರು ಕಬ್ಬಿಣದ ಪೈಪ್‌ಗಳ ಆಸರೆಯಿಂದ ನಿರ್ಮಾಣವಾಗಿದ್ದ ಸೇತು ಗಾಲುವೆಯ ತಡೆಗೋಡೆಗೆ ಡಿಕ್ಕಿ ಹೊಡೆಯಿತು.

ಇದರಿಂದ ಕಿತ್ತು ಬಂದ ಒಂದು ಪೈಪ್‌ ಚಾಲಕನ ಆಸನದ ಕೆಳಗೆ ಅಳವಡಿಸಿದ್ದ ಅತಿಶಾಖ ಉತ್ಪತ್ತಿ ಮಾಡುವ ಬ್ಯಾಟರಿಗೆ ಬಡಿದ ಪರಿಣಾಮ ಬೆಂಕಿ ಕಿಡಿಗಳು ಹೊಮ್ಮಿದವು. ಮತ್ತೊಂದು ಪೈಪ್‌  ಫೈಬರ್‌ನಿಂದ ಮಾಡಿದ್ದ ಇಂಧನ ಸಂಗ್ರಹಾಗಾರಕ್ಕೆ ತಗುಲಿದ ಪರಿಣಾಮ ಇಂಧನ ಸೋರಿಕೆಯೂ ಆಯಿತು. ಕಿಡಿಗಳು ಇಂಧನದ ಸಂಪರ್ಕಕ್ಕೆ ಬಂದು ಬೆಂಕಿ ಹೊತ್ತಿಕೊಂಡಿತು.

ಅಷ್ಟರಲ್ಲಿ ಬಸ್‌, 67 ಮೀಟರ್‌ಗಳಷ್ಟು ದೂರ ಸಾಗಿತು. ಜೊತೆಗೆ ಬಸ್‌ ನಿರ್ಮಾಣದಲ್ಲಿ ದಹನಶೀಲ ಸಾಮಗ್ರಿಗಳನ್ನು ಬಳಕೆ ಮಾಡಿದ್ದರಿಂದ ಹಾಗೂ ಗಾಳಿಯ ರಭಸಕ್ಕೆ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿ ಬಸ್ಮವಾಯಿತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಬೆಂಗಳೂರಿನ ಜಬ್ಬಾರ್‌ ಟ್ರಾವಲ್ಸ್‌ಗೆ ಸೇರಿದ ಮಲ್ಟಿ ಆ್ಯಕ್ಸಲ್‌ನ ಈ ವೋಲ್ವೊ ಬಸ್‌, ಅ. 29ರಂದು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿತ್ತು. ಮಹಬೂಬನಗರ ಜಿಲ್ಲೆಯ ಪಾಲೆಂ ಗ್ರಾಮದ ಬಳಿ ಅ.30ರ ಬೆಳಿಗ್ಗೆ 5.30ಕ್ಕೆ ಅಪಘಾತಕ್ಕೀಡಾಗಿತ್ತು.

ಡಿಕ್ಕಿಗೆ ಮೊದಲೇ ಬೆಂಕಿ
ಬೆಂಗಳೂರು: ಪಾಲೆಂ ಬಳಿ ಸಂಭವಿಸಿದ ವೋಲ್ವೊ ಬಸ್‌ ಅಪಘಾತಕ್ಕೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯು ತನಿಖಾ ವರದಿ ಸಿದ್ಧಪಡಿಸಿದ್ದು, ಸೇತುಗಾಲುವೆ ತಡೆಗೋಡೆಗೆ ಡಿಕ್ಕಿ ಹೊಡೆಯುವ ಮುನ್ನವೇ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ. ಬಸ್‌ ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷವೇ ಅಗ್ನಿ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆದ 50ಕ್ಕೂ ಅಧಿಕ ಐಷಾರಾಮಿ ಬಸ್‌ (ವೋಲ್ವೊ ಸೇರಿದಂತೆ) ದುರಂತಗಳನ್ನೂ ಸಾರಿಗೆ ಇಲಾಖೆಯು ವಿಶ್ಲೇಷಣೆಗೆ ಒಳಪಡಿಸಿದೆ.

ದುರಂತ ಸಂಭವಿಸಿದ ವೇಳೆಯಲ್ಲಿ ಬಸ್‌ ಗಂಟೆಗೆ 110–120 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತೇ ಹೊರತು ಚಾಲಕ ತಿಳಿಸಿರುವಂತೆ 85ರಿಂದ 90 ಕಿ.ಮೀ. ವೇಗದಲ್ಲಿ ಅಲ್ಲ ಎಂದೂ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT