ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸಿಒ ಕರೆ ಮಾಡಿದವರ ವಿವರ ದಾಖಲು

ಬೂತ್‌ಗಳ ಮಾಲೀಕರಿಗೆ ಪೊಲೀಸರ ಸೂಚನೆ
Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸಾರ್ವಜನಿಕ ದೂರವಾಣಿ ಕೇಂದ್ರಗಳಿಂದ (ಪಿಸಿಒ) ಕರೆ ಮಾಡುವ ಪ್ರತಿಯೊಬ್ಬರ ವಿವರವನ್ನು ದಾಖಲಿಸಿಕೊಳ್ಳುವಂತೆ ಆ ಬೂತ್‌ಗಳ ಮಾಲೀಕರಿಗೆ ಮುಂಬೈ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಗುರುತಿನ ಚೀಟಿ ತೋರಿಸಿದವರಿಗೆ ಮಾತ್ರ ದೂರವಾಣಿ ಕರೆ ಮಾಡಲು ಪಿಸಿಒ ಆಪರೇಟರ್‌ಗಳು ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.ಅತಿ ಹೆಚ್ಚಿನ ಹುಸಿ ದೂರವಾಣಿ ಕರೆಗಳು ಪಿಸಿಒಗಳಿಂದ ಬಂದಿರುವುದು ಪತ್ತೆಯಾಗಿದ್ದು, ಅವುಗಳನ್ನು ತಡೆಗಟ್ಟುವುದಕ್ಕಾಗಿ ಮುಂಬೈ ಪೊಲೀಸ್ ಕಮಿಷನರ್ ಡಾ. ಸತ್ಯಪಾಲ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.

ಸೈಬರ್ ಕೆಫೆಗಳಲ್ಲಿ ಅಂತರ್ಜಾಲ ಬಳಸುವವರು ಕಡ್ಡಾಯವಾಗಿ ಗುರುತಿನ ಚೀಟಿ ತೋರಿಸಬೇಕೆಂಬ ನಿಯಮವು ಯಶಸ್ವಿಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪಿಸಿಒಗಳಲ್ಲಿ ಈ ನಿಯಮ ಜಾರಿಗೊಳಿಸಲು ಮುಂದಾಗಿದೆ.

ಕೇವಲ ಸುಳ್ಳು ಕರೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕಮಿಷನರ್ ಈ ನಿರ್ದೇಶನ ನೀಡಿದ್ದಾರೆ. ಈ ಕುರಿತ ಕರಡು ಸಿದ್ಧಪಡಿಸಿದ ಬಳಿಕ ಕಮಿಷನರ್ ಅವರಿಗೆ ಕಳುಹಿಸಿಕೊಡಲಾಗುತ್ತದೆ. ಸಿಆರ್‌ಪಿಸಿ  ಕಲಂ 144ರನ್ವಯ ತುರ್ತಾಗಿ ಜಾರಿಗೆ ಬರುವಂತೆ ಅವರು ಈ ಆದೇಶ ಹೊರಡಿಸಲಿದ್ದಾರೆ. ನಂತರ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಿಸಿಒಗಳ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಅಡಿ ಕ್ರಮ ತೆಗೆದುಕೊಳುತ್ತಾರೆ ಎಂದು ಮೂಲಗಳು ಹೇಳಿವೆ.

ಅನಾನುಕೂಲ: ಮುಂಬೈ ಪೊಲೀಸರು ಹೊರಡಿಸಿರುವ ಈ ಹೊಸ ಆದೇಶದಿಂದ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ ಎಂದು ಬಾಂಬೆ ದೂರವಾಣಿ ಬಳಕೆದಾರರ ಸಂಘದ ಕಾರ್ಯದರ್ಶಿ ಅಚಿಂತ್ಯಾ ಮುಖರ್ಜಿ ತಿಳಿಸಿದ್ದಾರೆ. `ಮುಂಬೈನಲ್ಲಿ 82,403 ಸ್ಥಳೀಯ ಪಿಸಿಒಗಳಿವೆ. 10,041 ಎಸ್‌ಟಿಡಿ ಬೂತ್‌ಗಳಿವೆ. ಇದರಲ್ಲಿ 7,207 ಪಿಸಿಒ ಮತ್ತು 180 ಎಸ್‌ಟಿಡಿಗಳನ್ನು ಅಂಗವಿಕಲರು ನಡೆಸುತ್ತಿದ್ದಾರೆ. ಇವರಿಂದ ಕರೆ ಮಾಡುವವರ ವಿವರ ಸಂಗ್ರಹಿಸಿಡಲು ಕಷ್ಟ' ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT