ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಭಾಷಣ, ಸಾಧನೆ ಅತ್ಯಲ್ಪ

ಎನ್‌ಡಿಎ ಸರ್ಕಾರದ ನೂರು ದಿನ: ಕಾಂಗ್ರೆಸ್‌ ಪ್ರತಿಕ್ರಿಯೆ
Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಗಳವಾರ ನೂರು ದಿನಗಳನ್ನು ಪೂರೈಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪಕ್ಷವು, ನೂರು ದಿನಗಳಲ್ಲಿ ಬರೀ ಭಾಷಣ ಮಾಡಲಾಗುತ್ತಿದೆ. ಸಾಧನೆ ಅತ್ಯಲ್ಪ ಎಂದು ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬ ಕನಸುಗಳ ಮಾರಾಟ­ಗಾರ. ಸುಳ್ಳು ಭರವಸೆ ಮಾರಾಟ ಮಾಡಿ ಅಧಿಕಾರಕ್ಕೆ ಬಂದ ಅವರು ಜನರಲ್ಲಿ ಬಿತ್ತಿದ ಹುಸಿ ಕನಸುಗಳನ್ನು ಈಡೇರಿಸುವಲ್ಲಿ ಸೋತಿದ್ದಾರೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಮೋದಿ ಅವರಂತೆ ರಾಹುಲ್‌, ವಾಸ್ತವದಲ್ಲಿ ಈಡೇರಿಸಲು ಸಾಧ್ಯವೇ ಇಲ್ಲದ ಕನಸುಗಳನ್ನು ಜನರಲ್ಲಿ ಬಿತ್ತುವ ಕೆಲಸವನ್ನು ಮಾಡಲಿಲ್ಲ. ಅವರು ಪ್ರಾಮಾಣಿಕರಾದ ಕಾರಣ ಜನರಿಗೆ ಸುಳ್ಳು ಭರವಸೆ ನೀಡಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಹೇಳಿದ್ದಾರೆ.

ಆಡಳಿತದಲ್ಲಿ ಭಯೋತ್ಪಾದನೆ: ಮೋದಿ ಸರ್ಕಾರದಲ್ಲಿ ಆಡಳಿ­ತಾ­ತ್ಮಕ ಭಯೋತ್ಪಾದನೆ ಮಿತಿ ಮೀರಿದೆ. ಆಡಳಿತದಲ್ಲಿ ಭಯ ಹಾಗೂ ಅಪ ನಂಬಿಗೆ ಮನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
 

ಒಬಾಮ ಅಂಧಾನುಕರಣೆ 
ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಅನುಕರಿಸುತ್ತಿದ್ದಾರೆ
– ಅಮರಿಂದರ್‌ ಸಿಂಗ್‌, ಲೋಕಸಭೆಯಲ್ಲಿ
ಕಾಂಗ್ರೆಸ್‌ ಉಪ ನಾಯಕ

ಕಾಂಗ್ರೆಸ್‌ ಟೀಕೆ ಸಹಜ
ಕಾಂಗ್ರೆಸ್‌ ವಿರೋಧ ಪಕ್ಷದಂತೆ ವರ್ತಿಸುತ್ತಿದೆ. ಅದರ ಟೀಕೆಯ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲ್ಲ
–ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

21 ವರ್ಷ ಹಳೆಯದಾದ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು  ಮಾಡುತ್ತಿದ್ದ ಕೊಲಿಜಿಯಂ ವ್ಯವಸ್ಥೆ ಸೇರಿದಂತೆ ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿರುವ ಅನೇಕ ಸಾಂವಿಧಾನಿಕ ಸಂಸ್ಥೆಗಳ ಮಹತ್ವವನ್ನು ಅತ್ಯಂತ ವ್ಯವಸ್ಥಿತವಾಗಿ ತಗ್ಗಿಸಲಾಗುತ್ತಿದೆ.

ಸರ್ವಾಧಿಕಾರಿ ಧೋರಣೆ
ಸಚಿವರಿಗೆ ಕನಿಷ್ಠ ಪಕ್ಷ ತಮ್ಮ ಆಪ್ತ ಸಹಾಯಕರನ್ನೂ ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡದೆ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಶರ್ಮಾ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರ ಸಂಸದೀಯ ವ್ಯವಸ್ಥೆಯಿಂದ  ಅಧ್ಯಕ್ಷೀಯ ಮಾದರಿ ಸರ್ಕಾರದತ್ತ ಹೊರಳುತ್ತಿರುವ ಬೆಳವಣಿಗೆ ಸದ್ದಿಲ್ಲದೆ ನಡೆಯುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. 

ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿದರೂ ಬಿಜೆಪಿ ಸರ್ಕಾರ ಶಾಲು–ಸೀರೆ ಉಡುಗೊರೆ ರಾಜತಾಂತ್ರಿಕ ನೀತಿಯಲ್ಲಿ ತೊಡಗಿದೆ. ಅಪ್ರಬುದ್ಧ ವಿದೇಶಾಂಗ  ನೀತಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ಮೋದಿ ಸಂಪುಟದಲ್ಲಿ ಅಪರಾಧ ಹಿನ್ನೆಲೆಯುಳ್ಳ 18 ಸಚಿವರಿದ್ದಾರೆ . ಈ ಬಗ್ಗೆ ಪ್ರಧಾನಿ ಯಾಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್‌ ಜಾವಡೇಕರ್‌, ಮೋದಿ  ಸಂಪುಟ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

85 ಪೈಸೆಯೂ ಬಂದಿಲ್ಲ
ಅಧಿಕಾರಕ್ಕೆ ಬಂದರೆ  ವಿದೇಶದಲ್ಲಿರುವ 85 ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಮರಳಿ ತರುವುದಾಗಿ ಹೇಳುತ್ತಿದ್ದ ಬಿಜೆಪಿಯೇ ಈಗ ಅಧಿಕಾರದಲ್ಲಿದೆ. ಆದರೆ, ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಕನಿಷ್ಠ ಪಕ್ಷ 85 ಪೈಸೆಯನ್ನೂ ಮರಳಿ ತರಲು ಅದಕ್ಕೆ ಸಾಧ್ಯವಾಗಿಲ್ಲ ಎಂದು ಶರ್ಮಾ ಲೇವಡಿ ಮಾಡಿದ್ದಾರೆ.

ಚುನಾವಣೆಯಲ್ಲಿ ಬೆಲೆ ಇಳಿಕೆ ಬಗ್ಗೆ ಭಾಷಣ  ಮಾಡುತ್ತಿದ್ದ ಬಿಜೆಪಿ   ಆಡಳಿತದಲ್ಲಿ ಟೊಮೆಟೊ ಬೆಲೆ ಡೀಸೆಲ್‌ ಮತ್ತು ಪೆಟ್ರೋಲ್‌ಗಿಂತ ದುಬಾರಿಯಾಗಿದೆ.  ಗಗನಕ್ಕೇರುತ್ತಿರುವ ದಿನ ಬಳಕೆ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಮೋದಿ ಅವರಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT