ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಪತ್ರಕ್ಕೆ ವರಿಷ್ಠರ ಅತೃಪ್ತಿ

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ­ದಲ್ಲೇ ಉಳಿದು ಪಕ್ಷ ಬಲ­ಪಡಿ­ಸುವುದಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂರಪ್ಪ ಅವರ ನಡವಳಿಕೆ ಕುರಿತು ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮೋದಿ ಅವರಿಗೆ ಪತ್ರ ಬರೆಯಲು ಹೇಳಿದ್ದು ಯಾರು? ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದು ಏಕೆ? ಎಂದು ಬಿಜೆಪಿ ವರಿಷ್ಠರು ಒಂದೆರಡು ದಿನಗಳಲ್ಲಿ ಮಾಜಿ ಮುಖ್ಯಮಂತ್ರಿಗಳನ್ನು ಕೇಳಲಿ­ದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದರೆ ಹೈಕಮಾಂಡ್‌ ಸಹಜವಾಗಿ ಪರಿಗಣಿಸುತ್ತಿತ್ತು. ನೇರವಾಗಿ ಮೋದಿ ಅವರಿಗೆ ಬರೆದಿದ್ದಾರೆ. ಅಲ್ಲದೆ, ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಮುಜುಗರ ಮಾಡಿದ್ದಾರೆ.

ಯಡಿ­ಯೂರಪ್ಪ ಅವರ ಹಿಂದಿರುವ ಕೆಲವರು ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹಿಂದೆಯೂ ಅಡ್ವಾಣಿ ಅವರಿಗೆ ಪತ್ರ ಬರೆದು ಇದೇ ರೀತಿ ಮಾಡಿದ್ದರು ಎಂದು ಮೂಲಗಳು ವಿವರಿಸಿವೆ.

ಯಡಿಯೂರಪ್ಪ ಅವರಿಗೆ ಸಂಪುಟ ಸ್ಥಾನ ಸಿಗುವುದಿಲ್ಲವೆಂದೂ ಹೇಳಿಲ್ಲ ಅಥವಾ ಅವಕಾಶ ದೊರೆಯಲಿದೆ ಎಂದೂ ಹೇಳಿಲ್ಲ. ಅವರೇ ಎಲ್ಲವನ್ನು ಕಲ್ಪಿಸಿಕೊಂಡಿದ್ದಾರೆ. ಎಂದಿನಂತೆ ಒತ್ತಡ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ ಇಂಥ ನಡವಳಿಕೆ ಸಹಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿರುವುದರ ಹಿಂದೆ ಯಡಿಯೂರಪ್ಪ ಅವರ ಪರಿಶ್ರಮವಿದೆ. ಅದನ್ನು ಪಕ್ಷ ಗುರುತಿಸಲಿದೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂದು ಒಂದು ವಾರವಾಗಿದೆ. ಹಿರಿಯ ಮುಖಂಡರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಹಾಗೂ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ತೊಡಗಿ­ಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಬಾರದೆನ್ನುವ ಸೂಚನೆಯನ್ನು ಹಿರಿಯ ನಾಯಕರು ಪಕ್ಷದ ಎಲ್ಲ ಹಂತದ ಮುಖಂಡರಿಗೂ ಕಳುಹಿ­ಸಿದ್ದಾರೆ. ಪಕ್ಷದ ವಕ್ತಾರರು ಸೇರಿದಂತೆ ಯಾರೂ ಪತ್ರಿಕೆಗಳಿಗೆ ಯಾವುದೇ ಹೇಳಿಕೆ ಕೊಡಬಾರದು ಎಂದೂ ಆದೇಶಿಸಲಾಗಿದೆ.

ರಾಜ್ಯದ ಬಿಜೆಪಿ ನಾಯಕರು ಹಾಗೂ ಲೋಕಸಭೆ ಸದಸ್ಯರು ಕಳೆದ ವಾರ ಮೋದಿ ಅವರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದಾಗಲೇ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಅನಂತ ಕುಮಾರ್‌ ‘ನಾವು ಶುಭಾಶಯ ಕೋರಲು ಬಂದಿದ್ದೇವೆ. ಇದು ಕೇವಲ ಸೌಹಾರ್ದದ ಭೇಟಿ’ ಎಂದು ಮೋದಿ ಅವರ ಮನವೊಲಿಸಿದ್ದರು. ಇಷ್ಟಾದ ಮೇಲೂ ಕೆಲವರು ದಕ್ಷಿಣ ಭಾರತದಲ್ಲಿ ಕರ್ನಾಟಕ ಹೆಚ್ಚು ಬಿಜೆಪಿ ಸದಸ್ಯರನ್ನು ಆರಿಸಿ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಹೆಚ್ಚು ಸ್ಥಾನ ಕೊಡ­ಬೇಕೆಂಬ ಬೇಡಿಕೆ ಇಟ್ಟರು.

ಆದರೆ, ಅದಕ್ಕೆ ಕಿವಿಗೊಡದ ಮೋದಿ ಲಾಬಿ ಮಾಡದೆ ಊರುಗಳಿಗೆ ಹಿಂತಿರುಗುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡರ ನಿಯೋಗಕ್ಕೂ ಮೋದಿ ಭೇಟಿ ಅವಕಾಶ ನಿರಾಕರಿಸಿದ್ದರು. ಇದಾದ ಬಳಿಕ ಯಡಿಯೂರಪ್ಪ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಹೈಕಮಾಂಡ್‌ಗೆ ಕಿರಿಕಿರಿ: ಮೋದಿ ಸಂಪುಟ ಸೇರಲು ರಾಜ್ಯ ಬಿಜೆಪಿ ಬಹುತೇಕ ಸದಸ್ಯರು ತುದಿ­ಗಾಲಲ್ಲಿ ನಿಂತಿದ್ದಾರೆ. ಯಡಿಯೂರಪ್ಪ, ಸದಾನಂದಗೌಡ, ಅನಂತ ಕುಮಾರ್‌ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೆ, ಸಚಿವ ಸಂಪುಟ ಅಂತಿಮಗೊಳ್ಳುವ ಮೊದಲೇ ಯಡಿಯೂರಪ್ಪ ಪತ್ರ ಬರೆದಿರುವುದು ಬಿಜೆಪಿ ಹೈಕಮಾಂಡ್‌ಗೆ ಕಿರಿಕಿರಿ ಉಂಟುಮಾಡಿದೆ.

ನರೇಂದ್ರ ಮೋದಿ ಕರ್ನಾಟಕ ಭವನದ ಪಕ್ಕದಲ್ಲಿರುವ ಗುಜರಾತ್‌ ಭವನದಲ್ಲಿ ಉಳಿದಿದ್ದಾರೆ. ಈ ಭವನದೊಳಗೆ ನಿಯೋಜಿತ ಪ್ರಧಾನಿ ಹೇಳುವವರನ್ನು ಬಿಟ್ಟರೆ ಮಿಕ್ಕ ಯಾರಿಗೂ ಪ್ರವೇಶವಿಲ್ಲ. ಶುಕ್ರವಾರ ರಾಜನಾಥ್‌ಸಿಂಗ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ ಅವರ ಜತೆ ನಿಯೋಜಿತ ಮೋದಿ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT