ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೆ ₹ 824.15 ಕೋಟಿ ವಂಚಿಸಿದ ಕನಿಷ್ಕ್

Last Updated 22 ಮಾರ್ಚ್ 2018, 20:48 IST
ಅಕ್ಷರ ಗಾತ್ರ

ಚೆನ್ನೈ: ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಮಾಡಿದ ಆರೋಪದ ಬೆನ್ನಲ್ಲೇ ಮತ್ತೊಂದು ಅಂಥದ್ದೇ ಪ್ರಕರಣ ವರದಿಯಾಗಿದೆ.

ಚೆನ್ನೈ ಮೂಲದ ಕನಿಷ್ಕ್ ಗೋಲ್ಡ್ ಪ್ರೈ. ಲಿಮಿಟೆಡ್ (ಕೆಜಿಪಿಎಲ್) ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಸೇರಿದಂತೆ 14 ಬ್ಯಾಂಕ್‌ಗಳಿಗೆ ₹ 824.15 ಕೋಟಿ ವಂಚನೆ ಮಾಡಿದೆ ಎಂದು ದೂರು ದಾಖಲಾಗಿದೆ.

ವಂಚನೆ ಸಂಬಂಧ ಚೆನ್ನೈನ ಎಸ್‌ಬಿಐ ಮಿಡ್ ಕಾರ್ಪೊರೇಟ್ ಪ್ರಾದೇಶಿಕ ಕಚೇರಿ–1ರ ಪ್ರಧಾನ ವ್ಯವಸ್ಥಾಪಕ ಜಿ.ಡಿ. ಚಂದ್ರಶೇಖರ್ ಅವರು ಸಿಬಿಐ ಜಂಟಿ ನಿರ್ದೇಶಕರಿಗೆ ಜನವರಿ 21ರಂದು ದೂರು ನೀಡಿದ್ದಾರೆ. ಹಗರಣದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

ನೀಡಿದ್ದು ಸುಳ್ಳು ದಾಖಲೆ: ‘ಕನಿಷ್ಕ್ ಕಂಪನಿಯ ಪ್ರವರ್ತಕರು ಮತ್ತು ನಿರ್ದೇಶಕರಾದ ಭೂಪೇಶ್ ಕುಮಾರ್ ಜೈನ್ ಹಾಗೂ ಅವರ ಹೆಂಡತಿ ನೀತಾ ಜೈನ್ ಅವರು ಸಂಸ್ಥೆಯ ಹಣಕಾಸು ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಸಾಲ ಪಡೆದಿದ್ದಾರೆ. 2009ರಿಂದಲೂ ಇದೇ ರೀತಿ ಬ್ಯಾಂಕ್‌ನ ನಂಬಿಕೆಗೆ ದ್ರೋಹ ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಸಂಸ್ಥೆಯು ಬ್ಯಾಂಕ್‌ನ ಹಿತಕ್ಕೆ ಧಕ್ಕೆಯಾಗುವಂತೆ ಹಣವನ್ನು ಬಳಸಿಕೊಂಡಿದೆ. ರಾತ್ರೋರಾತ್ರಿ ತನ್ನ ಮಳಿಗೆಗಳನ್ನು ಮುಚ್ಚಿದೆ’ ಎಂದು ದೂರು ದಾಖಲಾಗಿದೆ.

ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ, ಭೂಪೇಶ್ ಕುಮಾರ್ ಜೈನ್ ಹಾಗೂ ನೀತಾ ಜೈನ್ ವಿರುದ್ಧ ಲುಕ್–ಔಟ್ ಸುತ್ತೋಲೆ ಹೊರಡಿಸಿದೆ.

ಜೈನ್ ದಂಪತಿ ಸದ್ಯ ಮಾರಿಶಸ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

‌ವರ್ಷದ ಹಿಂದೇ ಅನುಮಾನ: 2017ರ ಮಾರ್ಚ್‌ನಲ್ಲಿ ಕೆಜಿಪಿಎಲ್ ಬಡ್ಡಿ ಕಟ್ಟಲು ತಡವಾಗಿತ್ತಲ್ಲದೇ ಅದರ ನಿರ್ದೇಶಕರು ಸಂಪರ್ಕಕ್ಕೆ ಲಭ್ಯರಾಗಿರಲಿಲ್ಲ. ಆಗಲೇ ವಂಚನೆಯ ಬಗ್ಗೆ ಮೊದಲ ಬಾರಿ ಅನುಮಾನ ಕಾಡಿದ್ದು.

ಸಾಲ ನೀಡಿದ ಬ್ಯಾಂಕ್‌ಗಳ ಸಿಬ್ಬಂದಿ ಚೆನ್ನೈ ಸುತ್ತಮುತ್ತ ಇರುವ ಕೆಜಿಪಿಎಲ್ ಕಚೇರಿ, ಕಾರ್ಖಾನೆ ಮತ್ತು ಮಳಿಗೆಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ಚಟುವಟಿಕೆಗಳು ಕಂಡುಬರದೇ ಇರುವುದು ಅನುಮಾನಕ್ಕೆ ಪುಷ್ಟಿ ನೀಡಿತು.

ನಷ್ಟ ಭರ್ತಿಗೆ ಕೆಜಿಪಿಎಲ್ ಆಸ್ತಿಗಳನ್ನು ಜಪ್ತಿ ಮಾಡಲು ಬ್ಯಾಂಕ್‌ಗಳು ಮುಂದಾದಾಗ ಕೇವಲ ₹ 158.65 ಕೋಟಿ ಮೌಲ್ಯದ ಆಸ್ತಿಗಳನ್ನಷ್ಟೇ ಭದ್ರತೆಯಾಗಿ ಇರಿಸಿರುವುದು ತಿಳಿದಿದೆ. ಆಗ, ಕೆಜಿಪಿಎಲ್ ಸಾಲದ ಎಲ್ಲಾ ಖಾತೆಗಳೂ ನಕಲಿ ಎಂದು ಘೋಷಿಸಿ, ಪ್ರಕರಣ ದಾಖಲಿಸಲು ಬ್ಯಾಂಕ್‌ಗಳು ನಿರ್ಧರಿಸಿವೆ.

**

ಯಾರ‍್ಯಾರಿಗೆ ಎಷ್ಟು ನಷ್ಟ?

ಕೆಜಿಪಿಎಲ್‌ನಿಂದ ವಂಚನೆಗೊಳಗಾಗದ ಬ್ಯಾಂಕ್‌ಗಳಲ್ಲಿ ಎಸ್‌ಬಿಐ (₹ 240.46 ಕೋಟಿ) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (₹ 128.31 ಕೋಟಿ), ಯೂನಿಯನ್ ಬ್ಯಾಂಕ್ (₹ 54.94 ಕೋಟಿ), ಬ್ಯಾಂಕ್ ಆಫ್ ಇಂಡಿಯಾ (₹ 46.20 ಕೋಟಿ) ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT