ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನಂಕಣದ ‘ಮಹಾರಾಜ’ ನಡಾಲ್

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಡೊಮಿನಿಕ್ ಥೀಮ್‌ಗೆ ನಿರಾಸೆ; 12ನೇ ಪ್ರಶಸ್ತಿ ಗೆದ್ದ ಸ್ಪೇನ್ ಆಟಗಾರ
Last Updated 9 ಜೂನ್ 2019, 19:45 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಅಮೋಘ 12ನೇ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕೆ ಇಳಿದ ಸ್ಪೇನ್‌ನ ರಫೆಲ್ ನಡಾಲ್ ಆವೆಮಣ್ಣಿನ ಅಂಗಣದಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆದರು.

ಚೊಚ್ಚಲ ಗ್ರ್ಯಾನ್‌ಸ್ಲ್ಯಾಂ ಪ್ರಶಸ್ತಿಯ ಕನಸಿನೊಂದಿಗೆ ಅಂಗಣಕ್ಕೆ ಇಳಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಮಣಿಸಿದ ಅವರು ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ 6–3, 7–5, 6–1, 6-1ರಲ್ಲಿ ಗೆದ್ದು ಸಂಭ್ರಮಿಸಿದರು.

ಮೊದಲ ಸೆಟ್‌ನ ಆರಂಭದಲ್ಲಿ ಉಭಯ ಆಟಗಾರರು ಸಮಬಲದ ಪೈಪೋಟಿ ನಡೆಸಿದರು. ಆದರೆ ಆವೆಮಣ್ಣಿನ ರಾಜ ನಡಾಲ್ ನಿಧಾನಕ್ಕೆ ಪಂದ್ಯದ ಮೇಲೆ ಪ್ರಾಬಲ್ಯ ಸ್ಥಾಪಿಸಿದರು. ನಂತರ ಥೀಮ್‌ ಪಟ್ಟುಗಳಿಗೆ ಪ್ರತಿ ಪಟ್ಟು ಹಾಕಿ ಗೆದ್ದು ಬೀಗಿದರು.

ಎರಡನೇ ಸೆಟ್‌ ರೋಚಕವಾಯಿತು. ನಡಾಲ್‌ಗೆ ತೀವ್ರ ಪ್ರತಿಸ್ಪರ್ಧೆ ನೀಡಿದ ಥೀಮ್ ರೋಚಕವಾಗಿ ಸೆಟ್ ಗೆದ್ದು ಸಮಬಲ ಸಾಧಿಸಿದರು. ಆದರೆ ಮೂರನೇ ಸೆಟ್‌ನಲ್ಲಿ ಥೀಮ್ ಆಟ ನಡೆಯಲಿಲ್ಲ. ಏಕಪಕ್ಷೀಯವಾಗಿ ಗೆದ್ದ ನಡಾಲ್ ಪ್ರಶಸ್ತಿಯತ್ತ ಹೆಜ್ಜೆ ಹಾಕಿದರು. ನಿರ್ಣಾಯಕ ನಾಲ್ಕನೇ ಸೆಟ್‌ನಲ್ಲಿ ನಡಾಲ್ ಆಧಿಪತ್ಯ ಮುಂದುವರಿಯಿತು. ಮೊದಲ ಮೂರು ಗೇಮ್‌ಗಳನ್ನು ಏಕಪಕ್ಷೀಯವಾಗಿ ಗೆದ್ದ ಅವರಿಗೆ ನಾಲ್ಕನೇ ಗೇಮ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಾಯಿತು. ಆದರೆ ಕೊನೆಗೆ ಥೀಮ್ ಕನಸು ಭಗ್ನಗೊಂಡಿತು.

ತಿಮಿಯಾ– ಕ್ರಿಸ್ಟಿನಾಗೆ ಪ್ರಶಸ್ತಿ: ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಹಂಗರಿಯ ತಿಮಿಯಾ ಬಾಬೋಸ್ ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮಡೆನೊವಿಚ್ ಪಾಲಾಯಿತು. ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಈ ಜೋಡಿ ಚೀನಾದ ಯಿಂಗ್ ಯಿಂಗ್ ಡುವಾನ್–ಸಯಿಸಯಿ ಜೆಂಗ್ ಅವರನ್ನು 6–2, 6–3ರಿಂದ ಸೋಲಿಸಿದರು.

ಕಳೆದ ಬಾರಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲೂ ಇವರಿಬ್ಬರು ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದಿದ್ದರು. ಇಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಜೋಡಿ ಎದುರಾಳಿಗಳ ವಿರುದ್ಧ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿತು. ಹೀಗಾಗಿ ಸುಲಭ ಜಯ ಸಾಧಿಸಿತು.

ಮಡೆನೊವಿಚ್ ಅವರಿಗೆ ಇದು ವೃತ್ತಿ ಬದುಕಿನ ಮೂರನೇ ಪ್ರಮುಖ ಪ್ರಶಸ್ತಿ. 2016ರ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಫ್ರಾನ್ಸ್‌ನ ಕರೊಲಿನಾ ಗಾರ್ಸಿಯಾ ಜೊತೆಗೂಡಿ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT