ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲಿದ್ದಷ್ಟು ಹಿಂಸಾಚಾರ ಈಗ ಇಲ್ಲ: ಅಮಿತ್‌ ಷಾ

Last Updated 2 ಜುಲೈ 2017, 17:46 IST
ಅಕ್ಷರ ಗಾತ್ರ

ಪಣಜಿ: ‘ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವ ಮುಂಚೆ ಇದ್ದ ಸರ್ಕಾರಗಳ ಅವಧಿಯಲ್ಲಿ ನಡೆದಷ್ಟು ಹಿಂಸಾಚಾರ ಪ್ರಕರಣಗಳು ನಂತರ ನಡೆದಿಲ್ಲ. ಆದರೆ ಅದರ ಬಗ್ಗೆ ಆಗ ಯಾರೂ ಪ್ರಶ್ನೆ ಮಾಡಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇಲ್ಲಿ ಹೇಳಿದರು.

‘ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನಾಗಲೀ, ಹತ್ಯೆ ಪ್ರಕರಣಗಳ ಬಗ್ಗೆಯಾಗಲೀ ಹೋಲಿಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಆದರೆ 2011-2013ರ ಅವಧಿಯಲ್ಲಿ ಹೆಚ್ಚು ಹತ್ಯೆಗಳು ನಡೆದಿವೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ’ ಎಂದು ಅವರು ಹೇಳಿದರು.

ಗೋವಾಗೆ ಎರಡು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರು ಕೇಳಿರುವ ಪ್ರಶ್ನೆಗಳಿಗೆ ಷಾ  ಉತ್ತರಿಸಿದರು. ‘ದೇಶದಲ್ಲಿ ಹತ್ಯೆ, ಅಪಾಯದ ಶಂಕೆ ಹೆಚ್ಚುತ್ತಿದ್ದು, ಇದರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ’ ಎಂದು ಷಾ  ಅವರಲ್ಲಿ ಕೇಳಿದಾಗ, ‘ಇಂಥ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿಲ್ಲ ಎಂದು ನೀವು ಹೇಳುತ್ತಿದ್ದೀರಾ? ಕೇವಲ ಊಹೆಯ ಆಧಾರದ ಮೇಲೆ ಕೇಳುವ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಉತ್ತರ ಪ್ರದೇಶದಲ್ಲಿ ಮೊಹಮ್ಮದ್‌ ಅಖ್ಲಾಕ್ ಹತ್ಯೆಯಾದಾಗ ಸಮಾಜವಾದಿ ಪಕ್ಷದ ಸರ್ಕಾರವಿತ್ತು. ಅದಕ್ಕೆ ಹೊಣೆ ಸಮಾಜವಾದಿ ಸರ್ಕಾರ. ಆದರೆ ಹತ್ಯೆಯನ್ನು ವಿರೋಧಿಸಿ ಮೋದಿ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೆಂಥ ಕ್ರಮ? ಎಂದು ಕಿಡಿಕಾರಿದರು.

***

ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ
ರಾಮಗಡ (ಜಾರ್ಖಂಡ್):
ಇತ್ತೀಚೆಗೆ ನಡೆದ ಮಾಂಸದ ವ್ಯಾಪಾರಿಯೊಬ್ಬರ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಿಜೆಪಿ ಮುಖಂಡ ನಿತ್ಯಾನಂದ ಮಾಹತೊ ಮತ್ತು ಸಂತೋಷ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಛೋಟು ರಾಣಾ ಎಂಬಾತ ರಾಮಗಡ ನ್ಯಾಯಾಲಯದ ಎದುರು ಶರಣಾಗಿದ್ದಾನೆ’ ಎಂದು ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಕಿಶೋರ್ ಕೌಶಲ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಜಾರಿಬಾಗ್ ಜಿಲ್ಲೆಯ ಮಾನ್ವಾ ಗ್ರಾಮದ 40 ವರ್ಷ ವಯಸ್ಸಿನ ಮಾಂಸದ ವ್ಯಾಪಾರಿಯನ್ನು ಗುರುವಾರ  ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಗೋಮಾಂಸವನ್ನು ತನ್ನ ವಾಹನದಲ್ಲಿ ಸಾಗಿಸುತ್ತಿದ್ದಾನೆ ಎಂಬ ಅನುಮಾನದ ಮೇಲೆ ರಾಮಗಡ ಪಟ್ಟಣದ ಬಜಾರ್‌ಟಂಡ್‌ ಪ್ರದೇಶದಲ್ಲಿ ಈ ಹತ್ಯೆ ನಡೆದಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT