ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಘನವಂತರ ನೆರಳು

Published 4 ಜೂನ್ 2024, 0:09 IST
Last Updated 4 ಜೂನ್ 2024, 0:09 IST
ಅಕ್ಷರ ಗಾತ್ರ

ತುರೇಮಣೆಗೆ ಅವರ ಅವ್ವ ಅಂದ್ರೆ ಬಲು ಪ್ರೀತಿ. ಬದುಕಿರಗಂಟಾ ‘ಯವ್ವಾ, ಯವ್ವಾ’ ಅಂತ ಹಿಂದಿಂದೆ ಸುತ್ತಾಡ್ತಾ ಹೆಂಡ್ತಿ ಕೈಲಿ ಉಗಿಸ್ಕಳೋರು. ಈಗಲೂ ನಶೆ ಏರಿದ್ದಾಗ ‘ನಮ್ಮವ್ವ ಬೇಕೂ’ ಅಂತ ಕಣ್ಣೀರು ಸುರಿಸ್ತಿದ್ರು. ಮೊನ್ನೆ ರಾತ್ರಿ ಉಂಡು ಮನಗಿದ್ದಾಗ ‘ಲೇ ಮಗಾ, ಎದ್ದು ಮಕ್ಕೆ ಏಡು ನೀರು ಹಾಕ್ಕ್ಯಂದು ಸೀಟಿಕ್ಯಂದು ಬಯ್ಯಾ’ ಅಂತ ಅವ್ವ ಹೇಳಿದಂಗಾಯ್ತಂತೆ. ಕಣ್ಣುಬುಟ್ಟು ನೋಡಿದ್ರೆ ಅವರವ್ವ ನಿಜರೂಪದೇಲಿ ಬಂದು ಕೂತವ್ಳೆ!

'ಅವ್ವೈ, ನೀನು ಅದೆಂಗೆ ಇಲ್ಲಿ?’ ಅಂತ ತುರೇಮಣೆ ಕೇಳಿದರು.

‘ಕುಡಿದಾಗೆಲ್ಲಾ ನನ್ನ ಗ್ಯಪ್ತಿಗೆ ತಕ್ಕಂದು ಅಳ್ತೀಯಲ್ಲಾ ಅದುಕ್ಕೆ ಬಂದೆ ಕಾ ಮಗಾ. ಸೊಪ್ಪಿನ ಉಪ್ಸಾರು, ಮುದ್ದೆ ತಂದಿವ್ನಿ ಉಣ್ಣುವೆ ಎದ್ದೇಳಲಾ ಮೂದೇಯ್’ ಅಂದಂಗಾಯ್ತಂತೆ. ತುರೇಮಣೆಗೆ ಖುಷಿಯಾಗಿ ಈಗ ದಿನಕ್ಕೊಂದು ಸಾರಿ ಅವ್ವನ್ನ ಕರೆಸಿಗ್ಯಂದು ಮಾತಾಡ್ತಿರತರಂತೆ.

‘ಇದೇನಾ ಸಾ, ನಿಜರೂಪಕ್ಕೆ ತರಿಸೋ ಮಾಯಕಾರ ಇದ್ಯೆ ಅಂದ್ರೆ. ಮೋದಿ ತಂದಿದ್ದೋ ಇದು?’ ಚಂದ್ರು ಬಾಯ ಮೇಲೆ ಬೆಳ್ಳು ಮಡಗಿದ.

‘ಕೃತಕ ಬುದ್ಧಿಮತ್ತೆ ಬಂದದಲ್ಲಾ ಅದರ ಮುಂದುವರಿದ ಭಾಗ ಡೀಪ್‌ಫೇಕ್‌ ಅಂತ ಗೊತ್ತಾಯ್ತು ಕನೇಳಿ. ಇದರ ಬಗ್ಗೆ ತಮ್ಮ ವಿಚಾರ ಏನು?’ ಅಂತ ತುರೇಮಣೆಗೆ ಕೇಳಿದೆ.

‘ಅಲ್ಲ ಪೊಲೀಸ್ನೋರು ಡೀಪ್‌ಫೇಕ್‌ ತಂತ್ರಗ್ಯಾನ್ದೇಲಿ, ಕೊಲೆಯಾದೋರ್ನ ಕರೆಸಿ, ಕೊಂದೋರು ಯಾರು ಅಂತ ತಿಳಕಬೋದಲ್ಲವಾ’ ಯಂಟಪ್ಪಣ್ಣ ಅಚ್ಚರಿಗೆ ಬಿತ್ತು.

‘ನೋಡ್ಲಾ, ಸತುವಂತರೆಲ್ಲಾ ಹಳೆ ರಾಗಿ ತರಕೆ ಹೋಂಟೋದ್ಮೇಲೆ ರಾಜಕೀಯದೇಲಿ ಫೇಕು ಮರ್ಯಾದೆ ಮೇಂಟೇನ್ ಮಾಡೋ ಆಗಂತುಕ-ಹೋಗಂತುಕರೇ ಜಾಸ್ತಿಯಾಗ್ಯವ್ರೆ. ಈಗ ಡೀಪ್‌ಫೇಕ್ ತಂತ್ರಜ್ಞಾನ ಬಳಸಿಕ್ಯಂದು ಹಳೇ ಘನವಂತರನ್ನೆಲ್ಲಾ ಜೀವಂತ ಮಾಡಿ ಅವರ ಬಾಯಲ್ಲಿ ನಾಕು ಒಳ್ಳೆ ಮಾತು ಹೇಳಿಸಿ ಮಕ್ಕುಗಿಸಿದ್ರೆ ಕುಲಗೆಟ್ಟ ರಾಜಕೀಯ ಸುದ್ದಾಯ್ತದೇನೊ ಅಂತ ಅಂದ್ಕತಿದೀನಿ’ ಎಂದು ತಮ್ಮ ಮನಸ್ಸು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT