ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T 20 World cup: ಅಫ್ಗಾನಿಸ್ತಾನಕ್ಕೆ ಸವಾಲಾಗದ ಯುಗಾಂಡ

ರಶೀದ್ ಬಳಗಕ್ಕೆ 125 ರನ್ ಜಯ; ಫಜಲ್ಹಖ್‌ಗೆ 9 ಕ್ಕೆ5 ವಿಕೆಟ್
Published 4 ಜೂನ್ 2024, 12:54 IST
Last Updated 4 ಜೂನ್ 2024, 12:54 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್‌ (ಗಯಾನ): ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜರ್ದಾನ್‌ ಅರ್ಧ ಶತಕಗಳನ್ನು ಬಾರಿಸಿದ ನಂತರ ಎಡಗೈ ವೇಗದ ಬೌಲರ್‌ ಫಜಲ್ಹಕ್ ಫರೂಖಿ (9ಕ್ಕೆ5) ಅವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಯುಗಾಂಡಾ ತಂಡವನ್ನು ಸೋಮವಾರ 125 ರನ್‌ಗಳಿಂದ ಸೋಲಿಸಿ ಅಫ್ಗಾನಿಸ್ತಾನ ಟಿ20 ವಿಶ್ವಕಪ್‌ ಅಭಿಯಾನವನ್ನು ಉತ್ತಮವಾಗಿ ಆರಂಭಿಸಿತು.

ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ಆಡಿದ್ದ ಗುರ್ಬಾಜ್‌ 45 ಎಸೆತಗಳಲ್ಲಿ 76 ರನ್ ಬಾರಿಸಿದರೆ, ಅವರ ಜೊತೆಗಾರ ಜದ್ರಾನ್ 46 ಎಸೆತಗಳಲ್ಲಿ 70 ರನ್ ಹೊಡೆದರು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಅಫ್ಗಾನಿಸ್ತಾನ 5 ವಿಕೆಟ್‌ಗೆ 183 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಮೊದಲ ವಿಕೆಟ್‌ಗೆ ಗುರ್ಬಾಜ್ ಮತ್ತು ಜದ್ರಾನ್ 14.3 ಓವರುಗಳಲ್ಲಿ 154 ರನ್ ಪೇರಿಸಿದ್ದರು. ಪವರ್‌ ಪ್ಲೇ ಅವಧಿಯೊಳಗೆ ತಂಡ ಓವರೊಂದಕ್ಕೆ 11ರಂತೆ ರನ್ ಗಳಿಸಿತ್ತು.

ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾದ ಫರೂಖಿ 4 ಓವರುಗಳಲ್ಲಿ ಬರೇ 9 ರನ್ ಕೊಟ್ಟು ಐದು ವಿಕೆಟ್ ಕಿತ್ತು ಯುಗಾಂಡ ಬ್ಯಾಟಿಂಗ್ ಕ್ರಮಾಂಕ ಧ್ವಂಸಗೊಳಿಸಿದರು. ಅವರಿಗೆ ಎರಡು ಬಾರಿ ಹ್ಯಾಟ್ರಿಕ್ ಅವಕಾಶ ಸ್ವಲ್ಪದರಲ್ಲೇ ತಪ್ಪಿತು. ಮೊದಲ ವಿಶ್ವಕಪ್ ಆಡಿದ ಆಫ್ರಿಕದ ಈ ತಂಡ 16 ಓವರುಗಳಲ್ಲಿ 58 ರನ್ನಿಗೆ ಪತನಗೊಂಡಿತು.

ಮೊದಲ ಸಲ ಐದು ವಿಕೆಟ್‌ ಗೊಂಚಲು ಪಡೆದ ಫರೂಖಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

‘ಇದು ನಮಗೆ ದೊರೆತ ಉತ್ತಮ ಆರಂಭ. ಎದುರಾಳಿ ಯಾರೆಂಬುದು ಮುಖ್ಯವಲ್ಲ. ಕೆಲವು ವಾರಗಳಿಂದ ನಾವು ಶ್ರಮಪಟ್ಟು ತಯಾರಿ ನಡೆಸಿದ್ದೆವು. ಆರಂಭ ಆಟಗಾರರು ಒಳ್ಳೆಯ ಆರಂಭ ಕೊಟ್ಟರು. ನಮ್ಮ ಬೌಲಿಂಗ್ ನೋಡಿದಾಗ ತಂಡದ ಸಾಂಘಿಕ ಪ್ರಯತ್ನ ಎದ್ದುಕಾಣುತ್ತದೆ’ ಎಂದು ನಾಯಕ ರಶೀದ್ ಖಾನ್ ಹೇಳಿದರು. ಅವರು ಇನಿಂಗ್ಸ್‌ನ ಕೊನೆಯ ಎರಡು ವಿಕೆಟ್ ಪಡೆದರು.

‘ಇದೇ ನಮ್ಮ ತಂಡದ ಸೊಬಗು. ನಮಗೆ ಸಾಕಷ್ಟು ಆಯ್ಕೆಗಳಿರುವ ಕಾರಣ ನಾಯಕನಾಗಿ ನನ್ನ ಕೆಲಸ ಸುಲಭವಾಯಿತು’ ಎಂದು ವಿಶ್ವದ ಟಿ20 ಕ್ರಿಕೆಟ್‌ನ ಯಶಸ್ವಿ ಸ್ಪಿನ್ನರ್ ಪ್ರತಿಕ್ರಿಯಿಸಿದರು.

ಫರೂಖಿ ಅವರ ಮೊದಲ ಎಸೆತದಲ್ಲಿ ಬೌಂಡರಿಗೆ ಹೋಯಿತು. ಆದರೆ ಆಕರ್ಷಕ ಇನ್‌ಸ್ವಿಂಗರ್‌ನಲ್ಲಿ ರೊನಕ್ ಪಟೇಲ್ ಅವರು ಬೌಲ್ಡ್‌ ಆದರು. ಇಂಥದ್ದೇ ಎಸೆತಕ್ಕೆ ರೋಜರ್ ಮುಕಾಸ ಲೆಗ್‌ಬಿಫೋರ್‌ ಬಲೆಗೆ ಬಿದ್ದರು. ನವೀನ್ ಉಲ್ ಹಕ್ ಸಹ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಪಡೆದಾಗ, ಯುಗಾಂಡ ತಂಡದ ಸ್ಥಿತಿ 18ಕ್ಕೆ5. 13ನೇ ಓವರಿನಲ್ಲಿ ಎರಡನೇ ಸ್ಪೆಲ್‌ಗೆ ಮರಳಿದ ಫರೂಕಿ ಮತ್ತೆ ಮೂರು ವಿಕೆಟ್‌ ಪಡೆದರು.

ಅಫ್ಗಾನಿಸ್ತಾನ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ನ್ಯೂಜಿಲೆಂಡ್‌ ವಿರುದ್ಧ ಜೂನ್‌ 8ರಂದು ಇಲ್ಲಿಯೇ ಆಡಲಿದೆ.

ಸ್ಕೋರುಗಳು: ಅಫ್ಗಾನಿಸ್ತಾನ: 20 ಓವರುಗಳಲ್ಲಿ 5 ಕ್ಕೆ183 (ರಹಮಾನುಲ್ಲಾ ಗುರ್ಬಾಜ್ 76, ಇಬ್ರಾಹಿಂ ಜದ್ರಾನ್ 70, ಮೊಹಮ್ಮದ್ ನಬಿ ಔಟಾಗದೇ 14; ಕಾಸ್ಮಸ್‌ ಕೆವುಟ 25ಕ್ಕೆ2, ಬ್ರಯಾನ್ ಮಸಾಬ 21ಕ್ಕೆ2); ಯುಗಾಂಡ: 16 ಓವರುಗಳಲ್ಲಿ 58 (ರಿಯಾಜತ್ ಅಲಿ ಶಾ 11, ರಾಬಿನ್ಸನ್ ಒಬುಯಾ 14; ಫಜಲ್ಹಕ್ ಫಾರೂಕಿ 9ಕ್ಕೆ5, ನವೀನ್ ಉಲ್ ಹಕ್ 4ಕ್ಕೆ2, ರಶೀದ್‌ ಖಾನ್‌ 12ಕ್ಕೆ2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT