ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕುತಂತ್ರಕ್ಕೆ ಪ್ರಜ್ಞಾಪೂರ್ವಕವಾಗಿ ಕೈಜೋಡಿಸಿರುವ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

‘ಯಡಿಯೂರಪ್ಪ ಮತ್ತು ಸಚಿವ ಆರ್. ಅಶೋಕ್ ಮೇಲೆ ಮೊಕದ್ದಮೆ ಹೂಡಲು ಅನುಮತಿ ಕೊಡಬೇಡಿ’ ಎಂಬ ಸಚಿವ ಸಂಪುಟ ನಿರ್ಣಯ ಕುರಿತು ‘ಕಳ್ಳನೇ ಪೊಲೀಸರನ್ನು ನಿಂದಿಸಿದಂತೆ’ ಎಂದು ರಾಜ್ಯಪಾಲರು ಪ್ರತಿಕ್ರಿಯೆ ನೀಡಿರುವುದಕ್ಕೆ ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ, ಸಚಿವ ಸಂಪುಟ ಹಾಗೂ ರಾಜ್ಯದ ಜನರನ್ನು ಅವಮಾನಿಸುವಂಥ ಹೇಳಿಕೆಯನ್ನು ಭಾರದ್ವಾಜ್ ನೀಡಿದ್ದಾರೆ. ಈ ಹೇಳಿಕೆ ನೀಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಅವರು ಹೇಳಿರುವ ಕಳ್ಳ ಯಾರು’ ಎಂದು ಪ್ರಶ್ನಿಸಿದರು.‘ಕ್ವಟ್ರೋಚಿ ದೇಶದಿಂದ ಹೊರ ಹೋಗಲು ಅವಕಾಶ ಕೊಟ್ಟವರ್ಯಾರು? ಜಪ್ತು ಮಾಡಿದ ಬ್ಯಾಂಕ್ ಖಾತೆಯಿಂದ ಹಣ ವಾಪಸ್ ಪಡೆಯಲು ಸಹಕರಿಸಿದವರು ಯಾರು ಎಂಬ ಸತ್ಯ ಪ್ರತಿಯೊಬ್ಬರಿಗೂ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರು ರಾಜಭವನವನ್ನು ಕಾಂಗ್ರೆಸ್ ಕಚೇರಿಯಾಗಿ ಪರಿವರ್ತಿಸಿದ್ದಾರೆ. ಕಾಂಗ್ರೆಸ್ ಮೇಲಿನ ನಿಷ್ಠೆ ಪ್ರದರ್ಶಿಸಲು ಸಂವಿಧಾನದ ಇತಿಮಿತಿ ಮೀರಿ ವರ್ತಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕವಾದ ಸರ್ಕಾರದ ಜತೆ ಸಂಘರ್ಷಕ್ಕಿಳಿದಿರುವ ಅವರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಬಜೆಟ್ ಅಧಿವೇಶನದಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ರಾಜ್ಯಪಾಲರು ಹೆಜ್ಜೆ ಹೆಜ್ಜೆಗೂ ರಾಜ್ಯ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಪಕ್ಷಾಂತರಿಗಳ ಅನರ್ಹತೆಗೆ ಮುಂದಾಗಬಾರದು ಎಂದು ವಿಧಾನಸಭೆಯ ಸ್ಪೀಕರ್‌ಗೆ ಪತ್ರ ಬರೆದರು. ಇದು ಪ್ರಯೋಜನಕ್ಕೆ ಬರದಿದ್ದಾಗ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಇದಾದ 24 ಗಂಟೆ ಒಳಗೆ ನಿಲುವು ಬದಲಿಸಿ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿಗೆ ಸೂಚಿಸಿದರು’ ಎಂದು ವಿವರಿಸಿದರು.

‘ಈಗ ಯಾರೋ ಕೊಟ್ಟ ದೂರಿನ ಸಂಬಂಧವಾಗಿ ಯಡಿಯೂರಪ್ಪ ಮತ್ತು ಅಶೋಕ್ ಮೇಲೆ ಕೇಸ್ ಹಾಕಲು ಅನುಮತಿ ನೀಡಿದ್ದಾರೆ. ಸಂವಿಧಾನದ ರಕ್ಷಕರು ಹಾಗೂ ರಾಜ್ಯದ ಪಾಲಕರು ಆಗಬೇಕಾದ ಭಾರದ್ವಾಜ್ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇವರನ್ನು ಹಿಂದೆ ಕರೆಸಿಕೊಳ್ಳಬೇಕಾದ ಕಾಂಗ್ರೆಸ್ ಕೂಡಾ ಸರ್ಕಾರ ಅಭದ್ರಗೊಳಿಸುವ ಕುತಂತ್ರದಲ್ಲಿ ಭಾಗಿಯಾಗಿದೆ. ಇದು ಆ ಪಕ್ಷಕ್ಕೆ ತಿರುಗು ಬಾಣವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT