ನವದೆಹಲಿ (ಪಿಟಿಐ): ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆಯಾಗಿ ಸುಷ್ಮಾ ಸ್ವರಾಜ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದು, ಈ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೆಲ ಕಾಲ ವಿದೇಶಾಂಗ ವ್ಯವಹಾರ ಖಾತೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದರು. ಕಾಕತಾಳೀಯ ಎಂಬಂತೆ ಮತ್ತೊಬ್ಬ ಮಹಿಳೆ ಸುಜಾತಾ ಸಿಂಗ್ ವಿದೇಶಾಂಗ ವ್ಯವಹಾರ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ.
ಹಲವು ದಾಖಲೆ: 1977ರಲ್ಲಿ ದೇವಿಲಾಲ್ ನೇತೃತ್ವದ ಹರಿಯಾಣ ಸರ್ಕಾರದಲ್ಲಿ ಸುಷ್ಮಾ 25ನೇ ವಯಸ್ಸಿನಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಸಂಪುಟ ದರ್ಜೆಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಂಥ ಹಲವಾರು ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.
ದೆಹಲಿ ಮೊದಲ ಮಹಿಳಾ ಮುಖ್ಯಮಂತ್ರಿ ಹಾಗೂ ರಾಜಕೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತಾರೆ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. ವಿದೇಶಾಂಗ ವ್ಯವಹಾರಗಳ ಖಾತೆ ಜತೆ ಸಾಗರೋತ್ತರ ವ್ಯವಹಾರಗಳ ಖಾತೆಯ ಹೆಚ್ಚುವರಿ ಹೊಣೆಯೂ ಸುಷ್ಮಾ ಹೆಗಲೇರಿದೆ. ನೆರೆಯ ಚೀನಾ, ಪಾಕಿಸ್ತಾನಗಳ ಜತೆಗಿನ ಭಾರತದ ಬಾಂಧವ್ಯ ವೃದ್ಧಿ ಸೇರಿ ಹಲವಾರು ಸವಾಲುಗಳು ಅವರ ಮುಂದಿವೆ.