ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ವಂಚಿತ 2 ಕೋಟಿ ಜನ

Last Updated 8 ಅಕ್ಟೋಬರ್ 2015, 19:55 IST
ಅಕ್ಷರ ಗಾತ್ರ

ಬೇಗು ಸರಾಯ್ (ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವಿದು. ನಾಲ್ಕು ವರ್ಷದ ಹಿಂದೆ ಧೀರಜ್‌ ಚೌಧರಿ ಎನ್ನುವ ತರಕಾರಿ ವ್ಯಾಪಾರಿಯನ್ನು ಮದುವೆಯಾಗಿದ್ದ 30ವರ್ಷದ ಮಹಿಳೆ ಸುನಿತಾ ದೇವಿ ಮನೆಯಲ್ಲಿ ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಪತಿಯನ್ನು ತ್ಯಜಿಸಿದ್ದಾರೆ.

ನಾಲ್ಕು ವರ್ಷದಿಂದ ಸತತವಾಗಿ ಶೌಚಾಲಯ ಕಟ್ಟುವಂತೆ ಪೀಡಿಸಿದರೂ ಒಂದಲ್ಲೊಂದು ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದ ಪತಿಗೆ ಬೇರೆ ದಾರಿ ಇಲ್ಲದೆ ಮಹಿಳೆ ಮೇನಲ್ಲಿ ವಿದಾಯ ಹೇಳಿದ್ದಾರೆ. ಗಂಡನ ಜತೆ ಶೌಚಾಲಯ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ವಿಫಲವಾದ ಬಳಿಕ ಅವರು ಕಠಿಣ ನಿರ್ಧಾರ ಮಾಡಿದ್ದಾರೆ.

‘ಶೌಚಾಲಯವಿಲ್ಲದಕ್ಕೆ ಪತ್ನಿ ವಿಚ್ಛೇದನ ಕೊಟ್ಟಿದ್ದಾರೆ. ಮನೆಯಲ್ಲಿ ದುಡಿಯುವ ಮನುಷ್ಯ ನಾನೊಬ್ಬನೆ. ಈಚೆಗೆ ತಂದೆ ತೀರಿಕೊಂಡಿದ್ದರಿಂದಾಗಿ ಸಂಕಷ್ಟಕ್ಕೆ ಸಿಕ್ಕಿದ್ದೇನೆ, ಶೌಚಾಲಯ ನಿರ್ಮಾಣಕ್ಕೆ ಹಣವಿಲ್ಲ’ ಎಂದು ಧೀರಜ್‌ ಚೌಧರಿ ಒಪ್ಪಿಕೊಂಡಿದ್ದಾರೆ.

ಇಲ್ಲಿ ಶೌಚಾಲಯವಿಲ್ಲದ ಗ್ರಾಮಗಳು ಲೆಕ್ಕವಿಲ್ಲ. ಬಹಳಷ್ಟು ಹೆಣ್ಣುಮಕ್ಕಳು ಇದೇ ಕಾರಣಕ್ಕೆ ಅತ್ತೆ ಮನೆ ತೊರೆದ ನಿದರ್ಶನಗಳು ಸಾಕಷ್ಟಿವೆ. ಬಯಲು ಶೌಚವನ್ನು ನಿರ್ಮೂಲನೆ ಮಾಡಿರುವ ಗ್ರಾಮಗಳು ದೇಶದಲ್ಲಿ ಸಿಗುವುದು ಕಷ್ಟ. ಆದರೆ, ಬಿಹಾರ, ಜಾರ್ಖಂಡ್‌ನಲ್ಲಿ ಇದು ದೊಡ್ಡ ಸಮಸ್ಯೆ. ಅದಕ್ಕೆ ಜನರ ಬಡತನ ಹಾಗೂ ಬದಲಾವಣೆ ಒಪ್ಪಿಕೊಳ್ಳದ ಮನಸ್ಥಿತಿಯೂ ಕಾರಣ.

ಶೌಚಾಲಯಗಳು ಇಲ್ಲದಿರುವುದು ಮಹಿಳೆಯರಿಗೆ ಒಂದು ರೀತಿ ಶಿಕ್ಷೆ. ಬಯಲಿಗೆ ಹೋಗುವುದು ಅಪಮಾನ. ಹೊತ್ತು ಮೂಡುವ ಮುನ್ನ ಇಲ್ಲವೆ ಹೊತ್ತು ಮುಳುಗಿದ ಮೇಲೆ ನೈಸರ್ಗಿಕ ಕರೆಗೆ ಹೋಗಬೇಕು. ಗಂಗಾ ನದಿ ತೀರದಲ್ಲಿರುವ ಬಿಹಾರದ ಹಳ್ಳಿಗಳಲ್ಲಿ ಸಮಸ್ಯೆ ಅತ್ಯಂತ ಗಂಭೀರ. ಸುತ್ತಲೂ ಮೊಣಕಾಲುದ್ದ ನೀರು. ಅದರ ನಡುವೆಯೇ ಊರುಗಳು. ಪ್ರತಿ ಹಳ್ಳಿಯಲ್ಲಿ ನೂರಾರು ಮನೆಗಳು. ಯಾವ ಮನೆಯಲ್ಲೂ ಶೌಚಾಲಯ ಇದ್ದಂತಿಲ್ಲ.

ಎಲ್ಲ ಕಡೆಗಳಲ್ಲೂ ನೀರಿರುವುದರಿಂದ ನೈಸರ್ಗಿಕ ಕರೆಗೆ ಜಮೀನು, ಗಿಡ ಗಂಟೆಗಳ ಮರೆಗೂ ಹೋಗುವಂತಿಲ್ಲ. ಅನಿವಾರ್ಯವಾಗಿ ರಸ್ತೆ ಮೇಲೇ ಕೂರಬೇಕು. ಬೇಗು ಸರಾಯ್‌ ಪಟ್ಟಣದಿಂದ ಕಗಾಡಿಯಾಕ್ಕೆ ಹೋಗುವ ದಾರಿಯಲ್ಲಿ ಹತ್ತಾರು ಹಳ್ಳಿಗಳಿವೆ. ಊರಿನ ಮುಂದಿನ ಕಿರಿದಾದ ರಸ್ತೆಗಳಲ್ಲಿ ಓಡಾಡುವವರು ಮೂಗು ಮುಚ್ಚಿಕೊಳ್ಳುತ್ತಾರೆ. ರಸ್ತೆ ಇಕ್ಕೆಲಗಳಲ್ಲೂ ಮಲದ ದುರ್ವಾಸನೆ ಅಸಹನೀಯವೆಂದು ಹಳ್ಳಿಗರೇ ಹೇಳುತ್ತಾರೆ.

‘ಟ್ಯಾಕ್ಸಿ, ಟ್ರ್ಯಾಕ್ಟರ್‌ ಚಾಲಕರು ರಸ್ತೆ ಬದಿಗೆ ವಾಹನ ಇಳಿಸಲು ಹಿಂಜರಿಯುತ್ತಾರೆ. ಎದುರಿಗೆ ಗಾಡಿ ಬಂದರೆ ಸರ್ಕಸ್‌ ಮಾಡುತ್ತಾರೆ. ‘ಹಳ್ಳಿ ರಸ್ತೆಗಳಲ್ಲಿ ಮಲ ವಿಸರ್ಜನೆ ಮಾಮೂಲಾಗಿದೆ. ರಸ್ತೆ ಬದಿಗೆ ಕಾರು ಒಯ್ಯಲು ಮನಸಾಗುವುದಿಲ್ಲ. ಟಯರ್‌ಗೆ ಹೊಲಸು ಮೆತ್ತಿಕೊಂಡರೆ ನಾನೇ ತೊಳೆಯಬೇಕು’ ಎಂದು ಟ್ಯಾಕ್ಸಿ ಚಾಲಕ ಕೃಷ್ಣ ಬೇಸರ ವ್ಯಕ್ತಪಡಿಸಿದರು.

ಕಗಾಡಿಯಾ ಸಮೀಪದ ಪುಟ್ಟ ಹಳ್ಳಿ ಬದೋಡದ ರೈತ ಅಶೋಕ್‌ ಸಮಸ್ಯೆಗೆ ಕಾರಣವೇನೆಂದು ವಿವರಿಸಿದರು. ಹಳ್ಳಿಯ ಸುತ್ತ ನಿಂತ ನೀರು ತೋರಿಸಿ, ಶೌಚಾಲಯ ಎಲ್ಲಿ ಕಟ್ಟುವುದು ಹೇಳಿ ಎಂದು ಕೇಳಿದರು. ನೀರಿನೊಳಗೆ ಮನೆಗಳೇ ಉಳಿಯುವುದಿಲ್ಲ. ಇನ್ನೂ ಶೌಚಾಲಯ ಉಳಿಯುವುದೆ ಎಂದು ಪ್ರಶ್ನಿಸಿದರು. ಈ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ.

ಈ ವರ್ಷ ಸರಿಯಾಗಿ ಮಳೆ ಬಿದ್ದಿಲ್ಲ. ಆದರೂ ಜಮೀನಿನಲ್ಲಿ ಇಷ್ಟೊಂದು ನೀರಿದೆ. ಅಕಸ್ಮಾತ್‌ ಮಳೆ ಬಂದರೆ ನಮ್ಮ ಪರಿಸ್ಥಿತಿ ಹೇಳಬಾರದು ಎಂದು ಪಕ್ಕದಲ್ಲಿದ್ದ ರೈತ ಚಂದ್ರೇಶ್‌ ದನಿಗೂಡಿಸಿದರು. ಬಿಹಾರದ ಜನಸಂಖ್ಯೆ 10 ಕೋಟಿ ದಾಟಿದೆ. 2012ರ ಸಮೀಕ್ಷೆ ಪ್ರಕಾರ ಶೇ.83ರಷ್ಟು ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಕತ್ತಲಲ್ಲಿ ಬಯಲಿಗೆ ಹೋಗುವ ಮಹಿಳೆಯರ ಮೇಲೆ ಅತ್ಯಾಚಾರ, ಮಾನಭಂಗ ಪ್ರಕರಣಗಳು ನಡೆದಿವೆ. ಅಧಿಕೃತ ಅಂದಾಜಿನ ಪ್ರಕಾರ ಬಯಲಿಗೆ ಹೋಗುವ ಮಹಿಳೆಯರ ಮೇಲೆ ಸರಾಸರಿ ತಿಂಗಳಿಗೆ ಒಂದರಂತೆ ಅತ್ಯಾಚಾರ ನಡೆಯುತ್ತಿವೆಯಂತೆ.

ಅಂಗನವಾಡಿ ಕೇಂದ್ರಗಳು, ಸರಕಾರಿ ಶಾಲೆಗಳಲ್ಲೂ ಶೌಚಾಲಯಗಳಿಲ್ಲ. ಕೇಂದ್ರದ ಮಾರ್ಗಸೂಚಿ ಪ್ರಕಾರ ಹತ್ತು ಮಕ್ಕಳಿಗೆ ಒಂದರಂತೆ ಶೌಚಾಲಯ ಇರಬೇಕು. ಪ್ರತಿಷ್ಠಿತ ಕಾರ್ಪೊರೇಟ್‌ ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.

10 ವರ್ಷದಿಂದ ಬಿಹಾರದಲ್ಲಿ ಆಡಳಿತ ನಡೆಸಿರುವ ನಿತೀಶ್‌  ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ರಾಜ್ಯಕ್ಕೆ ನಿಗದಿಪಡಿಸಿರುವ ಶೌಚಾಲಯದ ಗುರಿಯನ್ನು ಎರಡು ಕೋಟಿಗೆ ವಿಸ್ತರಿಸಬೇಕು ಎಂದು ಕೇಂದ್ರಕ್ಕೂ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ನಿರ್ಮಲ ಗ್ರಾಮ ಯೋಜನೆಯಡಿ ಪ್ರತಿ ಶೌಚಾಲಯ ನಿರ್ಮಾಣಕ್ಕೆ  ₹10ಸಾವಿರ ನೆರವು ನೀಡುತ್ತಿದೆ. ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಅಡಿ ನೆರವು ಮುಂದುವರಿದಿದೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ‘ಮೊದಲು ಶೌಚಾಲಯ, ಅನಂತರ ದೇವಾಲಯ’ ಎಂದಿದ್ದಾರೆ. ಹೆಣ್ಣು ಮಕ್ಕಳು ನೈಸರ್ಗಿಕ ಕರೆಗೆ ಬಯಲಿಗೆ ಹೋಗುವುದು ಅಪಮಾನದ ವಿಷಯ. ಇದು ಯಾವ ಸರ್ಕಾರಕ್ಕೂ ಗೌರವ ತರುವುದಿಲ್ಲ ಎಂದಿದ್ದಾರೆ.

ಜೆಡಿಯು ಸರ್ಕಾರ 2020ರ ವೇಳೆಗೆ ಎಲ್ಲ ಮನೆಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಆದರೆ, ಈಗಿನ ವೇಗದಲ್ಲೇ ಯೋಜನೆ ಮುಂದುವರಿದರೆ ಹದಿನೈದು ವರ್ಷವಾದರೂ ಗುರಿ ಮುಟು್ಟುವುದು ಕಷ್ಟ.

ಬಿಜೆಪಿ ನಾಯಕರು ಚುನಾವಣೆ ಪ್ರಚಾರದಲ್ಲಿ ಬಿಹಾರವನ್ನು ಸಂಪೂರ್ಣ ವಿಕಾಸಗೊಳಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ರಾಜ್ದದ ಉದ್ದಗಲಕ್ಕೂ ಹಾಕಿರುವ ದೊಡ್ಡ ದೊಡ್ಡ ಪೋಸ್ಟರ್‌ಗಳಲ್ಲಿ ‘ಬದಲಿಯೆ ಸರ್ಕಾರ್‌, ಬದಲಿಯೆ ಬಿಹಾರ್‌’ ಎಂಬ ಘೋಷವಾಕ್ಯ ಹಾಕಲಾಗಿದೆ. ಸಾರ್ವಜನಿಕ ಭಾಷಣದಲ್ಲೂ ಬಣ್ಣ ಬಣ್ಣದ ಭರವಸೆಗಳನ್ನು ಕೊಡುತ್ತಿದ್ದಾರೆ. ನಿತೀಶ್‌ ಏನೂ ಮಾಡಿಲ್ಲ ಎಂದೂ ಗೂಬೆ ಕೂರಿಸುತ್ತಿದ್ದಾರೆ.

  ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಬಿಹಾರದ ಜನ ಸಿಕ್ಕಿಕೊಂಡಿದ್ದಾರೆ. ರಾಜ್ಯದಲ್ಲಿ ಒಂಬತ್ತು ವರ್ಷ ಬಿಜೆಪಿ– ಜೆಡಿಯು ಸಮ್ಮಿಶ್ರ ಸರ್ಕಾರವಿತ್ತು. ಸರ್ಕಾರ ಮನಸು ಮಾಡಿದ್ದರೆ ಸಂಪೂರ್ಣವಾಗಿ ಬಯಲು ಶೌಚ ನಿರ್ಮೂಲನೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ರಾಜ್ಯ ಸರ್ಕಾರದ ವೈಫಲ್ಯದಲ್ಲಿ ಬಿಜೆಪಿ ಪಾತ್ರವೂ ಇದೆ ಎನ್ನುವುದನ್ನು ಬಿಜೆಪಿ ನಾಯಕರು ಮರೆಮಾಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT