ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆ ಇನ್ನೂ ಗೊಂದಲ

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಜಮ್ಮು ಕಾಶ್ಮೀರ­ದಲ್ಲಿ ಸರ್ಕಾರ ರಚನೆ ಕಸರತ್ತು ಇನ್ನೂ ಗೊಂದಲದ ಗೂಡಾಗಿಯೇ ಇದೆ. ಈ ನಡುವೆ ಬಿಜೆಪಿ ಹಾಗೂ ಪಿಡಿಪಿ ಸರ್ಕಾರ ರಚನೆ ಸಾಧ್ಯತೆ­  ಪರಿಶೀಲಿಸಲು ವಿವಿಧ ಪಕ್ಷಗಳ ಜತೆ ಮಾತುಕತೆ ನಡೆಸುತ್ತಿವೆ. ೨೮ ಸ್ಥಾನಗಳನ್ನು ಗೆದ್ದಿ­ರುವ ಪಿಡಿಪಿ ಒಂದೋ ಬಿಜೆಪಿ  (೨೫) ಜತೆ ಮೈತ್ರಿ ಮಾಡಿಕೊಳ್ಳುತ್ತದೆ ಅಥವಾ ಕಾಂಗ್ರೆಸ್‌ (೧೨) ಪಕ್ಷ­ದೊಂ­ದಿಗೆ ಸೇರಿ­ಕೊಂಡು ಎನ್‌ಸಿ ಬಾಹ್ಯ ಬೆಂಬ­ಲ­ದೊಂದಿಗೆ  ಸರ್ಕಾರ ರಚಿಸು­ತ್ತದೆ ಎನ್ನುವ ಊಹಾ­ಪೋಹಗಳು ಇನ್ನೂ ಕೇಳಿಬರುತ್ತಿವೆ. ಇದೇ ವೇಳೆ, ಬಿಜೆಪಿಯೊಂದಿಗೆ ಮುಖ್ಯಮಂತ್ರಿ ಅವಧಿಯನ್ನು ಹಂಚಿ­ಕೊಳ್ಳಲು ಪಕ್ಷ ಸಿದ್ಧವಿಲ್ಲ ಎಂದು ಪಿಡಿಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಹಾಗೂ ಕೆಲವು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಪಕ್ಷವು ಬಹುಮತಕ್ಕೆ ಬೇಕಾದ ೪೪ ಸ್ಥಾನ­ಗ­ಳನ್ನು ಪಡೆದುಕೊಳ್ಳಲಿದೆ ಎಂದು ಪಿಡಿಪಿಯ ಮತ್ತೊಬ್ಬ ಮುಖಂಡರು ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಪಕ್ಷವು ಪಿಡಿಪಿ ಹಾಗೂ  ಆರು ಪಕ್ಷೇತರ ಶಾಸಕ­ರೊಂದಿಗೆ ಸಂಪರ್ಕ­­ದಲ್ಲಿದೆ ಎಂದು ಕಾಂಗ್ರೆಸ್‌ ವಕ್ತಾರ ಸಲ್ಮಾನ್‌ ನಿಜಾಮಿ ಅವರು ಜಮ್ಮುವಿನಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವುದಕ್ಕೆ ಪಕ್ಷ  ಪ್ರಮುಖ ಮುಖಂ­ಡರ ಜತೆ ಸಮಾಲೋಚನೆ ನಡೆ­ಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದ್ದಾರೆ.

‘ಕಾಶ್ಮೀರದ ಅಭಿವೃದ್ಧಿಗೆ ಪ್ರಧಾನಿ ದೊಡ್ಡ ಕನಸು ಕಂಡಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸರ್ಕಾರವನ್ನು ನಾವು ರಚಿಸಬೇಕಾಗಿದೆ’ ಎಂದು  ರಾಮ್‌ಮಾಧವ್‌ ತಿಳಿಸಿದ್ದಾರೆ. ಪಿಡಿಪಿಯ ಮುಝಫರ್‌ ಹುಸೇನ್‌ ಬೇಗ್‌ ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರ ಜತೆ ಅವರು ಸರಣಿ ಸಭೆ ನಡೆಸಿದರು.

‘ಪಿಡಿಪಿಯೊಂದಿಗಿನ ಮಾತುಕತೆ ಆರಂಭಿಕ ಹಂತದಲ್ಲಿದೆ. ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ರಾಜ್ಯ ಮಾತ್ರವಲ್ಲದೆ ದೇಶ­ದಾದ್ಯಂತ ಗೌರವಕ್ಕೆ ಪಾತ್ರರಾದ­ವರು. ಎನ್‌ಸಿ ಕೂಡ ಗಣನೀಯ ಸ್ಥಾನ­ಗಳನ್ನು ಪಡೆದುಕೊಂಡಿದ್ದು, ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ­ಯಾ­ಗಿ­ದ್ದಾಗ ಎನ್‌ಡಿಎ ಮೈತ್ರಿ­ಕೂಟ­ದಲ್ಲಿ ಇತ್ತು’ ಎಂದು ಮಾಧವ್‌ ಹೇಳಿದ್ದಾರೆ.

ಆದರೆ ಪಿಡಿಪಿ ಹಾಗೂ ಎನ್‌ಸಿ ಪೈಕಿ ಬಿಜೆಪಿ ಯಾವ ಪಕ್ಷದ ಜತೆ ಮೈತ್ರಿಮಾಡಿಕೊಳ್ಳುತ್ತದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. 
ಇಲ್ಲಿ ಯಾವ ಪಕ್ಷದ ಜತೆ ಮೈತ್ರಿ ಎಂಬುದು ಮುಖ್ಯವಲ್ಲ. ಸ್ಥಿರ ಹಾಗೂ ವಿಶ್ವಾಸಾರ್ಹ ಸರ್ಕಾರ ಕೊಡುವುದು ಮುಖ್ಯವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT