ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಧೀನ ಪತ್ರ ಷರತ್ತು ಈಡೇರಿಕೆ: ಗ್ರಾಹಕರ ಆಗ್ರಹ ಸಿಂಧು

Last Updated 16 ಜುಲೈ 2012, 11:35 IST
ಅಕ್ಷರ ಗಾತ್ರ

 ಥಾಣೆ (ಪಿಟಿಐ): ಫ್ಲ್ಯಾಟ್ ಮಾರಾಟಕ್ಕೆ ಸಂಬಂಧಿಸಿದ ಕ್ರಯಪತ್ರದ ಷರತ್ತುಗಳಲ್ಲಿ ಸೇರ್ಪಡೆಯಾಗಿರದೇ ಇದ್ದರೂ ಸ್ವಾಧೀನ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ನಾಗರಿಕ ಪ್ರಾಧಿಕಾರವು (ನಗರ ಪಾಲಿಕೆ) ವಿಧಿಸುವ ಷರತ್ತುಗಳಿಗೆ ಕಟ್ಟಡ ನಿರ್ಮಾಣಗಾರರು ಬದ್ಧರಾಗಿರಬೇಕು ಎಂದು ಥಾಣೆ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಅಧ್ಯಕ್ಷ ಆರ್. ಬಿ. ಸೋಮಾನಿ ಮತ್ತು ಸದಸ್ಯರಾದ ಜ್ಯೋತಿ ಐಯ್ಯರ್ ಅವರನ್ನು ಒಳಗೊಂಡ ಗ್ರಾಹಕ ನ್ಯಾಯಾಲಯ ಪೀಠವು ಸರ್ವೋತ್ತಮ ಸಹಕಾರ ವಸತಿ ಸಂಘವು ನಗರದ ರಾಧಾಕೃಷ್ಣ ಡೆವಲಪರ್ಸ್ ವಿರುದ್ಧ ಸಲ್ಲಿಸಿದ್ದ ದೂರಿನ ಸಂಬಂಧ ಕಳೆದ ವಾರ ಈ ತೀರ್ಪು ನೀಡಿದೆ.

ಕ್ರಯಪತ್ರಕ್ಕೆ ಅನುಗುಣವಾಗಿ 2005ರ ಮಧ್ಯಾವಧಿಯಲ್ಲಿ 7 ಮಹಡಿಯ ಕಟ್ಟಡದ ನಿರ್ಮಾಣ ಪೂರ್ಣಗೊಂಡಿತ್ತು. ಆದರೆ ಮೊದಲ ಮುಂಗಾರು ಮಳೆಯ ಕಾಲಕ್ಕೇ ಕಟ್ಟಡದಲ್ಲಿ ಸೋರಿಕೆಗಳು ಕಂಡು ಬಂದವು. ಸಮಸ್ಯೆ ಬಗೆ ಹರಿಸಲು ಕಟ್ಟಡ ನಿರ್ಮಾಣಗಾರರು ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.
 
ಇದರ ಜೊತೆಗೆ ನಾಗರಿಕ ಪ್ರಾಧಿಕಾರವು ಸ್ವಾಧೀನ ಪ್ರಮಾಣ ಪತ್ರ ನೀಡುವ ವೇಳೆಯಲ್ಲಿ ವಿಧಿಸಿದ್ದ ಷರತ್ತುಗಳ ಪ್ರಕಾರ ಮಳೆ ನೀರು ಸಂಗ್ರಹ ಹಾಗೂ ನೀರು ಕಾಯಿಸುವ ಸೌರ ಘಟಕವನ್ನೂ ಅಳವಡಿಸಲಿಲ್ಲ ಎಂಬುದು ಸಹಕಾರ ವಸತಿ ಸಂಘದ ದೂರು.

ತಾನು ಸ್ವಂತ ಕಚೇರಿಗಾಗಿ ಬಳಸುತ್ತಿದ್ದ ಒಂದು ಫ್ಲ್ಯಾಟನ್ನೂ ಕಟ್ಟಡ ನಿರ್ಮಾಣಗಾರ ಸೊಸೈಟಿಗೆ ಹಿಂದಿರುಗಿಸಲಿಲ್ಲ ಎಂದೂ ಸೊಸೈಟಿ ಗ್ರಾಹಕ ನ್ಯಾಯಾಲಯದಲ್ಲಿ ದೂರಿತ್ತು.

ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತು ನೀರು ಕಾಯಿಸುವ ಸೌರ ಘಟಕ ಅಳವಡಿಸುವ ಭರವಸೆಯನ್ನು ಕ್ರಯಪತ್ರದಲ್ಲಿ ನೀಡಿರಲಿಲ್ಲ ಎಂದು ಕಟ್ಟಡ ನಿರ್ಮಾಣಗಾರರು ನ್ಯಾಯಾಲಯದಲ್ಲಿ ವಾದಿಸಿದರು.

ಏನಿದ್ದರೂ ನಗರ ಪಾಲಿಕೆಯು ಸ್ವಾಧೀನ ಪ್ರಮಾಣಪತ್ರ ನೀಡುವಾಗ ವಿಧಿಸುವ ಷರತ್ತುಗಳನ್ನು ಕಟ್ಟಡ ನಿರ್ಮಾಣಗಾರ ಈಡೇರಿಸಬೇಕು ಎಂದು ನ್ಯಾಯಾಲಯ ಹೇಳಿತು.

ಕಟ್ಟಡ ನಿರ್ಮಾಣಗಾರರು ವಿವಿಧ ಉಲ್ಲಂಘನೆಗಳಿಗಾಗಿ 9,41,549 ರೂಪಾಯಿಗಳನ್ನು ದಂಡವಾಗಿ ಸೊಸೈಟಿಗೆ ಪಾವತಿ ಮಾಡಬೇಕು ಎಂದೂ ಗ್ರಾಹಕ ನ್ಯಾಯಾಲಯ ಆಜ್ಞಾಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT