ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ 10 ನದಿಗಳು ಮಲಿನ: ಎನ್‌ಜಿಟಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ

Published 22 ಆಗಸ್ಟ್ 2024, 23:39 IST
Last Updated 22 ಆಗಸ್ಟ್ 2024, 23:39 IST
ಅಕ್ಷರ ಗಾತ್ರ

ನವದೆಹಲಿ: ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿರುವುದರಿಂದ ರಾಜ್ಯದ 10 ನದಿಗಳು ಕಲುಷಿತಗೊಂಡಿವೆ ಎಂದು ಕರ್ನಾಟಕ ಸರ್ಕಾರವೇ ಒಪ್ಪಿಕೊಂಡಿದೆ. 

ರಾಜ್ಯದ ನದಿಗಳು ಮಲಿನ ಗೊಂಡಿರುವ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಿದೆ.

ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ‘ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣಾ, ಕಾಗಿನ ಹಾಗೂ ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್‌ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದೆ. 

2019ರಿಂದ 2021ರ ನಡುವೆ ನದಿಗಳ ನೀರಿನ ಗುಣಮಟ್ಟ ಪರಿಶೀಲಿಸಿ ಸಿಪಿಸಿಬಿ 2022ರಲ್ಲಿ ವರದಿ ಬಿಡುಗಡೆ ಮಾಡಿತ್ತು. ‘ದೇಶದ 311 ನದಿಗಳು ಮಲಿನಗೊಂಡಿವೆ. ಅದರಲ್ಲಿ ಕರ್ನಾಟಕದ 17 ನದಿಗಳು ಸೇರಿವೆ’ ಎಂದು ತಿಳಿಸಿತ್ತು. ‘ಕಾಳಿ, ಯಗಚಿ, ಮಲಪ್ರಭಾ, ಕುಮಾರಧಾರ ಸೇರಿ ಐದು ನದಿಗಳ ನೀರಿನ ಮಟ್ಟ ಸುಧಾರಣೆ ಆಗಿರುವುದರಿಂದ ಮಲಿನ ನದಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ದಕ್ಷಿಣ ಪಿನಾಕಿನಿ, ತೆಂಪೆನೈ, ಶರಾವತಿ, ಗಂಗಾವಳಿ ಹಾಗೂ ಅಘನಾಶಿನಿ ನದಿಗಳನ್ನು ಕಲುಷಿತ ನದಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ತೆಂಪೆನೈ ನದಿಯು ರಾಜ್ಯದಲ್ಲಿ ಹರಿಯುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿತ್ತು. ಹೀಗಾಗಿ, ರಾಜ್ಯದ ಕಲುಷಿತ ನದಿಗಳ ಸಂಖ್ಯೆ 16ಕ್ಕೆ ಇಳಿದಿತ್ತು. ಇದೀಗ ಐದು ನದಿಗಳನ್ನು ಪಟ್ಟಿಯಿಂದ ಕೈಬಿಡುವಂತೆ ರಾಜ್ಯ ಸರ್ಕಾರ ಕೋರಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಸ್ತುವಾರಿ ಕೇಂದ್ರ ಜಾಲವು, ಆಯಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಹಯೋಗದೊಂದಿಗೆ ನಿಯಮಿತವಾಗಿ ನದಿಗಳು ಹಾಗೂ ಇತರ ಜಲಮೂಲಗಳ ಗುಣಮಟ್ಟದ ಮೇಲ್ವಿಚಾರಣೆ ನಡೆಸುತ್ತಿದೆ. ಕೃಷಿ ತ್ಯಾಜ್ಯ, ಬಯಲು ಬಹಿರ್ದೆಸೆ, ಪಟ್ಟಣ ಮತ್ತು ನಗರ ಪ್ರದೇಶಗಳ ಘನತ್ಯಾಜ್ಯ ಮುಂತಾದವು ನದಿಗಳ ಮಾಲಿನ್ಯದ ಮೂಲಗಳಾಗಿವೆ.

ಡಿಸೆಂಬರ್ ಅಂತ್ಯದೊಳಗೆ ಎಸ್‌ಟಿಪಿ

ಕಲುಷಿತ ನದಿಗಳ ದಡದಲ್ಲಿರುವ ಎಲ್ಲ ಪಟ್ಟಣ ಹಾಗೂ ನಗರಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಡಿಸೆಂಬರ್‌ ಅಂತ್ಯದೊಳಗೆ ಕಾರ್ಯಾರಂಭ ಮಾಡಲಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. 

ನದಿಗಳ ನೀರಿನ ಗುಣಮಟ್ಟ ಪರಿಶೀಲಿಸಲು 68 ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ವಿಶ್ಲೇಷಿಸಲಾಗುತ್ತದೆ. ನೈಜ ಸಮಯದ ಆಧಾರದಲ್ಲಿ ನೀರಿನ ಗುಣಮಟ್ಟದ ನಿರಂತರ ಮೇಲ್ವಿಚಾರಣೆಗಾಗಿ 17 ಕಲುಷಿತ ನದಿಗಳ ಉದ್ದಕ್ಕೂ 77 ಮೇಲ್ವಿಚಾರಣಾ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT