ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

11.50 ಲಕ್ಷ ಎಕರೆ ಒತ್ತುವರಿ ತೆರವಿಗೆ ತಡೆ: ಸಚಿವ ಈಶ್ವರ ಖಂಡ್ರೆ

ಮೂರು ಎಕರೆಗಿಂತ ಕಡಿಮೆ ಜಮೀನಿನ ರೈತರಿಗೆ ಬೇಡ ಆತಂಕ: ಸಚಿವ ಖಂಡ್ರೆ
Published 27 ಆಗಸ್ಟ್ 2024, 16:12 IST
Last Updated 27 ಆಗಸ್ಟ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂರು ಎಕರೆಗಿಂತ ಕಡಿಮೆ ಇರುವ ಜಮೀನು ಒತ್ತುವರಿ (ಪಟ್ಟಾ ಭೂಮಿ ಸೇರಿ) ತೆರವು ಮಾಡದಂತೆ ಸೂಚಿಸಲಾಗಿದೆ. ಸಣ್ಣ ಒತ್ತುವರಿದಾರರ ಜೀವನೋಪಾಯಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲು ಕೇಂದ್ರ ಸರ್ಕಾರವನ್ನೂ ಕೋರಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಮೂರು ಎಕರೆಗಿಂತ ಕಡಿಮೆ ವಿಸ್ತೀರ್ಣದ ಒತ್ತುವರಿಯ 86,352 ಪ್ರಕರಣಗಳಿವೆ. 11.50 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಈ ಕುರಿತು ಅಧಿವೇಶನದಲ್ಲೂ ಚರ್ಚೆಯಾಗಿದೆ ಎಂದಿದ್ದಾರೆ.

ಸಮಾಜ ಪರಿವರ್ತನ ಸಮುದಾಯ, ನಮ್ಮ ಬೆಂಗಳೂರು ಫೌಂಡೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿದೆ. ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವ ಕುರಿತು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. 2015ರ ನಂತರದ ಅರಣ್ಯ ಒತ್ತುವರಿ ತೆರವು ಮಾಡಿಸಲಾಗುತ್ತಿದೆ. ಪಶ್ಚಿಮಘಟ್ಟ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂಸ್ಟೇ, ತೋಟ, ಬಡಾವಣೆ ತೆರವು ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

30 ಎಕರೆಗೂ ಹೆಚ್ಚು ಒತ್ತುವರಿಯ 5,344.33 ಎಕರೆ, 10ರಿಂದ 30 ಎಕರೆವರೆಗಿನ 12,898 ಎಕರೆ, 3ರಿಂದ 10 ಎಕರೆವರೆಗಿನ 71,108 ಎಕರೆ ಒತ್ತುವರಿ ತೆರಿಗೆ ಕ್ರಮ ಕೈಗೊಳ್ಳಲಾಗಿದೆ. ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ, ದೊಡ್ಡ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ವದಂತಿಗೆ ಜನರು ಕಿವಿಗೊಡಬಾರದು ಎಂದು ಕೋರಿದ್ದಾರೆ.

ಅರಣ್ಯ ಹಕ್ಕಿನ ಅರ್ಜಿಗೂ ಆದ್ಯತೆ:

ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗಳ ಪುನರ್ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಒತ್ತುವರಿ ತೆರವು ಮಾಡದಂತೆ ಸೂಚಿಸಲಾಗಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT