ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿಗೆ ₹1.20 ಲಕ್ಷ ಕೋಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 29 ಫೆಬ್ರುವರಿ 2024, 15:24 IST
Last Updated 29 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಅಭಿವೃದ್ಧಿ ಮಾಡದೇ ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹1.20 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಉತ್ತರ ಕೊಡಲು ಆರಂಭಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ‘ಪಾಕಿಸ್ತಾನ್ ಜಿಂದಾಬಾದ್‌ ಎಂದು ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ’ ಎಂದು ಧರಣಿ ನಡೆಸಿದರು. ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಬೈಯುತ್ತಲೇ ತಮ್ಮ ಭಾಷಣವನ್ನು ಸಿದ್ದರಾಮಯ್ಯ ಮುಂದುವರಿಸುತ್ತಿದ್ದಂತೆ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

‘ನಡೀರಿ ನಡೀರಿ’ ಎಂದು ವಿರೋಧ ಪಕ್ಷದವರನ್ನು ಹಂಗಿಸಿದ ಮುಖ್ಯಮಂತ್ರಿ, ರಾಜ್ಯದ ತೆರಿಗೆ ಸಂಗ್ರಹ, ಕೇಂದ್ರ ಕೊಡುತ್ತಿರುವ ತೆರಿಗೆ ಪಾಲು, ಅಭಿವೃದ್ಧಿ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದ ಅನುದಾನಗಳ ಅಂಕಿ ಅಂಶಗಳನ್ನು ಸದನದ ಮುಂದಿಟ್ಟರು. ‘ಕೇಂದ್ರ ಸರ್ಕಾರ ಏಳು ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ. ಅದನ್ನು ಇಲ್ಲಿನ ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ಗಳು ಸಮರ್ಥಿಸುತ್ತಿವೆ’ ಎಂದು ಹೇಳಿದ ಅವರು, ಏಳು ಕೋಟಿ ಕನ್ನಡಿಗರಿಗೆ ಎರಡೂ ಪಕ್ಷಗಳು ದ್ರೋಹ ಎಸಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2023ರ ಫೆಬ್ರುವರಿಯಲ್ಲಿ ಬಸವರಾಜ ಬೊಮ್ಮಾಯಿಯವರು ₹3.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಸಾಲಿನಲ್ಲಿ ನಾನು ₹3.71 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದೇನೆ. ಬೊಮ್ಮಾಯಿ ಬಜೆಟ್‌ಗಿಂತ ₹62 ಸಾವಿರ ಕೋಟಿಯಷ್ಟು ಬಜೆಟ್ ಗಾತ್ರ ಹಿಗ್ಗಿದೆ. ಬೊಮ್ಮಾಯಿ ಬಜೆಟ್ ಮಂಡಿಸಿದಾಗ ರಾಜ್ಯದ ಜಿಡಿಪಿ ₹25,63,247 ಕೋಟಿ ಇತ್ತು. ಇದು 2024-25 ಕ್ಕೆ ₹28,09,063 ಕೋಟಿ ಆಗುವ ನಿರೀಕ್ಷೆ ಇದೆ. ಅಂದರೆ ₹2,41,723 ಕೋಟಿಯಷ್ಟು ಹೆಚ್ಚಲಿದೆ. ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡದೇ ಇದ್ದರೆ ಬಜೆಟ್ ಗಾತ್ರ ಹಾಗೂ ಜಿಡಿಪಿ ಇಷ್ಟು ಬೃಹತ್ ಮೊತ್ತದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇತ್ತೇ’ ಎಂದೂ ಪ್ರಶ್ನಿಸಿದರು.

‘ರಾಜ್ಯದಲ್ಲಿ ಒಂದೇ ಒಂದು ಬಾರಿ ವಿತ್ತೀಯ ಕೊರತೆ ಶೇ 3ರ ಮಿತಿ ದಾಟಿದೆ. ಮುಂದಿನ ಎರಡು ವರ್ಷಗಳಲ್ಲಿ ಆರ್ಥಿಕ ಸ್ಥಿತಿಯನ್ನು ಹಳಿಗೆ ತಂದು ಉಳಿತಾಯ ಬಜೆಟ್‌ ಮಂಡಿಸುತ್ತೇನೆ’ ಎಂದೂ ಅವರು ಭರವಸೆ ನೀಡಿದರು. 

ಉಭಯ ಸದನಗಳಲ್ಲಿ ಮುಖ್ಯಮಂತ್ರಿ ಉತ್ತರ ನೀಡಿದ ಬಳಿಕ ₹3,79,88,309 ಮೊತ್ತದ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು. ಫೆ.16ರಂದು ₹3.71 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಸುಮಾರು ₹7 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ನಮೂದಿಸಿ, ಬಜೆಟ್‌ಗೆ ಅಂಗೀಕಾರ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT