ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಚಿಕಿತ್ಸೆ: ಪಟ್ಟಿಗೆ 16 ಆಸ್ಪತ್ರೆಗಳ ಸೇರ್ಪಡೆ

Published 17 ಮೇ 2023, 5:08 IST
Last Updated 17 ಮೇ 2023, 5:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಪಘಾತ ವಲಯಗಳಲ್ಲಿ ತುರ್ತು ಚಿಕಿತ್ಸೆಗಾಗಿ 16 ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಸಂಯೋಜಿತ ಆಸ್ಪತ್ರೆಗಳ ಪಟ್ಟಿಗೆ ಸೇರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 11ರಂದು ಆದೇಶ ಹೊರಡಿಸಿದೆ.

ರಾಜ್ಯದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ 25 ಸ್ಥಳಗಳನ್ನು ಅತ್ಯಧಿಕ ಅಪಘಾತ ಸಂಭವಿಸುವ ವಲಯಗಳೆಂದು (ಬ್ಲ್ಯಾಕ್‌ ಸ್ಪಾಟ್ಸ್‌) ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಪಘಾತ ಸಂಭವಿಸಿದರೆ ತುರ್ತು ಚಿಕಿತ್ಸೆ ಒದಗಿಸಲು ಎಬಿ–ಎಆರ್‌ಕೆ ಯೋಜನೆ ವ್ಯಾಪ್ತಿಗೆ ಖಾಸಗಿ ಆಸ್ಪತ್ರೆಗಳನ್ನು ಸೇರಿಸುವ ಪ್ರಸ್ತಾವ ಇಲಾಖೆಯ ಮುಂದಿತ್ತು.

ಅಪಘಾತ ಸಂತ್ರಸ್ತರ ನೆರವು ಯೋಜನೆ ಅಡಿಯಲ್ಲಿ ‘ಬ್ಲ್ಯಾಕ್‌ ಸ್ಪಾಟ್‌’ಗಳಿಗೆ ಸಮೀಪದ ಆಸ್ಪತ್ರೆಗಳನ್ನು ಎಬಿ–ಎಆರ್‌ಕೆ ಸಂಯೋಜಿತ ಆಸ್ಪತ್ರೆಗಳ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿತ್ತು. ಆರು ಜಿಲ್ಲೆಗಳಲ್ಲಿ 16 ಆಸ್ಪತ್ರೆಗಳನ್ನು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಲಾಗಿದೆ. 25 ‘ಬ್ಲಾಕ್‌ ಸ್ಪಾಟ್‌’ಗಳಿಗೂ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಆಸ್ಪತ್ರೆಗಳನ್ನೂ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಎಬಿ–ಎಆರ್‌ಕೆ ಸಂಯೋಜಿತ ಆಸ್ಪತ್ರೆಗಳ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಅಪಘಾತ ಪ್ರಕರಣಗಳ ಸಂತ್ರಸ್ತರಿಗೆ 74 ವಿಧದ ಚಿಕಿತ್ಸೆಗಳನ್ನು ತುರ್ತು ಚಿಕಿತ್ಸೆಯ ಭಾಗವಾಗಿ ನೀಡಲಾಗುತ್ತದೆ.

ಸಂಯೋಜಿತ ಆಸ್ಪತ್ರೆಗಳ ವಿವರ: ಬಳ್ಳಾರಿ– ಬಳ್ಳಾರಿ ಹೆಲ್ತ್‌ ಸಿಟಿ ಆಸ್ಪತ್ರೆ; ಬೆಳಗಾವಿ– ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜು, ಕೆಎಲ್‌ಇ; ಬೆಂಗಳೂರು ಗ್ರಾಮಾಂತರ– ಪ್ರಕ್ರಿಯಾ ಆಸ್ಪತ್ರೆ (ತುಮಕೂರು ರಸ್ತೆ), ಎಂಎಸ್‌ಎಂಸಿ, ಆನೇಕಲ್‌, ಈಸ್ಟ್‌ ಪಾಯಿಂಟ್‌ ವೈದ್ಯಕೀಯ ಕಾಲೇಜು, ಆವಲಹಳ್ಳಿ; ಬೆಂಗಳೂರು ನಗರ– ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಇಎಸ್‌ಐ ವೈದ್ಯಕೀಯ ಕಾಲೇಜು, ರಾಜಾಜಿನಗರ; ದಕ್ಷಿಣ ಕನ್ನಡ– ಕ್ಷೇಮ ಆಸ್ಪತ್ರೆ, ದೇರಳಕಟ್ಟೆ; ಕಲಬುರಗಿ– ಇಎಸ್‌ಐ ಆಸ್ಪತ್ರೆ ಮತ್ತು ಎಂಆರ್‌ಎಂಸಿ, ಸೇಡಂ ರಸ್ತೆ; ಉಡುಪಿ– ಚಿನ್ಮಯ ಆಸ್ಪತ್ರೆ, ವಿವೇಕ್‌ ಆಸ್ಪತ್ರೆ, ಹೈಟೆಕ್‌ ಆಸ್ಪತ್ರೆ; ಉತ್ತರ ಕನ್ನಡ– ಹೈಟೆಕ್‌ ಆಸ್ಪತ್ರೆ, ಕುಮಟಾ, ಕೆಎಲ್‌ಇ (ಕಮಲ್‌ ಆರ್‌. ನಾಯಕ್‌ ಆಸ್ಪತ್ರೆ), ಅಂಕೋಲಾ ಮತ್ತು ಆರ್‌ಎನ್‌ಎಸ್‌ ಆಸ್ಪತ್ರೆ– ಮಾವಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT