ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಪಾರದರ್ಶಕತೆಗೆ ವಿಚಕ್ಷಣಾ ಸಮಿತಿ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ಪಡಿತರ ವಿತರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಚಕ್ಷಣಾ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಇಲ್ಲಿ ಶನಿವಾರ ತಿಳಿಸಿದರು.

ಈ ಸಮಿತಿಗಳಲ್ಲಿ ಗ್ರಾ.ಪಂ ಸದಸ್ಯರು ಸೇರಿದಂತೆ ನಾಲ್ವರು ಇರುತ್ತಾರೆ. ಸಮಿತಿಯು ಪ್ರತಿ ತಿಂಗಳ 7ರಂದು ಕುಂದು–ಕೊರತೆಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸುತ್ತದೆ. ಜನರಿಗೆ ಪಡಿತರವನ್ನು ಸಮರ್ಪಕವಾಗಿ ತಲುಪಿಸಲು ಇದು ಅನುಕೂಲ ಮಾಡಿಕೊಡುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಡಿತರ ಚೀಟಿಗಳಿಗೆ ಆಧಾರ್ ಸಂಪರ್ಕಗೊಳಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ. ಆಧಾರ್ ಸೇರಿಸಿರುವ ಹಿನ್ನೆಲೆಯಲ್ಲಿ ನಕಲಿ ಕಾರ್ಡ್‌ಗಳಿಗೆ ತಡೆಬಿದ್ದಿದೆ. ಇದರ ಪರಿಣಾಮ ವಾರ್ಷಿಕ ಸುಮಾರು ₹ 400 ಕೋಟಿ ಉಳಿತಾಯವಾಗುತ್ತಿದೆ. ಬಯೊಮೆಟ್ರಿಕ್ ಅಳವಡಿಕೆಯಲ್ಲಿ ಶೇ 80ರಷ್ಟು ಪ್ರಗತಿಯಾಗಿದೆ ಎಂದು ಹೇಳಿದರು.

ರಾಜ್ಯದ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲು ಸಿದ್ಧತೆ ನಡೆದಿದೆ. ಸರ್ಕಾರದ ವಿವಿಧ ಸೇವೆಗಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಬಹೂಪಯೋಗಿ ಕೇಂದ್ರಗಳಾಗಿ ಸೇವೆ ಸಲ್ಲಿಸಲು ಇದು ಸಹಾಯ ಮಾಡಲಿದೆ ಎಂದರು.

ಬಯೊಮೆಟ್ರಿಕ್ ಮತ್ತು ಆನ್‌ಲೈನ್ ವ್ಯವಸ್ಥೆಯಲ್ಲಿ ರಾಜ್ಯದ ಯಾವುದೇ ಪಡಿತರ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದು. ವಲಸೆ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ. ಇದಕ್ಕಾಗಿ ಪ್ರತಿ ಅಂಗಡಿಗಳಿಗೂ ಅಗತ್ಯವಿರುವ ಹೆಚ್ಚುವರಿ ಪಡಿತರ ಪದಾರ್ಥ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಸರಳೀಕರಣ ಚಿಂತನೆ: ಆದಾಯ ಪ್ರಮಾಣಪತ್ರದ ಆಧಾರದಲ್ಲಿ ಪಡಿತರ ಚೀಟಿ ನೀಡುವ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಪಡಿತರ ಚೀಟಿ ಪಡೆಯುವ ವಿಧಾನವನ್ನು ಸರಳಗೊಳಿಸಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆ ಜಾರಿಗೊಂಡರೆ ಈಗಿನ ಪರಿಶೀಲನಾ ವಿಧಾನ ಬದಲಾಗಲಿದೆ. ತುರ್ತಾಗಿ ಪಡಿತರ ಚೀಟಿ ಪಡೆಯುವುದಕ್ಕೂ ಇದು ಅನುಕೂಲವಾಗುತ್ತದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT