ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Coffee Conference | ಮೌಲ್ಯವರ್ಧಿತ ಕಾಫಿಯ ಘಮ

Published 26 ಸೆಪ್ಟೆಂಬರ್ 2023, 0:30 IST
Last Updated 26 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಇದು ಬೆಲ್ಲದ ಕಾಫಿ ಸರ್‌. ಜೊತೆಗೆ ಬೆಲ್ಲದ ಟೀ ಕೂಡ ಇದೆ. ನಾಲ್ಕು ಫ್ಲೇವರ್‌ ಕಾಫಿ, ಐದು ಫ್ಲೇವರ್‌ನಲ್ಲಿ ಟೀ ಇದೆ. ಬಿಸಿನೀರಿಗೆ ಪುಡಿ ಹಾಕಿ ಹಾಲು ಬೆರೆಸಿದರೆ ಸಾಕು. ಬಿಸಿ ಬಿಸಿ ಕಾಫಿ ರೆಡಿ.. ಬಿಸಿ ಬೇಡ ಅಂದ್ರೆ.. ಕೋಲ್ಡ್ ಕಾಫಿ ಮಾಡಿ ಕುಡಿಯಿರಿ... 

ನಗರದ ಅರಮನೆ ಮೈದಾನದಲ್ಲಿ ಸೋಮವಾರದಿಂದ ಆರಂಭವಾದ ಐದನೇ ವಿಶ್ವ ಕಾಫಿ ಸಮ್ಮೇಳದ ಪ್ರದರ್ಶನ ವಿಭಾಗದಲ್ಲಿ ಪುಣೆಯ ಫೂಡಿ ಎಂಬ ಕಂಪನಿಯ ಸದಸ್ಯರು ತಾವು ತಯಾರಿಸಿದ ಬೆಲ್ಲ ಮಿಶ್ರಿತ ಕಾಫಿ –ಟೀ ಪುಡಿ (ಜಾಗರಿ ಕಾಫಿ) ಗ್ರಾಹಕರಿಗೆ ರುಚಿ ತೋರಿಸಿದ ಪರಿ ಇದು.

ಐದು ವರ್ಷಗಳಿಂದ ಈ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕರ್ನಾಟಕದ ಕಾಫಿಗೆ, ಮಹಾರಾಷ್ಟ್ರದ ಕೊಲ್ಲಾಪುರದ ಬೆಲ್ಲ ಬೆರೆಸಿ ಮೌಲ್ಯವರ್ಧಿಸಿ ನಾಲ್ಕು ಫ್ಲೇವರ್‌ಗಳ ’ಜಾಗರಿ ಕಾಫಿ ಪುಡಿ‘ ತಯಾರಿಸಿದೆ. ಅಸ್ಸಾಂ ಟೀಗೂ ಹೀಗೆ ಬೆಲ್ಲದ ಪುಡಿ ಮಿಶ್ರಮಾಡಿ, ಆರು ಫ್ಲೇವರ್‌ಗಳ ಬೆಲ್ಲದ ಟೀಪುಡಿ ತಯಾರಿಸಿದೆ.

ಕಾಫಿಯಲ್ಲಿ ಕ್ಲಾಸಿಕ್, ವೆನಿಲಾ, ಹೇಜಲ್ ನಟ್ಸ್ ಮತ್ತು ಮೋಕಾ ಮತ್ತು ಟೀ ನಲ್ಲಿ ಕ್ಲಾಸಿಕ್, ಶುಂಠಿ, ಏಲಕ್ಕಿ, ಮಸಾಲ, ಲೆಮನ್ ಫ್ಲೇವರ್‌ ಇದೆ. ಇವೆಲ್ಲವನ್ನು ಬಿಸಿನೀರಿಗೆ ಹಾಕಿ, ಹಾಲು ಬೆರೆಸಿ ಕುಡಿಯಬಹುದು ಎನ್ನುತ್ತಾರೆ ಕಂಪನಿಯ ಮಾಲೀಕ ನಿತಿನ್ ನಾಗರೆ.

’ಮಹಾರಾಷ್ಟ್ರದ ಸೊಲ್ಲಾಪುರ, ಸತಾರದ ಮೂಲದವನು ನಾನು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ, ಗುಣಮಟ್ಟದ ಬೆಲ್ಲ ತಯಾರಿಸುತ್ತಾರೆ. ಕೋವಿಡ್‌ ನಂತರ ಬೆಲ್ಲದ ಕಾಫಿ, ಟೀ ಕುಡಿಯುವವರ ಸಂಖ್ಯೆ ಹೆಚ್ಚಿತ್ತು. ಆದರೆ, ಟೀ–ಕಾಫಿ ತಯಾರಿಸುವಾಗ ಬೆಲ್ಲ ಬೆರೆಸಿದರೆ ಹಾಲು ಒಡೆಯುತ್ತಿತ್ತು. ಆಗ ಹೊಳೆದಿದ್ದೇ ಬೆಲ್ಲದ ಮೌಲ್ಯವರ್ಧನೆಯ ಟೀ ಪುಡಿ ತಯಾರಿಸುವ ಐಡಿಯಾ. ಈ ಐಡಿಯಾ ಇಟ್ಟುಕೊಂಡು ಒಂದಷ್ಟು ಸಂಶೋಧನೆ ಮಾಡಿ, ಅಂತಿಮವಾಗಿ ಟೀ–ಕಾಫಿ ಎರಡೂ ಉತ್ಪನ್ನಗಳೂ ತಯಾರಾದವು’ ಎಂದು ವಿವರಿಸಿದರು ನಿತಿನ್.

’ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಉತ್ತಮ. ಬೆಲ್ಲವನ್ನು ಉತ್ತಮ ಸಿಹಿ ಪದಾರ್ಥವಾಗಿ ಗ್ರಾಹಕರಿಗೆ ತಲುಪಿಸುವುದು ನನ್ನ ಉದ್ದೇಶವಾಗಿತ್ತು. ಅದು ಹೊಸ ಉತ್ಪನ್ನವಾಗಿ ನೀಡಬೇಕೆನಿಸಿತು. ಈ ಉತ್ಪನ್ನಗಳಿಗೆ ಬೇಡಿಕೆ ಇದೆ. ಇವು ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಲಭ್ಯವಿವೆ. ಸದ್ಯ ಕರ್ನಾಟಕದಲ್ಲೂ ವಿತರಕರಿದ್ದಾರೆ’ ಎಂದರು ನಿತಿನ್‌.

’ಹಾಲು ಮಿಕ್ಸ್ ಮಾಡಿರುವ ಜಾಗರಿ ಕಾಫಿ ಮತ್ತು ಟೀ ಪುಡಿ ಕೂಡ ಇದೆ. ಇದನ್ನು ಕಾಫಿ/ಟೀ ವೆಂಡಿಂಗ್ ಮೆಷಿನ್‌ಗೆ ಬಳಸುತ್ತಾರೆ. ಕಾಫಿ ಕವರ್ ಮೇಲೆ ತಯಾರಿಕೆ ಟಿಪ್ಸ್ ಇರುತ್ತದೆ. ಅದನ್ನು ಅನುಸರಿಸಿದರೆ ಸುಲಭವಾಗಿ ಕಾಫಿ – ಟೀ ತಯಾರಿಸಬಹುದು’ ಎಂದಿದ್ದು ಈ ಉತ್ಪನ್ನದ ವಿತರಕ ಧಾರವಾಡದ ಶ್ರೀರಾಮ್‌.

ಸ್ಯಾಚೆಟ್‌ನಲ್ಲಿ ಕಾಫಿ ಡಿಕಾಕ್ಷನ್‌

ಕೊಡಗಿನ ವಿರಾಜಪೇಟೆ ಸಮೀಪದ ಅಮಟೆಅಂಗಡಿಯ ಹೋಮಿ ಅಪ್ಪಚ್ಚು, ಪೊಟ್ಟಣದಲ್ಲಿ ಕಾಫಿ ಡಿಕಾಕ್ಷನ್‌ ಪ್ಯಾಕ್‌ ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ವಸ್ತು ಪ್ರದರ್ಶನದಲ್ಲಿ ಸ್ಯಾಚೆಟ್‌ನಲ್ಲಿಟ್ಟಿದ್ದ ಡಿಕಾಕ್ಷನ್‌ ವೀಕ್ಷಕರ ಗಮನ ಸೆಳೆದಿತ್ತು.

’100 ಎಂ.ಎಲ್ ಅಳತೆಯ ಸ್ಯಾಚೆಟ್‌ಗಳಲ್ಲಿ ಕಾಫಿ ಡಿಕಾಕ್ಷನ್‌ನಿಂದ 10 ಲೋಟ ಕಾಫಿ ಮಾಡಬಹುದು. ಸ್ಟ್ರಾಂಗ್ ಕಾಫಿ ಬೇಕೆಂದರೆ 8 ಕಪ್ ಮಾಡಬಹುದು. ಡಿಕಾಕ್ಷನ್‌ಗೆ ಹಾಲು ಮಿಶ್ರಮಾಡಿ, ಬಿಸಿ ಮಾಡಿದರೆ ಸಾಕು. ಬಿಸಿ ಬಿಸಿ ಕಾಫಿ ರೆಡಿ’ ಎಂದು ವಿವರಿಸಿದರು ಹೋಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT