ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಎಫ್‌ ಸಂದರ್ಶನ: ಸಮಿತಿ ರಚಿಸುವಂತೆ ಕೆಪಿಎಸ್‌ಸಿಗೆ ರಾಜ್ಯ ಸರ್ಕಾರ ನಿರ್ದೇಶನ

Last Updated 11 ಏಪ್ರಿಲ್ 2023, 6:48 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ವೃಂದದ 16 ಹುದ್ದೆಗಳಿಗೆ ಮೌಖಿಕ ಸಂದರ್ಶನವನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಈ ಸಮಿತಿಯಲ್ಲಿ ಕೆಪಿಎಸ್‌ಸಿಯ ಒಬ್ಬರು ಸದಸ್ಯರು ಇರಬೇಕು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ನಿವೃತ್ತ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಫ್‌ಎಸ್‌ ಅಧಿಕಾರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸುತ್ತಿರುವ ಒಬ್ಬ ಸಂಬಂಧಿಸಿದ ವಿಷಯ ತಜ್ಞ ಹೀಗೆ ಮೂವರು ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿರುವ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ‘ಈ ಹುದ್ದೆಗಳಿಗೆ ನೇರ ನೇಮಕಾತಿಯ ಮೌಖಿಕ ಸಂದರ್ಶನಕ್ಕೆ ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ವಿವರವಾದ ಮಾನದಂಡಗಳನ್ನು ನಿಗದಿಪಡಿಸಿಲ್ಲ. ಆದ್ದರಿಂದ ನಾಲ್ವರ ಸಮಿತಿ ರಚಿಸಿ ಸಂದರ್ಶನ ಪ್ರಕ್ರಿಯೆ ನಡೆಸಬೇಕು. ಈ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಕೂಡಾ ಅನುಮೋದನೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಒಟ್ಟು 16 ಹುದ್ದೆಗಳಿಗೆ 1:5 ಅನುಪಾತದಲ್ಲಿ 80 ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಸಂದರ್ಶನ ನಡೆಸಲಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಂದರ್ಶನಕ್ಕೆ ಅರ್ಹತೆ ಪಡೆದವರ ಪಟ್ಟಿಯನ್ನು ಆಯೋಗದ ಅನುಮೋದನೆಗೆ ಕಾರ್ಯದರ್ಶಿ ಏಪ್ರಿಲ್‌ 3ರಂದೇ ಸಲ್ಲಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ (ಎಇ) 660 ಹುದ್ದೆಗೆ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯನ್ನು ಕೂಡಾ ಪಾರದರ್ಶಕ ರೀತಿಯಲ್ಲಿ ನಡೆಸಲು ಸಂದರ್ಶನ ಸಮಿತಿ ರಚಿಸಲು ಸರ್ಕಾರ ನಿರ್ದೇಶನ ನೀಡಿತ್ತು. ಕೆಪಿಎಸ್‌ಸಿ ಇಬ್ಬರು ಸದಸ್ಯರು, ಉಳಿದಂತೆ ಇಬ್ಬರು ನಿವೃತ್ತ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು, ಕುಲಪತಿಗಳು, ಮುಖ್ಯ ಎಂಜಿನಿಯರ್‌ಗಳು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿ ರಚಿಸಲು ಸೂಚಿಸಲಾಗಿತ್ತು. ಇದೀಗ ಕೆಪಿಎಸ್‌ಸಿಯ ಒಬ್ಬ ಸದಸ್ಯ ಮಾತ್ರ ಸಮಿತಿಯಲ್ಲಿರಬೇಕು ಎಂದೂ ನಿರ್ದೇಶನ ನೀಡಲಾಗಿದೆ.

‘ಸಂದರ್ಶನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅರ್ಹರ ಆಯ್ಕೆಗೆ ಈ ರೀತಿ ಸಮಿತಿ ರಚಿಸಿದ ಕ್ರಮ ಸೂಕ್ತವಾಗಿದೆ. ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಯುವ ವ್ಯಕ್ತಿತ್ವ ಪರೀಕ್ಷೆಗೂ (ಸಂದರ್ಶನ) ಇದೇ ರೀತಿ ಒಬ್ಬ ಕೆಪಿಎಸ್‌ಸಿ ಸದಸ್ಯ, ಉಳಿದಂತೆ ನಿವೃತ್ತ ಐಎಎಸ್‌, ಐಪಿಎಸ್‌, ವಿಷಯತಜ್ಞರ ಸಮಿತಿ ರಚಿಸಬೇಕು’ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT