ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ಮೇಳ: ಕೃಷಿಗಾಗಿ ಮಕ್ಕಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ

ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ಚಿಣ್ಣರು
Last Updated 22 ಸೆಪ್ಟೆಂಬರ್ 2018, 20:15 IST
ಅಕ್ಷರ ಗಾತ್ರ

ಧಾರವಾಡ: ಪೋಷಕರು ಪಡುವ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಕೃಷಿಕರ ಮಕ್ಕಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಸಾಧನಗಳು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.

ಶನಿವಾರ ಆರಂಭಗೊಂಡ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳು ಹಲವು ಆವಿಷ್ಕಾರಗಳನ್ನು ಪ್ರದರ್ಶಿಸಿದ್ದಾರೆ. ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಇದಕ್ಕೆ ನೆರವು ನೀಡಿದೆ.

ಸೈಕಲ್ ಬಳಸಿ ಬಿತ್ತನೆ, ಔಷಧ ಸಿಂಪರಣೆ ಹಾಗೂ ಎಡೆ ಹೊಡೆಯುವ ಯಂತ್ರಗಳನ್ನು ಸಣ್ಣ ಹಿಡುವಳಿದಾರರಿಗಾಗಿ ಅಭಿವೃದ್ಧಿಪಡಿಸಿದ್ದಾರೆ.

ಸರ್ಕಾರದ ಸೈಕಲ್‌ ಭಾಗ್ಯದಲ್ಲಿ ಬಳಸಿ ನಿಷ್ಕ್ರಿಯಗೊಂಡ ಸೈಕಲ್‌ ಒಂದನ್ನು ಪಡೆದ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಸಿದ್ಧಾರೂಢ ದೇಸಾಯಿ, ರಾಜುಗೌಡ ಹೊನ್ನಪ್ಪಗೌಡ್ರ ಶಿಕ್ಷಕರ ನೆರವಿನೊಂದಿಗೆ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

‘ಸೈಕಲ್ ಸೇರಿ ₹3 ಸಾವಿರ ವೆಚ್ಚವಾಗಿದೆ. ಸೈಕಲ್‌ನ ಮುಂಭಾಗದ ಹ್ಯಾಂಡಲ್‌ನಲ್ಲಿ ಬಿತ್ತನೆಗೆ ಎರಡು ಪೈಪ್‌ಗಳನ್ನು ನೀಡಲಾಗಿದೆ. ಮಧ್ಯದಲ್ಲಿ ಟ್ಯಾಂಕ್ ಇಟ್ಟು ಔಷಧ ಸಿಂಪಡಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಸೈಕಲ್ ಕೆಳಭಾಗದಲ್ಲಿ ಎಡೆ ಹೊಡೆ ಯುವ ಸಾಧನ ಅಳವಡಿಸಲಾಗಿದೆ. ಇದನ್ನು ಸಣ್ಣ ರೈತರು ಸೈಕಲ್‌ ಬಳಸಿ ತಾವೇ ಅಭಿವೃದ್ಧಿಪಡಿಸಿಕೊಳ್ಳಬಹುದು’ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಚೇತನ್ ಯಳವತ್ತಿ, ಚೇತನ್ ಮುಂಡರಗಿ ಅವರು ಬೀಜ ಬಿತ್ತುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಕೂರಿಗೆ ಮಾದರಿಯ ಇದನ್ನು ಎಳೆಯಲು ಎತ್ತುಗಳಾಗಲೀ, ಟ್ರಾಕ್ಟರ್‌, ಟ್ರೈಲರ್ ಬೇಕಿಲ್ಲ. ಮುಂದೆ ಎಳೆಯಲು ಒಬ್ಬರು, ಹಿಂದೆ ಬೀಜವನ್ನು ಬಿತ್ತುವ ಹ್ಯಾಂಡಲ್ ಒತ್ತಲು ಒಬ್ಬರು ಇದ್ದರೆ ಸಾಕು. ಇದಕ್ಕಾಗಿ ಪ್ಲಾಸ್ಟಿಕ್‌ನ ಡೈ ಬಳಸಲಾಗಿದೆ. ನಿರ್ದಿಷ್ಟ ಅಳತೆಯಲ್ಲಿ ಬೀಜವನ್ನು ಬಿತ್ತಲಿದೆ. ಈ ಡೈಗಳನ್ನು ಆಯಾ ಬೆಳೆಯ ಬೀಜಗಳಿಗೆ ತಕ್ಕಂತೆ ಬದಲಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಸೌರ ವಿದ್ಯುತ್ ಚಾಲಿತ ಹುಲ್ಲು ಮತ್ತು ಕಳೆ ಕತ್ತರಿಸುವ ಹಾಗೂ ನೆಲ ಹೊರೆಸುವ ಯಂತ್ರವೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸೌರ ಫಲಕಕ್ಕೆ ಬ್ಯಾಟರಿ ಅಳವಡಿಸಿದ್ದಾರೆ. ಏಳು ಗಂಟೆ ಚಾರ್ಜ್ ಆದರೆ, ಕನಿಷ್ಠ 2ರಿಂದ 3 ಗಂಟೆ ಬಳಸಬಹುದು. ಬ್ಲೇಡ್ ಹಾಕಿದರೆ ಕತ್ತರಿಸುವ ಯಂತ್ರವಾಗಿಯೂ, ಸ್ಪಂಜ್ ಮಾದರಿಯ ಬ್ರೆಶ್ ಅಳವಡಿಸಿದರೆ ನೆಲ ಹೊರೆಸುವ ಸಾಧನವಾಗಿಯೂ ಕೆಲಸ ಮಾಡಲಿದೆ.

ಮನೆಯಲ್ಲೇ ಗೊಬ್ಬರ ತಯಾರಿಸುವ ಡ್ರಮ್ ಅಭಿವೃದ್ಧಿಪಡಿಸಿದ್ದಾರೆ. ಅಡುಗೆ ಮನೆ ತ್ಯಾಜ್ಯವನ್ನು ಡ್ರಮ್‌ಗೆ ಸುರಿದಾಗ ದೊಡ್ಡ ವಸ್ತುಗಳನ್ನು ಸಣ್ಣದಾಗಿ ಕತ್ತರಿಸುತ್ತದೆ. ನಂತರ ಅದನ್ನು ಕೊಳೆಸಿ ಗೊಬ್ಬರವಾಗಿಸುವ ಸರಳ ಸಾಧನವೂ ಇಲ್ಲಿದೆ.

ಕೃಷಿ ಮೇಳ ಮಂಗಳವಾರದವರೆಗೆ ಇರಲಿದೆ. 12 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT