ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯಲ್ಲಿ ಲೀನವಾದ ಹೋರಾಟಗಾರ ಸುಬ್ಬಯ್ಯ

ಅಂತಿಮ ದರ್ಶನಕ್ಕೆ ಸಾಕ್ಷಿಯಾದ ಚಿಂತಕರು, ಒಡನಾಡಿಗಳು
Last Updated 28 ಆಗಸ್ಟ್ 2019, 12:31 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು): ಮುತ್ಸದ್ದಿ ರಾಜಕಾರಣಿ, ಜನಪರ ಹೋರಾಟಗಾರ ಎ.ಕೆ.ಸುಬ್ಬಯ್ಯ (86) ಅವರ ಭೌತಿಕ ದೇಹ ಬುಧವಾರ ಸಂಜೆ ಪ್ರಕೃತಿಯಲ್ಲಿ ಲೀನವಾಯಿತು.

ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಬಳಿಯ ಬೆಳ್ಳೂರಿನ ಕಲ್ಲುಗುಂಡಿ ಕಾಫಿ ಎಸ್ಟೇಟ್‌ನಲ್ಲಿ ಸುಬ್ಬಯ್ಯ ಅವರ ಪಾರ್ಥಿವ ಶರೀರಕ್ಕೆ ಹಿರಿಯ ಪುತ್ರ ನರೇನ್ ಕಾರ್ಯಪ್ಪ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು.

ಬುಧವಾರ ಬೆಳಿಗ್ಗೆ 10ರ ಸುಮಾರಿಗೆ ಬೆಂಗಳೂರಿನಿಂದ ಆಂಬುಲೆನ್ಸ್‌ನಲ್ಲಿ ಹುದಿಕೇರಿಗೆ ಪಾರ್ಥಿವ ಶರೀರ ತಂದಾಗ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳ ಕಣ್ಣಾಲಿಗಳು ತೇವಗೊಂಡವು. ಹೋರಾಟಗಾರರು, ಒಡನಾಡಿಗಳು, ಚಿಂತಕರು, ಕಾರ್ಮಿಕರು ಕಂಬನಿ ಮಿಡಿದರು. ಐವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳ ನೋವು ಕಣ್ಣೀರಾಗಿ ಹರಿಯಿತು.

ಕೊಡವ ಸಂಪ್ರದಾಯದಂತೆ ಬಂಧುಗಳು ಮನೆಯ ಮುಂದೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ಅಕ್ಕಪಕ್ಕದ ಜನರಿಗೆ ಶವ ಬಂದ ಸುದ್ದಿ ಮುಟ್ಟಿಸಲಾಯಿತು. ಗಾಜಿನ ಪೆಟ್ಟಿಗೆಯಲ್ಲಿ ತಂದ ಪಾರ್ಥಿವ ಶರೀರವನ್ನು ಹೊರ ತೆಗೆದು, ಅವರು ಕುಳಿತುಕೊಳ್ಳುತ್ತಿದ್ದ ಮನೆಯ ಒಳಗಿನ ಆಸನದಲ್ಲಿ ಕೂರಿಸಲಾಯಿತು. ಕೊಡವ ದಿರಿಸು ಧರಿಸಿದ ಬಳಿಕ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಅಗ್ನಿಸ್ಪರ್ಶಕ್ಕೂ ಮುನ್ನ ಕ್ರಾಂತಿ ಗೀತೆ ಹಾಡಲಾಯಿತು.

ಅಂತಿಮ ದರ್ಶನದಲ್ಲಿ ಪ್ರಮುಖರು:

ಸಾಹಿತಿ ದೇವನೂರು ಮಹದೇವ, ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಯು.ಟಿ.ಖಾದರ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್‌.ವಿಶ್ವನಾಥ್‌, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕಾಂಗ್ರೆಸ್‌ ಮುಖಂಡ ಅರುಣ್ ಮಾಚಯ್ಯ, ಕೋಮು ಸೌಹಾರ್ದ ವೇದಿಕೆ ಕೆ.ಎಲ್.ಅಶೋಕ್, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಹಿರಿಯ ವಕೀಲ ಎಂ.ಕೆ.ಪೂವಯ್ಯ ಹಾಗೂ ದಿಡ್ಡಳ್ಳಿ ಚಳವಳಿಯ ನೂರಾರು ಹೋರಾಟಗಾರರು ಅಂತಿಮ ದರ್ಶನ ಪಡೆದರು.

ಕಣ್ಣೀರು ಹಾಕಿದ ರಮೇಶ್‌ಕುಮಾರ್‌: ‘ಸುಬ್ಬಯ್ಯ ಧೀಮಂತ ರಾಜಕಾರಣಿ. ನಮ್ಮ ಕುಟುಂಬದ ಎಲ್ಲ ಕಷ್ಟ, ಸುಖಗಳಲ್ಲಿ ಅವರು ಭಾಗಿಯಾಗುತ್ತಿದ್ದರು. ವೈಯಕ್ತಿಕವಾಗಿ ನಾನು ಈಗ ತಬಲಿ’ ಎಂದು ರಮೇಶ್‌ಕುಮಾರ್‌ ಕಣ್ಣೀರು ಸುರಿಸಿದರು.

ಪ್ರೀತಿಯ ತೋಟ:

ತೀವ್ರ ಬಡತನದಲ್ಲಿ ಬೆಳೆದಿದ್ದ ಸುಬ್ಬಯ್ಯಗೆ ಕಾಫಿ ತೋಟದ ಬಗೆಗಿನ ಆಸೆ ಆರಂಭದಲ್ಲಿ ಕನಸಾಗಿಯೇ ಉಳಿದಿತ್ತು. ವಕೀಲ ವೃತ್ತಿಯಿಂದ ಬಂದ ಹಣದಿಂದ ಬೆಳ್ಳೂರಿನಲ್ಲಿ ತೋಟ ಹಾಗೂ ಗದ್ದೆ ಖರೀದಿಸಿದ್ದರು.

‘ಕಲ್ಲುಗುಂಡಿ ಸುಬ್ಬಯ್ಯ ಅವರ ನೆಚ್ಚಿನ ಎಸ್ಟೇಟ್‌. ತಮ್ಮ ಪ್ರೀತಿಯ ತೋಟವನ್ನು ನೋಡುವುದಕ್ಕಾಗಿಯೇ ಅದೆಷ್ಟೇ ಕೆಲಸ ಒತ್ತಡವಿದ್ದರೂ ಬೆಂಗಳೂರಿನಿಂದ ಪ್ರತಿ ಭಾನುವಾರ ಹುದಿಕೇರಿಗೆ ಆಗಮಿಸುತ್ತಿದ್ದರು’ ಎಂದು ಒಡನಾಡಿಗಳು ಹೇಳಿದರು.

‘ನನ್ನ ಶವವನ್ನು ಈ ತೋಟದಲ್ಲಿಯೇ ಹಾಕಬೇಕು’ ಎಂದು ಸಾವಿಗೂ ಮುನ್ನ ಸುಬ್ಬಯ್ಯ ಇಚ್ಛೆ ವ್ಯಕ್ತಪಡಿಸಿದ್ದರು. ಹೀಗಾಗಿ, ನೆಚ್ಚಿನ ಕಲ್ಲುಗುಂಡಿ ಎಸ್ಟೇಟ್‌ನಲ್ಲಿಯೇ ಶವ ಸಂಸ್ಕಾರ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT