ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ಬಯ್ಯ ಮಾತು ಕೇಳಲು ಗ್ಯಾಲರಿ ಭರ್ತಿಯಾಗಿರುತ್ತಿತ್ತು

ರೋಲೆಕ್ಸ್‌ ವಾಚ್‌ ಹಗರಣ–ಸಚಿವರ ತಲೆ ದಂಡ ಪಡೆದ ಎ.ಕೆ.ಸುಬ್ಬಯ್ಯ ವಾದ
Last Updated 27 ಆಗಸ್ಟ್ 2019, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಲೆಕ್ಸ್ ವಾಚ್‌ ಪ್ರಕರಣ ಕುರಿತಂತೆ ಎ.ಕೆ.ಸುಬ್ಬಯ್ಯ ಅವರ ವಾದ ಕೇಳಲು ವಿಧಾನ ಪರಿಷತ್‌ನ ಗ್ಯಾಲರಿ ಜನರಿಂದ ಭರ್ತಿಯಾಗಿರುತ್ತಿತ್ತು. ವಿಧಾನಸಭಾ ಸದಸ್ಯರೂ ಬಂದು ಅಲ್ಲಿ ಕುಳಿತುಕೊಳ್ಳುತ್ತಿದ್ದರು...’

ಹಿರಿಯ ನಾಯಕ ಎ.ಕೆ.ಸುಬ್ಬಯ್ಯ ಅವರ ಕುರಿತಂತೆ ಅವರ ಒಡನಾಡಿ ಡಿ.ಎಚ್.ಶಂಕರಮೂರ್ತಿ ಅವರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಅನುಭವ ಇದು.

‘ಸುಬ್ಬಯ್ಯ ಅವರು ತುಂಬ ಅಧ್ಯಯನ ನಡೆಸಿಯೇ ಸದನಕ್ಕೆ ಬರುತ್ತಿದ್ದರು. ರೋಲೆಕ್ಸ್‌ ವಾಚ್‌ ಹಗಣರದ ಒಂದೊಂದು ವಿಷಯವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಹೋಗುತ್ತಿದ್ದರು. ಆ ವಾದ ಕೇಳಲು ತುಂಬಾ ಖಷಿಯಾಗುತ್ತಿತ್ತು. ಬಹುಮತ ಇದ್ದ ಸರ್ಕಾರವೊಂದರ ಸಚಿವರು ರಾಜೀನಾಮೆ ಕೊಡಬೇಕಾಯಿತು ಎಂದರೆ ಅದಕ್ಕೆ ಕಾರಣ ಸುಬ್ಬಯ್ಯ ಅವರ ಅದ್ಭುತ ವಾದವೇ ಆಗಿತ್ತು. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ವಿದ್ಯಮಾನ’ ಎಂದು ಹೇಳಿದರು.

‘1983ರಲ್ಲಿ ಸುಬ್ಬಯ್ಯ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಆಗ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.ರಾಮಕೃಷ್ಣ ಹೆಗಡೆ ಅವರ ಸರ್ಕಾರಕ್ಕೆ ಬೇಷರತ್‌ ಬೆಂಬಲ ನೀಡುವ ಘೋಷಣೆಯನ್ನು ಅಂದಿನ ರಾಷ್ಟ್ರೀಯ ಅಧ್ಯಕ್ಷಅಟಲ್‌ ಬಿಹಾರಿ ವಾಜಪೇಯಿ ಅವರು ಘೋಷಿಸಿಬಿಟ್ಟರು. ತಮ್ಮೊಂದಿಗೆ ಸಂಪರ್ಕಿಸದೆ ಈ ಘೋಷಣೆ ಮಾಡಿದ್ದಕ್ಕೆ ಸುಬ್ಬಯ್ಯ ಅವರು ಬೇಸರಗೊಂಡು ಬಳಿಕ ಪಕ್ಷದಿಂದ ದೂರ ಸರಿದರು. ಏನೇ ಇರಲಿ, ಅವರೊಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಭ್ರಷ್ಟಾಚಾರ ಅವರ ಹತ್ತಿರಕ್ಕೆ ಸುಳಿಯದ ಕಾರಣದಿಂದಲೇ ಅವರು ತಮ್ಮ ವಿಚಾರಧಾರೆಯನ್ನು ಪ್ರಖರವಾಗಿ ಮಂಡಿಸುವುದು ಸಾಧ್ಯವಾಯಿತು’ ಎಂದು ಅವರು ನೆನಪು ಮಾಡಿಕೊಂಡರು.

‘ಕೊಡವ ಭಾಷೆಯಲ್ಲೇ ಬೈಯ್ಯುತ್ತಿದ್ದೆವು’

‘ಎ.ಕೆ.ಸುಬ್ಬಯ್ಯ ಅವರು ಸೈದ್ಧಾಂತಿಕವಾಗಿ ನನ್ನ ಕಟು ವಿರೋಧಿ. ಆದರೆ ಅವರ ವಾದ ಸರಣಿ, ವಿಷಯ ಮಂಡನೆ ಕಂಡು ನಾನು ಬೆರಗಾಗಿದ್ದೆ. ವಿಧಾನ ಪರಿಷತ್‌ನಲ್ಲಿ ಅವರ ಮಾತಿಗೆ ನಾನು ಖಂಡಿತ ಎದುರೇಟು ಕೊಡುತ್ತಿದ್ದೆ. ಅದೆಷ್ಟೋ ಬಾರಿ ಬೈಗುಳದ ನಡುವೆ ನಮ್ಮ ಕೊಡವ ಭಾಷೆಯಲ್ಲೇ ಬೈದುಕೊಳ್ಳುತ್ತಿದ್ದೆವು. ಇತರರಿಗೆ ಅದು ಅರ್ಥವೇ ಆಗುತ್ತಿರಲಿಲ್ಲ..’

ಎ.ಕೆ.ಸುಬ್ಬಯ್ಯ ಅವರ ಕುರಿತು ಅವರ ಸಮಕಾಲೀನ ಹಿರಿಯ ನಾಯಕ ಎಂ.ಸಿ.ನಾಣಯ್ಯ ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡ ಅನುಭವ ಇದು.

‘ಕೊಡವ ಭಾಷೆಯಲ್ಲಿ ಬೈದುಕೊಂಡಾಗಲೆಲ್ಲಾ ಇತರರು ನಮ್ಮನ್ನು ಛೇಡಿಸುತ್ತಿದ್ದರು. ಇದು ನಮ್ಮ ಭಾಷಾ ಪ್ರೇಮ, ನಿಮಗೇನು ಎಂದು ಪ್ರತಿಯಾಗಿ ಸುಬ್ಬಯ್ಯ ಹೇಳುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

‘ರಾಜ್ಯದಲ್ಲಿ ಜನಸಂಘ, ಬಿಜೆಪಿಯನ್ನು ಕಟ್ಟಿ ಬೆಳೆಸಿದವರೇ ಸುಬ್ಬಯ್ಯ. ಆದರೆ ಅವರೇ ಆರ್‌ಎಸ್‌ಎಸ್ ಅನ್ನು ಫ್ಯಾಸಿಸ್ಟ್‌ ಸಂಘಟನೆ ಎಂದು ಕರೆದರು. ಇಂತಹ ಎದೆಗಾರಿಕೆ ಹೊಂದಿದ್ದ ಇನ್ನೊಬ್ಬ ನಾಯಕನನ್ನು ನಾನು ಕಂಡಿಲ್ಲ’ ಎಂದು ನೆನಪು ಮಾಡಿಕೊಂಡರು.

‘ಸುದ್ದಿ ಸುಬ್ಬಯ್ಯರಿಂದ ಏನಾದರೂ ಸುದ್ದಿ ನಿಶ್ಚಿತವಾಗಿತ್ತು’

‘ತಮ್ಮ ಪ್ರಖಾಂಡ ಪಾಂಡಿತ್ಯ, ನೇರ–ನಿಷ್ಠುರ ಮಾತು, ಯಾರಿಗೂ ತಲೆಬಾಗದ ವ್ಯಕ್ತಿತ್ವಗಳಿಂದಾಗಿ ಎ.ಕೆ.ಸುಬ್ಬಯ್ಯ ‘ಸುದ್ದಿ ಸುಬ್ಬಯ್ಯ’ ಎಂದೇ ಹೆಸರಾಗಿದ್ದರು. ಅವರ ವಿಷಯ ಮಂಡನೆಯನ್ನು ಕೇಳುವುದೇ ಕಿವಿಗೆ ಹಬ್ಬವಾಗಿತ್ತು, ಏನಾದರೂ ವಿಶೇಷ ಸುದ್ದಿಯೊಂದು ನಿಶ್ಚಿತವಾಗಿತ್ತು’ ಎಂದು 42 ವರ್ಷಗಳ ಒಡನಾಡಿ ಹಾಗೂ ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡ ಹೇಳಿದರು.

‘ವಿಮಾನ ಅಪಘಾತದಲ್ಲಿ ಸಂಜಯ ಗಾಂಧಿ ಮೃತಪಟ್ಟಾಗ ವಿಧಾನ ಪರಿಷತ್‌ನಲ್ಲಿ ಸುಬ್ಬಯ್ಯ ಅವರ ಮಾತು ಕೇಳಬೇಕಿತ್ತು. ಆ ಮಾತು ಕೇಳಿ ಇಡೀ ರಾಜ್ಯವೇ ಚಕಿತಗೊಂಡಿತ್ತು. ಶೋಕ ಸಭೆಯೊಂದು ಪ್ರಖರ ವಾಗ್ಮಿಯಿಂದಾಗಿ ಹೇಗೆ ವಿಶೇಷ ರೂಪ ಪಡೆಯಬಹುದು ಎಂಬುದಕ್ಕೆ ಅಂದಿನ ಭಾಷಣ ಎಂದೆಂದಿಗೂ ಮಾದರಿ ಎಂಬಂತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT