ಬೆಂಗಳೂರು: ‘ಚುನಾವಣೆ ಬಾಂಡ್ ಹೆಸರಿನಲ್ಲಿ ಉದ್ಯಮಗಳ ಮೇಲೆ ಒತ್ತಡ ತಂದು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗಿದೆ’ ಎಂಬ ಆರೋಪದ ಅಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಕೇಂದ್ರ–ರಾಜ್ಯ ಘಟಕದ ಪದಾಧಿಕಾರಿಗಳ ವಿರುದ್ಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಜನಾಧಿಕಾರ ಸಂಘರ್ಷ ಪರಿಷತ್’ ಸಹ ಅಧ್ಯಕ್ಷ ಆದರ್ಶ್ ಆರ್. ಅಯ್ಯರ್ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು, ಎಫ್ಐಆರ್ ದಾಖಲಿಸಲು ಶುಕ್ರವಾರ ಆದೇಶಿಸಿದ್ದರು.
ನ್ಯಾಯಾಲಯದ ಸೂಚನೆ ಬೆನ್ನಲ್ಲೇ ಶನಿವಾರ ಸಂಜೆ ಎಫ್‌ಐಆರ್ ಆಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಇ.ಡಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಅಡಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು, ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಸೇರಿ ಚುನಾವಣೆ ಬಾಂಡ್ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಿಂದ(ಎಂ.ಡಿ) ಒತ್ತಾಯಪೂರ್ವಕ ಹಾಗೂ ಒಳಸಂಚು ರೂಪಿಸಿ ₹8 ಸಾವಿರ ಕೋಟಿ ಸುಲಿಗೆ ಮಾಡಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ನಿರ್ಮಲಾ ಸೀತಾರಾಮನ್ ಅವರು ಇ.ಡಿ ಅಧಿಕಾರಿಗಳ ನೆರವು ಪಡೆದು ಬಿಜೆಪಿ ಕೇಂದ್ರ ಘಟಕ ಹಾಗೂ ರಾಜ್ಯ ಘಟಕದ ಲಾಭಕ್ಕಾಗಿ ಸಾವಿರಾರು ಕೋಟಿ ಸುಲಿಗೆ ಮಾಡಿದ್ದಾರೆ. ಅಲ್ಲದೇ ಕಾರ್ಪೊರೇಟ್ ಕಂಪನಿಗಳ ಮೇಲೆ ದಾಳಿ ಮಾಡಿಸಿದ್ದರು. ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿದ್ದರು. ಸಿಇಒ, ಎಂ.ಡಿಗಳನ್ನು ಬಂಧಿಸುವಂತೆ ಮಾಡಿದ್ದರು. ಇ.ಡಿ ದಾಳಿಗೆ ಹೆದರಿದ್ದ ಉದ್ಯಮಿಗಳು ಚುನಾವಣೆ ಬಾಂಡ್ ಖರೀದಿಸಿದ್ದರು’ ಎಂದು ವಿವರಿಸಲಾಗಿದೆ.
ದೂರಿನಲ್ಲಿ ಏನಿದೆ?:
‘ರಾಷ್ಟ್ರೀಯ, ಬಹುರಾಷ್ಟ್ರೀಯ ಮತ್ತು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳ ಎಂ.ಡಿ, ಸಿಇಒಗಳನ್ನು ಚುನಾವಣಾ ದೇಣಿಗೆಯ ಹೆಸರಿನಲ್ಲಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರು ಸುಲಿಗೆ ಮಾಡಿದ್ದಾರೆ. ವೇದಾಂತ ಕಂಪನಿಯ ಮುಖ್ಯಸ್ಥ ಅನಿಲ್ ಅಗರ್‌ವಾಲ್ ಅವರ ಮೇಲೆ ಇ.ಡಿ ಹಲವು ಬಾರಿ ದಾಳಿ ಮಾಡಿತ್ತು. ಇದರಿಂದ ಕಂಗೆಟ್ಟಿದ್ದ ಅಗರ್‌ವಾಲ್ ಚುನಾವಣಾ ಬಾಂಡ್ ಖರೀದಿಸಿದ್ದರು’ ಎಂದು ಆದರ್ಶ್ ಆರ್. ಅಯ್ಯರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿ ಆರೋಪಿಸಿದ್ದರು.
‘ಮುಖಂಡರ ನಡೆಯಿಂದ ವಿಚಲಿತಗೊಂಡ ಕಾರ್ಪೊರೇಟ್ ಕಂಪನಿಗಳು ಬಹುಕೋಟಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿಗೆ ದೇಣಿಗೆಯಾಗಿ ನೀಡಿವೆ. ಬಿಜೆಪಿ ಇವನ್ನೆಲ್ಲಾ ನಗದಾಗಿ ಪರಿವರ್ತನೆ ಮಾಡಿಸಿಕೊಂಡಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
‘ಈ ಸಂಬಂಧ 2024ರ ಮಾರ್ಚ್ 30ರಂದು ತಿಲಕ್‌ನಗರ ಪೊಲೀಸ್ ಠಾಣಾಧಿಕಾರಿಗೆ, ತದನಂತರ 2024ರ ಏಪ್ರಿಲ್ 2ರಂದು ಬೆಂಗಳೂರು ದಕ್ಷಿಣ ಡಿಸಿಪಿಗೆ ದೂರು ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಖಾಸಗಿ ದೂರು ಸಲ್ಲಿಸಲಾಗಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದರು.
ಆದರ್ಶ್ ಆರ್. ಅಯ್ಯರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೆಸರು ನಮೂದಿಸಿದ್ದರು. ನ್ಯಾಯಾಲಯದ ಆದೇಶದಲ್ಲಿ ಬಿಜೆಪಿ ಕೇಂದ್ರ ಘಟಕದ ಪದಾಧಿಕಾರಿಗಳು ಎಂದಷ್ಟೇ ಇದೆ. ಅಕ್ಟೋಬರ್ 10ರಂದು ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.
ಯಾವ ಸೆಕ್ಷನ್‌ಗಳ ಅಡಿ ಪ್ರಕರಣ?
ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 384 –ಸುಲಿಗೆ, 120ಬಿ–ಕ್ರಿಮಿನಲ್ ಪಿತೂರಿ, 34–ಏಕ ಉದ್ದೇಶದಿಂದ ಅನೇಕ ವ್ಯಕ್ತಿಗಳು ಸೇರಿ ಮಾಡಿದ ಕೃತ್ಯ
ಚುನಾವಣಾ ಬಾಂಡ್‌ನ ಮಾದರಿ
ಎ–3: ಬಿಜೆಪಿ ರಾಷ್ಟ್ರೀಯ ಘಟಕದ ಪದಾಧಿಕಾರಿಗಳು
ಎ–4: ನಳಿನ್‌ಕುಮಾರ್ ಕಟೀಲ್ ಮಾಜಿ ಸಂಸದ ದಕ್ಷಿಣ ಕನ್ನಡ
ಎ–5: ಬಿ.ವೈ.ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷ ಬಿಜೆಪಿ
ಎ–6: ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳು ಬೆಂಗಳೂರು
‘ಪ್ರಕರಣದ ತನಿಖೆಯನ್ನು ತಿಲಕ್‌ನಗರ ಠಾಣೆಯ ಇನ್‌ಸ್ಪೆಕ್ಟರ್ ಅವರೇ ನಡೆಸಲಿದ್ದಾರೆ. ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರಲು ಸೂಚಿಸಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಲಿ ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.