ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣ್ ರೈಲ್ವೆ ವಿಲೀನಕ್ಕೆ ಮನವಿ: ಸಚಿವೆ ಶೋಭಾ ಕರಂದ್ಲಾಜೆ

Published 4 ಜೂನ್ 2023, 4:35 IST
Last Updated 4 ಜೂನ್ 2023, 4:35 IST
ಅಕ್ಷರ ಗಾತ್ರ

ಉಡುಪಿ: ಕೊಂಕಣ್ ರೈಲ್ವೆಯ ಅಭಿವೃದ್ಧಿ ದೃಷ್ಟಿಯಿಂದ ದಕ್ಷಿಣ ಪಶ್ಚಿಮ ರೈಲ್ವೆ ಅಥವಾ ದಕ್ಷಿಣ ರೈಲ್ವೆ ಜತೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಣಕಾಸಿನ ಸಮಸ್ಯೆಯಿಂದಾಗಿ ಕೊಂಕಣ್ ರೈಲ್ವೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೊಂಕಣ್ ರೈಲ್ವೆ ಹಾದುಹೋಗಿರುವ ಕಡೆ ಸಮುದ್ರ, ಅರಣ್ಯ, ನದಿ ಹೆಚ್ಚಾಗಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ ಎಂದರು.

ಸಂತೆಕಟ್ಟೆ ಬಳಿ ಓವರ್‌ಪಾಸ್‌ ಕಾಮಗಾರಿಗೆ ಬಂಡೆ ಅಡ್ಡಿಯಾಗಿದ್ದು ಸುರಕ್ಷತೆ ದೃಷ್ಟಿಯಿಂದ ಬಂಡೆಯನ್ನು ಸ್ಫೋಟಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಬಂಡೆಯನ್ನು ಕೊರೆಯಲಾಗುತ್ತಿದ್ದು ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂದರು.

ಕಳೆದ 9 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ಮಾಡಿದೆ. ಸಾಮಾಜಿಕ ಯೋಜನೆಯಡಿ ₹29 ಲಕ್ಷ ಕೋಟಿಯನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಾಕಲಾಗಿದೆ.

ಕೃಷಿ ಸಮ್ಮಾನ್ ಯೋಜನೆಯಡಿ ದೇಶದ 11 ಕೋಟಿ ರೈತರ ಖಾತೆಗೆ ₹2.25 ಲಕ್ಷ ಕೋಟಿ ಜಮೆ ಮಾಡಲಾಗಿದೆ. ₹120 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆ ಹಾಕಲಾಗಿದೆ. 3.5 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. 11.72 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 

ಗರೀಬ್ ಕಲ್ಯಾಣ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಆಹಾರ, ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ₹7351 ಕೋಟಿ ಸಾಲ ನೀಡಲಾಗಿದೆ ಎಂದರು.

2013–14ಕ್ಕೆ ಹೋಲಿಸಿದರೆ ಕೃಷಿ ಬಜೆಟ್‌ ಶೇ 5.7 ಪಟ್ಟು ಏರಿಕೆಯಾಗಿದ್ದು, ಬಾಸ್ಮತಿ ಅಕ್ಕಿ ರಫ್ತು ಪ್ರಮಾಣ ಶೇ 109.7ರಷ್ಟು ಹೆಚ್ಚಾಗಿದೆ, 9.6 ಕೋಟಿ ಮನೆಗಳು ಹೊಗೆರಹಿತವಾಗಿವೆ, 27 ಕೋಟಿ ಪ್ಯಾಡ್‌ಗಳ ವಿತರಣೆ ಮಾಡಲಾಗಿದೆ ಎಂದರು.

2014ರಲ್ಲಿದ್ದ 74 ವಿಮಾನ ನಿಲ್ದಾಣಗಳು ಈಗ 148ಕ್ಕೆ ಏರಿಕೆಯಾಗಿವೆ. ಹೊಸದಾಗಿ 7 ಏಮ್ಸ್‌ಗಳನ್ನು ಸ್ಥಾಪಿಸಲಾಗಿದೆ. 1.98 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಇಂಟರ್‌ನೆಟ್ ಸೌಲಭ್ಯ, ಕಾಶಿ ವಿಶ್ವನಾಥ ಕಾರಿಡಾರ್ ಅನುಷ್ಠಾನ, ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಶೋಭಾ ಕರಂದ್ಲಾಜೆ ತಿಳಿಸಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಕುತ್ಯಾರು ನವೀನ್ ಶೆಟ್ಟಿ ಇದ್ದರು. ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT