ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರವಿಂದ ಕೇಜ್ರಿವಾಲ್ ಬಂಧನ ಪ್ರಕರಣ: ಸಿಬಿಐಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್‌

ಅಧಿಕಾರಿಗಳಿಗೆ ತಾಕೀತು
Published : 13 ಸೆಪ್ಟೆಂಬರ್ 2024, 16:10 IST
Last Updated : 13 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನದ ‘ಅಗತ್ಯ’ ಹಾಗೂ ಬಂಧನದ ‘ಸಮಯ’ದ (ಲೋಕಸಭಾ ಚುನಾವಣೆಗೆ ಮುನ್ನ) ಕುರಿತು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್‌, ‘ತನಿಖಾ ಸಂಸ್ಥೆಯು ಪಂಜರದ ಗಿಳಿಯಾಗಬಾರದು’ ಎಂದು ಕಟುವಾಗಿ ಹೇಳಿದೆ.

ಕೇಜ್ರಿವಾಲ್‌ ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ಸಿಬಿಐ ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಅವರು ಸಲ್ಲಿಸಿದ ಇನ್ನೊಂದು ಅರ್ಜಿಯ ಸಂಬಂಧ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಉಜ್ಜಲ್‌ ಭುಯಾನ್ ಅವರಿದ್ದ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿತು. ‘ಈ ತನಿಖಾ ಸಂಸ್ಥೆಯು ಪಂಜರದ ಗಿಳಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಜನರಲ್ಲಿದೆ. ಈ ಭಾವನೆಯನ್ನು ಹೋಗಲಾಡಿಸಬೇಕು’ ಎಂದು ನ್ಯಾಯಮೂರ್ತಿ ಭುಯಾನ್‌ ಹೇಳಿದರು. ಸೀಸರ್ ಪತ್ನಿಯ ಉಪಮೆಯನ್ನು ಉಲ್ಲೇಖಿಸಿದ ಅವರು, ‘ಸಂಸ್ಥೆಯು ಸಂಶಯಾತೀತ ಆಗಿರಬೇಕು’ ಎಂದು ಕಿವಿಮಾತು ಹೇಳಿದರು.

ಈ ಬಂಧನ ಕಾನೂನುಬದ್ಧವಾಗಿದೆ ಹಾಗೂ ಕಾರ್ಯವಿಧಾನದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ನ್ಯಾಯಮೂರ್ತಿ ಸೂರ್ಯಕಾಂತ್‌ ಅಭಿಪ್ರಾಯಪಟ್ಟರು. ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಸಿಬಿಐ ಕ್ರಮ ನ್ಯಾಯಯುತವಾಗಿಲ್ಲ ಹಾಗೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಭುಯಾನ್‌ ಪ್ರತಿಪಾದಿಸಿದರು. ಜಾಮೀನು ಅರ್ಜಿಯ ಸಂಬಂಧ ಸಮ್ಮತಿಯ ಪ್ರತ್ಯೇಕ ತೀರ್ಪು ನೀಡಿರುವ ಅವರು, ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

ಕಲ್ಲಿದ್ದಲು ಹಗರಣದ ವಿಚಾರಣೆಯ (2013ರ ಮೇ ತಿಂಗಳು) ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ‘ಕೇಂದ್ರೀಯ ತನಿಖಾ ಸಂಸ್ಥೆಯು ಯಜಮಾನನ ಧ್ವನಿಯಲ್ಲಿ ಮಾತನಾಡುವ ಪಂಜರದ ಗಿಳಿ ಇದ್ದಂತೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ನ್ಯಾಯಪೀಠವು ತನಿಖಾ ಸಂಸ್ಥೆಯನ್ನು ಮತ್ತೊಮ್ಮೆ ಪಂಜರದ ಗಿಳಿಗೆ ಹೋಲಿಸಿದೆ.

‘ಸಿಬಿಐ ಒಂದು ಪ್ರಮುಖ ತನಿಖಾ ಸಂಸ್ಥೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಂಸ್ಥೆಗೆ ಉನ್ನತ ಸ್ಥಾನ ನೀಡಲಾಗಿದೆ. ಯಾವುದೇ ತನಿಖೆಗಳು ನ್ಯಾಯಯುತವಾಗಿ ನಡೆದಿಲ್ಲ ಅಥವಾ ಪಕ್ಷಪಾತದಿಂದ ಕೂಡಿದೆ ಎಂಬ ಭಾವನೆ ಮೂಡದಂತೆ ನಡೆದುಕೊಳ್ಳುವುದು ಸಂಸ್ಥೆಯ ಹೊಣೆ’ ಎಂದು ಭುಯಾನ್‌ ಹೇಳಿದರು.

‘ಇತ್ತೀಚೆಗಷ್ಟೇ ಇದೇ ನ್ಯಾಯಾಲಯ ಸಿಬಿಐ ಅನ್ನು ಪಂಜರದ ಗಿಳಿ ಎಂದು ಕರೆದಿತ್ತು. ಹಾಗಾಗಿ, ತಾವು ಪಂಜರದ ಗಿಳಿಗಳಲ್ಲ ಎಂಬುದನ್ನು ಸಿಬಿಐ ಅಧಿಕಾರಿಗಳು ಸಾಬೀತುಪಡಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.

‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಕಠಿಣ ಷರತ್ತುಗಳನ್ನೊಳಗೊಂಡ ಜಾಮೀನು ನೀಡಿರುವಾಗ ಮತ್ತೆ ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಅವರನ್ನು ಬಂಧಿಸಿರುವುದು ಸಂಪೂರ್ಣವಾಗಿ ಅಸಮರ್ಥನೀಯ’ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

‘ದೆಹಲಿ ಮುಖ್ಯಮಂತ್ರಿಯನ್ನು 2023ರ ಮಾರ್ಚ್‌ ತಿಂಗಳಲ್ಲಿ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಆಗ ಅವರಿಗೆ ಬಂಧಿಸುವ ಅಗತ್ಯ ಕಾಣಲಿಲ್ಲ. 22 ತಿಂಗಳವರೆಗೆ ಮೌನವಾಗಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕ ಕೂಡಲೇ ಸಿಬಿಐ ಅಧಿಕಾರಿಗಳು ಸಕ್ರಿಯರಾದರು. ಅವರನ್ನು ಕಸ್ಟಡಿಗೆ ಪಡೆದರು. ಇ.ಡಿ ಪ್ರಕರಣದಲ್ಲಿ ಬಿಡುಗಡೆಯಾಗುವ ಹೊಸ್ತಿಲಿನಲ್ಲಿರುವಾಗ ಬಂಧಿಸುವ ತುರ್ತು ಏನಿತ್ತು ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ಕೇಜ್ರಿವಾಲ್ ಅವರ ಬಂಧನಕ್ಕೆ ಸಿಬಿಐ ಸ್ಪಷ್ಟ ಸಮರ್ಥನೆ ನೀಡಿಲ್ಲ. ಜತೆಗೆ, ಕೇಜ್ರಿವಾಲ್‌  ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರ ಬಂಧನವನ್ನು ಮುಂದುವರಿಸಿದೆ. ಅಸಹಕಾರವನ್ನು ಸ್ವಯಂ ದೋಷಾರೋಪಣೆ ಎಂದು ಅರ್ಥೈಸಲಾಗುವುದಿಲ್ಲ’ ಎಂದು ಅವರು ವಿಶ್ಲೇಷಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ಇ.ಡಿ.‍ಪ್ರಕರಣ) ಕೇಜ್ರಿವಾಲ್‌ ಅವರಿಗೆ ಮುಖ್ಯಮಂತ್ರಿ ಕಚೇರಿಗೆ ಪ್ರವೇಶಿಸುವುದು ಅಥವಾ ಕಡತಗಳಿಗೆ ಸಹಿ ಹಾಕುವುದರಿಂದ ನಿರ್ಬಂಧ ಹೇರಿರುವ ಕುರಿತು ಅವರು, ‘ಪ್ರತ್ಯೇಕ ಪ್ರಕರಣ ಆಗಿರುವುದರಿಂದ ನ್ಯಾಯಾಂಗದ ಶಿಸ್ತಿನ ಕಾರಣದಿಂದ ನಾನು ಆ ಕುರಿತು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು. 

ಜೈಲಿನಿಂದ ಹೊರಬಂದ ಕೇಜ್ರಿವಾಲ್‌ 

ಅರವಿಂದ ಕೇಜ್ರಿವಾಲ್ ಅವರಿಗೆ ನ್ಯಾಯಪೀಠವು ಷರತ್ತುಬದ್ಧ ಜಾಮೀನು ನೀಡಿತು. ಸರಿಸುಮಾರು ಆರು ತಿಂಗಳ ಸೆರೆವಾಸದ ಬಳಿಕ ಕೇಜ್ರಿವಾಲ್ ಅವರು ಶುಕ್ರವಾರ ಸಂಜೆ ಜೈಲಿನಿಂದ ಹೊರಬಂದರು. 

ಕೇಜ್ರಿವಾಲ್‌ ಬಂಧನವನ್ನು ದೆಹಲಿ ಹೈಕೋರ್ಟ್‌ ಆ.5ರಂದು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ಅಂಗೀಕರಿಸಿತು. ಬಂಧನದ ವಿರುದ್ಧ ಕೇಜ್ರಿವಾಲ್‌ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಆದೇಶವನ್ನೂ ನ್ಯಾಯಪೀಠ ಎತ್ತಿ ಹಿಡಿಯಿತು. ಪ್ರಕರಣದ ವಿಚಾರಣೆಯು ಶೀಘ್ರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ ಎಂಬುದನ್ನು ಗಮನಿಸಿದ ಪೀಠವು ಈ ಆದೇಶ ನೀಡಿತು.

ಈ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಕೇಜ್ರಿವಾಲ್ ಅವರಿಗೆ ಪೀಠ ಸೂಚನೆ ನೀಡಿತು. ‘ಸಾರ್ವಜನಿಕ ವೇದಿಕೆಗಳಲ್ಲಿ ಸ್ವಯಂ ನಿರೂಪಣೆಗಳನ್ನು ಸೃಷ್ಟಿಸುವ ಇತ್ತೀಚಿನ ಪ್ರವೃತ್ತಿಗೆ ಕಡಿವಾಣ ಹಾಕಲು ಈ ಷರತ್ತು ಅಗತ್ಯ’ ಎಂದು ಪೀಠ ಹೇಳಿತು. ₹10 ಲಕ್ಷ ಜಾಮೀನು ಬಾಂಡ್‌ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆಯೂ ಪೀಠ ಆದೇಶ ನೀಡಿತು.

ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್‌, ‘ನನ್ನ ಸ್ಥೈರ್ಯವನ್ನು ಕುಗ್ಗಿಸಲು ಅವರು ನನ್ನನ್ನು ಜೈಲಿಗೆ ಹಾಕಿದರು. ಆದರೆ, ನನ್ನ ನೈತಿಕತೆ ಹಿಂದಿಗಿಂತಲೂ ಹೆಚ್ಚಾಗಿದೆ. ಜೈಲುಗಳು ನನ್ನನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ನಮ್ಮ ದೇಶವನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿರುವ ದೇಶವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ’ ಎಂದು ಪ್ರಕಟಿಸಿದರು. 

ಎಎಪಿಯಲ್ಲಿ ನವೋಲ್ಲಾಸ 

ದೆಹಲಿ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಸಮಯದಲ್ಲಿ ಪಕ್ಷದ ವರಿಷ್ಠ ನಾಯಕ ಬಿಡುಗಡೆಯಾಗಿರುವುದು ಆಮ್‌ ಆದ್ಮಿ ಪಕ್ಷಕ್ಕೆ ನವಚೈತನ್ಯ ನೀಡಿದಂತಾಗಿದೆ. 

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಈ ಸಲ ಪಕ್ಷ ಖಾತೆ ತೆರೆಯುವ ಉಮೇದಿನಲ್ಲಿದೆ. ಕೇಜ್ರಿವಾಲ್ ಪ್ರಚಾರದಿಂದ ಪಕ್ಷಕ್ಕೆ ಭಾರಿ ಅನುಕೂಲವಾಗಲಿದೆ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕೇಜ್ರಿವಾಲ್‌ ಬಿಡುಗಡೆಯನ್ನು ಸತ್ಯಮೇವ ಜಯತೇ ಎಂದೂ ಬಣ್ಣಿಸಿದ್ದಾರೆ. 

‘ಹರಿಯಾಣ ಮತ್ತು ದೆಹಲಿಯಲ್ಲಿ ಎಎಪಿಯು ಬಿಜೆಪಿಯನ್ನು ಸೋಲಿಸಲಿದೆ. ಕೇಜ್ರಿವಾಲ್ ಅವರ ಉಪಸ್ಥಿತಿಯು ನಮ್ಮನ್ನು ಬಲಪಡಿಸುತ್ತದೆ’ ಎಂದು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌ ಹೇಳಿದರು. 

‘ಪಕ್ಷವು ಅವರ ನಾಯಕತ್ವದಲ್ಲಿ ಗುಜರಾತ್ ಮತ್ತು ದೆಹಲಿಯಲ್ಲಿ ಚುನಾವಣೆ ಎದುರಿಸಿದೆ ಮತ್ತು ಅವರು ಹರಿಯಾಣ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ’ ಎಂದು ಸಂಸದ ರಾಘವ್‌ ಛಡ್ಡಾ ತಿಳಿಸಿದರು. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಎಎಪಿ ನಾಯಕರು ಒತ್ತಾಯಿಸಿದರು. ‘ಹಲವು ದಾಳಿಗಳನ್ನು ನಡೆಸಲಾಯಿತು. ಆದರೆ, ಒಂದು ಪೈಸೆ ಅಕ್ರಮ ಸಂಪತ್ತು ಪತ್ತೆಯಾಗಿಲ್ಲ. ಆದರೂ ನಮ್ಮ ಹಲವು ನಾಯಕರನ್ನು ಕಂಬಿ ಹಿಂದೆ ಹಾಕಲಾಯಿತು. ಕೇಜ್ರಿವಾಲ್‌ಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಗೃಹ ಸಚಿವ ಶಾ ಅವರ ಮುಖಕ್ಕೆ ಕಪಾಳಮೋಕ್ಷವಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ದೆಹಲಿ ಸಚಿವ ಅತಿಶಿ ಆಗ್ರಹಿಸಿದರು.

ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಿದ್ದಕ್ಕೆ ಇಂಡಿಯಾ ಮೈತ್ರಿಕೂಟದ ನಾಯಕರು ಸಂತಸ ವ್ಯಕ್ತಪಡಿಸಿದರು.

ಜಾಮೀನು ಪಡೆದ ಎಎಪಿಯ 4ನೇ ನಾಯಕ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆದ ನಾಲ್ಕನೇ ಎಎಪಿ ನಾಯಕ ಕೇಜ್ರಿವಾಲ್‌. ಈ ಹಿಂದೆ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌, ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಪಕ್ಷದ ಸಂವಹನ ವಿಭಾಗದ ಮಾಜಿ ಉಸ್ತುವಾರಿ ವಿಜಯ್‌ ನಾಯರ್‌ ಅವರಿಗೆ ಜಾಮೀನು ನೀಡಲಾಗಿತ್ತು. ಈ ಪ್ರಕರಣದಲ್ಲಿ ಬಿಆರ್‌ಎಸ್‌ ನಾಯಕಿ ಕೆ.ಕವಿತಾ, ಹೈದರಾಬಾದ್‌ನ ಉದ್ಯಮಿ ಅರುಣ್‌ ಪಿಳ್ಳೈ, ಉದ್ಯಮಿ ಅಭಿಷೇಕ್‌ ಬೊನಾಪಲ್ಲಿ ಹಾಗೂ ಮದ್ಯ ಉದ್ಯಮಿ ಸಮೀರ್‌ ಮಹೇಂದ್ರು ಅವರಿಗೆ ಜಾಮೀನು ಸಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT