ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ: ಡಿ.ಕೆ. ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಎಫ್‌ಐಆರ್‌

Published 13 ಫೆಬ್ರುವರಿ 2024, 9:54 IST
Last Updated 13 ಫೆಬ್ರುವರಿ 2024, 9:54 IST
ಅಕ್ಷರ ಗಾತ್ರ

ಬೆಂಗಳೂರು: 2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಅಕ್ರಮವಾಗಿ ₹ 74.93 ಕೋಟಿ ಮೌಲ್ಯದ ಆಸ್ತಿಗಳಿಸಿರುವ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ನಾಲ್ಕು ದಿನಗಳ ಹಿಂದೆ ಎಫ್‌ಐಆರ್‌ ದಾಖಲಿಸಿದ್ದಾರೆ.

ಇದೇ ಆರೋಪದಡಿ ಶಿವಕುಮಾರ್‌ ವಿರುದ್ಧ 2020ರ ಅಕ್ಟೋಬರ್‌ 3ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸುತ್ತಿತ್ತು. ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರ, ಶಿವಕುಮಾರ್‌ ವಿರುದ್ಧದ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವಹಿಸುವ ತೀರ್ಮಾನವನ್ನು 2023ರ ನವೆಂಬರ್‌ 23ರಂದು ಕೈಗೊಂಡಿತ್ತು.

‘ರಾಜ್ಯ ಸರ್ಕಾರದ ಆದೇಶದಂತೆ ಲೋಕಾಯುಕ್ತ ಪೊಲೀಸ್‌ ವಿಭಾಗವು ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಪ್ರಕರಣದ ತನಿಖೆಯನ್ನು ಪ್ರತ್ಯೇಕ ತಂಡಕ್ಕೆ ವಹಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಸಿಬಿಐ ಅಧಿಕಾರಿಗಳು 2020ರ ಅ. 3ರಂದು ಶಿವಕುಮಾರ್‌ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿದ್ದ ಅಂಶಗಳನ್ನೇ ನಾವು ದಾಖಲಿಸಿರುವ ಎಫ್‌ಐಆರ್‌ನಲ್ಲೂ ಉಲ್ಲೇಖಿಸಿದ್ದೇವೆ’ ಎಂದು ಲೋಕಾಯುಕ್ತದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾರಿಸುವಂತೆ ಸಿಬಿಐಗೆ ಪತ್ರ ಬರೆಯಲಾಗಿದೆ. ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ಒದಗಿಸಿದ ಬಳಿಕ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

2013ರ ಮಾರ್ಚ್‌ 31ರ ವೇಳೆಗೆ ಶಿವಕುಮಾರ್‌ ಕುಟುಂಬ ₹ 33.92 ಕೋಟಿ ಮೌಲ್ಯದ ಆಸ್ತಿ ಹೊಂದಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಕುಟುಂಬ ₹ 166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿತ್ತು.

2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹ 128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT