ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕೇಳಿದ್ದಕ್ಕೆ ಕಟ್ಟಿ ಹಾಕಿ ಪರಿಶಿಷ್ಟ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

Published 20 ಅಕ್ಟೋಬರ್ 2023, 13:40 IST
Last Updated 20 ಅಕ್ಟೋಬರ್ 2023, 13:40 IST
ಅಕ್ಷರ ಗಾತ್ರ

ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿ ಕೂಲಿ ಕೇಳಿದ ಪರಿಶಿಷ್ಟ ಜಾತಿ ಯುವಕನ ಮೇಲೆ ಜಾತಿ ನಿಂದನೆ ಮಾಡಿ, ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ದೊಡ್ಡವಲಗಮಾದಿ ಗ್ರಾಮದ ಅಮರೇಶ್ (29) ಹಲ್ಲೆಗೆ ಒಳಗಾಗಿರುವ ಯುವಕ.‌ ಅ.17ರಂದು ಘಟನೆ ನಡೆದಿದ್ದು, ಗಾಯಗೊಂಡಿರುವ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ರಜಪೂತ ಸಮುದಾಯದ ಜಗದೀಶ್ ಸಿಂಗ್, ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಹಲ್ಲೆ ನಡೆಸಿರುವ ಆರೋಪಿಗಳು. ಇವರ ಮೇಲೆ ಬಂಗಾರಪೇಟೆ ಪೊಲೀಸರು ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಜಗದೀಶ್ ಸಿಂಗ್, ಸತೀಶ್ ಸಿಂಗ್ ಅವರನ್ನು ಬಂಧಿಸಿದ್ದಾರೆ.

ದೌರ್ಜನ್ಯ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ
ಕೆ.ಎಂ.ಶಾಂತರಾಜು, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ

‘ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪತ್ತೆ ಕಾರ್ಯ ನಡೆಯುತ್ತಿದ್ದು, ತನಿಖಾಧಿಕಾರಿಯನ್ನಾಗಿ ಕೋಲಾರ ವಿಭಾಗದ ಡಿವೈಎಸ್ಪಿಯನ್ನು ನೇಮಿಸಲಾಗಿದೆ’ ಎಂದು ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಹಲ್ಲೆ ನಡೆದ ಸಂಬಂಧ ಅಮರೇಶ್‌ ಅ.17ರಂದು ರಾತ್ರಿ ಬಂಗಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

‘ಜಗದೀಶ್ ಸಿಂಗ್ ಎಂಬುವರ ಹೊಸ ಮನೆ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದೆ. ₹ 3,500 ಕೂಲಿಯಲ್ಲಿ ₹ 2 ಸಾವಿರ ಬಂದಿತ್ತು. ಅ.17ರಂದು ಚಹಾ ಅಂಗಡಿ ಬಳಿ ಇದ್ದಾಗ ಅವರು ತಮ್ಮ ಸಹೋದರರಾದ ರವಿಸಿಂಗ್‌, ಸತೀಶ್‌ ಸಿಂಗ್‌ ಜೊತೆ ಬಂದರು. ಅವರಲ್ಲಿ ಬಾಕಿ ಹಣ ಕೇಳಿದೆ. ಆಗ ಅವರು ಅವಾಚ್ಯ ಪದ ಬಳಸಿ ಜಾತಿ ನಿಂದನೆ ಮಾಡಿ, ‘ಇಂಥ **** ಸಮುದಾಯದವರನ್ನು ಕೂಲಿ ಕೆಲಸಕ್ಕೆ ಕರೆದುಕೊಳ್ಳಬಾರದು. ದಾರಿಯಲ್ಲಿ ಹಣ ಕೇಳುತ್ತಾರೆ’ ಎಂದು ಬೈಯ್ದರು. ಮೂವರೂ ನನ್ನ ಮೇಲೆ ಕೋಲಿನಿಂದ ಬಲಗೈ, ಬಲಕಾಲಿನ ಮೇಲೆ ಹಲ್ಲೆ ನಡೆಸಿದರು. ರವಿಸಿಂಗ್‌ ಬೆಲ್ಟ್‌ನಿಂದ ನನ್ನ ಬೆನ್ನಿಗೆ ಹೊಡೆದರು. ಮನೆಯ ಬಳಿ ಕರೆದುಕೊಂಡು ಹೋಗಿ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಿದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಪಂಚಾಯಿತಿ ಸದಸ್ಯ ಮುನಿರಾಜು, ಗ್ರಾಮದ ರಾಮಕೃಷ್ಣ, ವೆಂಕಟೇಶ್‌ ಸ್ಥಳಕ್ಕೆ ಹೋಗಿ, ಗಾಯಾಳುವಿನ ಕೈಕಾಲುಗಳಿಗೆ ಕಟ್ಟಿದ್ದ ಹಗ್ಗ ಬಿಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿಗಳ ಕಡೆಯಿಂದಲೂ ಪ್ರತಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT