ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಬೋಧನಾ ಅವಧಿ ಹೆಚ್ಚಿಸಲು ಬರಗೂರು ಆಗ್ರಹ

Published 25 ಜೂನ್ 2024, 16:12 IST
Last Updated 25 ಜೂನ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪರ್ಯಾಯವಾಗಿ ರೂಪಿಸುತ್ತಿರುವ ರಾಜ್ಯ ಶಿಕ್ಷಣ ನೀತಿಯಲ್ಲೂ (ಎಸ್‌ಇಪಿ) ಕನ್ನಡಕ್ಕೆ ಅನ್ಯಾಯವಾಗುತ್ತಿದ್ದು, ತಕ್ಷಣ ಸರಿಪಡಿಸಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸರ್ಕಾರ ಈಗಾಗಲೇ ಆಯೋಗವನ್ನು ರಚಿಸಿದೆ. ಆಯೋಗ ನೀಡಿದ ಮಧ್ಯಂತರ ವರದಿಯಂತೆ ಮೂರು ವರ್ಷಗಳ ಪದವಿ ಶಿಕ್ಷಣವನ್ನು ಮರು ಜಾರಿ ಮಾಡಲು ನಿರ್ಧರಿಸಲಾಗಿದೆ. ಇದು ಸರಿಯಾದ ಕ್ರಮ. ಆದರೆ, ಗೊಂದಲಗಳು ಮುಂದುವರೆದಿವೆ ಎನ್ನುವುದು ಅನೇಕ ಅಧ್ಯಾಪಕರ ಅಭಿಪ್ರಾಯ ಎಂದು ಹೇಳಿದ್ದಾರೆ.

ಇದೇ ಮೇನಲ್ಲಿ ಸರ್ಕಾರ ಹೊರಡಿಸಿದ ಆದೇಶ ಹಾಗೂ ಪಠ್ಯಕ್ರಮ ವಿನ್ಯಾಸದ ಸಮಿತಿ ನೀಡಿದ ವರದಿಯಂತೆ ವಿವಿಧ ವಿಶ್ವವಿದ್ಯಾಲಯಗಳು ಪದವಿಯ ಮೊದಲ ಎರಡು ಸೆಮಿಸ್ಟರ್‌ಗಳಿಗೆ ಪಠ್ಯಕ್ರಮ ನಿಗದಿ ಮಾಡಿವೆ. ಕೆಲ ವಿಶ್ವವಿದ್ಯಾಲಯಗಳು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ವಾರಕ್ಕೆ ಮೂರು ಗಂಟೆ ಬೋಧನಾ ಅವಧಿ ನಿಗದಿ ಮಾಡಿರುವುದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಕನ್ನಡವನ್ನು ಮೊದಲಿನ ಎರಡು ಸೆಮಿಸ್ಟರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ನನ್ನನ್ನೂ ಒಳಗೊಂಡಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದೆವು. ಪ್ರತಿರೋಧಕ್ಕೆ ಒಪ್ಪಿ ನಾಲ್ಕು ಸೆಮಿಸ್ಟರ್‌ಗಳಿಗೆ ವಿಸ್ತರಿಸಲಾಗಿತ್ತು. ಅಲ್ಲದೇ, ವಾರಕ್ಕೆ ನಾಲ್ಕು ಗಂಟೆಗಳ ಬೋಧನಾ ಅವಧಿ ನಿಗದಿಯಾಗಿತ್ತು. ಈ ಅವಧಿಯನ್ನೂ ಎಸ್‌ಇಪಿಯಲ್ಲಿ ಮೊಟಕು ಮಾಡಿರುವುದು ಸರಿಯಲ್ಲ’ ಎಂದಿದ್ದಾರೆ.

ಈ ಅನ್ಯಾಯವನ್ನು ಕೂಡಲೇ ಸರಿಮಾಡಬೇಕು. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕನ್ನಡವನ್ನು ವಾರಕ್ಕೆ ನಾಲ್ಕು ಗಂಟೆ ಬೋಧಿಸುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT