ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಸಾಂಸ್ಕೃತಿಕ ನಾಯಕ: ರಾಜ್ಯ ಸರ್ಕಾರ ಘೋಷಣೆ

ಶಿವಮೊಗ್ಗ ಸ್ವಾತಂತ್ರ್ಯ ಉದ್ಯಾನಕ್ಕೆ ಅಲ್ಲಮ ಪ್ರಭು ಹೆಸರು * ಕಿತ್ತೂರಿಗೆ ವೀರರಾಣಿ ಚನ್ನಮ್ಮರ ನಾಮಾಂಕಿತ
Published 18 ಜನವರಿ 2024, 16:14 IST
Last Updated 18 ಜನವರಿ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ, ವಚನಗಳ ಮೂಲಕ ಜಾಗೃತಿ ಮೂಡಿಸಿದ ಜಗಜ್ಯೋತಿ ಬಸವೇಶ್ವರರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಬಸವ ಪಥ’ಕ್ಕೆ ಅಗ್ರಸ್ಥಾನ ನೀಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. 

ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ‘ಬಸವಣ್ಣ ಅವರ ನೇತೃತ್ವದಲ್ಲಿ ಜಾತಿ ಭೇದ ಮತ್ತು ಲಿಂಗತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು. ಭಾರತದ ಸಂವಿಧಾನವೂ ಇದನ್ನೇ ಎತ್ತಿ ಹಿಡಿದಿದೆ.  ಅಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ತಾತ್ವಿಕ ಮೌಲ್ಯಗಳನ್ನೂ ಬಸವಣ್ಣ ಪ್ರತಿಪಾದಿಸಿದ್ದರು. ಅವರು ವಿಶ್ವ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿದ್ದ ಮಹಾನ್‌ ವ್ಯಕ್ತಿ ಆಗಿರುವುದರಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ನಾಡಿನ ಪ್ರಗತಿಪರರು, ಚಿಂತಕರು ಮತ್ತು ಮಠಾಧೀಶರು ಒತ್ತಡ ಹಾಕಿದ್ದರು’ ಎಂದರು.

‘ಲೋಕಸಭಾ ಚುನಾವಣೆ ಕಾರಣಕ್ಕೆ ಈ ಘೋಷಣೆ ಮಾಡಿಲ್ಲ. ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅನುರೂಪವಾದ ಬಸವಣ್ಣ ಅವರ ಚಿಂತನೆಗಳು ಸಾಂಸ್ಕೃತಿಕ ನಾಯಕತ್ವಕ್ಕೆ ಸಮರ್ಥನೀಯ ನೆಲೆ ಒದಗಿಸಿವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಈ ಘೋಷಣೆಯ ಬಳಿಕ ಬಸವಣ್ಣ ಅವರ ತತ್ವ ಆದರ್ಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಲಾಗುವುದು. ಜಾತೀಯತೆ ತಾಂಡವವಾಡುತ್ತಿರುವ ಕಲುಷಿತ ವಾತಾವರಣದಲ್ಲಿ ಬಸವಣ್ಣ ಅವರ ತತ್ವಗಳು ಪ್ರೇರಣೆ ಆಗುವಂತಹ ವಾತಾವರಣ ನಿರ್ಮಿಸುವುದೇ ನಮ್ಮ ಉದ್ದೇಶ. ಅಲ್ಲದೇ, ₹600 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದನ್ನು 2025ಕ್ಕೆ ಪೂರ್ಣಗೊಳಿಸಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅಲ್ಲಮ ಪ್ರಭು ಉದ್ಯಾನ:

ಶಿವಮೊಗ್ಗ ನಗರದ ಹಳೆ ಜೈಲು ಆವರಣದಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಪ್ರದೇಶವನ್ನು ‘ಅಲ್ಲಮ ಪ್ರಭು ಉದ್ಯಾನವನ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಅಲ್ಲಮಪ್ರಭು ಅದೇ ಜಿಲ್ಲೆಯ ಬಳ್ಳಿಗಾವಿಯಲ್ಲಿ ಜನಿಸಿದವರು. ಇವರು 12ನೇ ಶತಮಾನದ ಶಿವಶರಣ ಮತ್ತು ಅನುಭವ ಮಂಟಪದ ಮುಖ್ಯಸ್ಥರಾಗಿದ್ದರು. ಅವರ ನೆನಪು ಸದಾ ಉಳಿಯಲು ಉದ್ಯಾನಕ್ಕೆ ಅವರ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಯಿತು ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಚನ್ನಮ್ಮನ ಕಿತ್ತೂರು:

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕನ್ನು ‘ಚನ್ನಮ್ಮನ ಕಿತ್ತೂರು ತಾಲ್ಲೂಕು’ ಎಂದು ನಾಮಕರಣ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬ್ರಿಟಿಶರ ವಿರುದ್ಧ ವೀರ ಹೋರಾಟ ನಡೆಸಿದ್ದ ಕಿತ್ತೂರು ರಾಣಿ ಚನ್ನಮ್ಮ ಅವರ ಕರ್ಮಭೂಮಿ ಇದಾಗಿದೆ. 

ಆರೂಢ ನಂದಿಹಾಳ ಗ್ರಾಮ:

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ನಂದಿಹಾಳ ಪಿ.ಎಚ್‌. ಗ್ರಾಮದ ಹೆಸರನ್ನು  ‘ಆರೂಢ ನಂದಿಹಾಳ’ ಎಂದು ನಾಮಕರಣ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗುರು ಆರೂಢರು ನಂದಿಹಾಳ ಗ್ರಾಮದಲ್ಲಿ ಜನಿಸಿ, ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರೂ ಆಗಿದ್ದರು ಎಂದು ಪಾಟೀಲ ತಿಳಿಸಿದರು.

ಒಳಮೀಸಲು: ಕೇಂದ್ರಕ್ಕೆ ಶಿಫಾರಸು

ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಕುರಿತು ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

‘ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಅನ್ಯಾಯವಾಗಬಾರದು. ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಜಾರಿ ಮಾಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಮಾತುಕೊಟ್ಟಿದ್ದೆವು. ಆದರೆ, ಒಳಮೀಸಲಾತಿ ನಿಗದಿ ಮಾಡುವ ಅಧಿಕಾರ ರಾಜ್ಯಗಳಿಗೆ ಸಿಗಬೇಕಾದರೆ, ಸಂವಿಧಾನ ತಿದ್ದುಪಡಿ ಅನಿವಾರ್ಯ. ಆದ್ದರಿಂದ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದೇವೆ’ ಎಂದರು. ಭೋವಿ, ಬಂಜಾರ, ಕೊರಮ ಮತ್ತು ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿವೆ. ಈ ಸಮುದಾಯಗಳನ್ನು ಅದೇ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಮತ್ತು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಅವುಗಳನ್ನು ಮುಂದುವರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಅನುಮೋದನೆ ನೀಡಿತು ಎಂದರು.

ಗೃಹ ಜ್ಯೋತಿ: ಹೆಚ್ಚುವರಿ 10 ಯೂನಿಟ್‌

‘ಗೃಹ ಜ್ಯೋತಿ’ ಯೋಜನೆಯಡಿ ತಿಂಗಳಿಗೆ 48 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್‌ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ 10 ಬದಲು ಹೆಚ್ಚುವರಿ 10 ಯೂನಿಟ್‌ಗಳನ್ನು ಅರ್ಹತಾ ಯೂನಿಟ್‌ಗಳನ್ನಾಗಿ ಒದಗಿಸಲು ನಿರ್ಧರಿಸಲಾಗಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಒಬ್ಬ ಗ್ರಾಹಕ 150 ಯೂನಿಟ್‌ ಬಳಸುತ್ತಿದ್ದರೆ, ಈಗ 15 ಯೂನಿಟ್‌ ಹೆಚ್ಚುವರಿಯಾಗಿ ಸಿಗುತ್ತಿದೆ. ಹೊಸ ತೀರ್ಮಾನದಿಂದ 5 ಯೂನಿಟ್‌ ಕಡಿತ ಆಗುತ್ತದೆ. ಆದರೆ, 48 ಯೂನಿಟ್‌ಗಿಂತ ಕಡಿಮೆ ಬಳಸುವ ಗ್ರಾಹಕರಿಗೆ 10 ಯೂನಿಟ್‌ ಕೊಡುವುದರಿಂದ ಅನುಕೂಲವಾಗುತ್ತದೆ ಎಂದರು. 30 ಯೂನಿಟ್‌ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‌ಗಳು ಕೇವಲ 3 ಆಗಿದೆ. ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆಯ ಗ್ರಾಹಕರು ಸರಾಸರಿ 53 ಯೂನಿಟ್‌ ಬಳಕೆ ಮಾಡುತ್ತಾರೆ. ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುತ್ತಿದ್ದು, 10 ಯೂನಿಟ್‌ಗಳ ಹೆಚ್ಚಳದಿಂದಾಗಿ ₹33 ಕೋಟಿ ವೆಚ್ಚ ಆಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT