ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ ಅಭ್ಯರ್ಥಿ ಪಕ್ಷದ ತೀರ್ಮಾನ: ಬೊಮ್ಮಾಯಿ

Published 10 ಜೂನ್ 2024, 16:42 IST
Last Updated 10 ಜೂನ್ 2024, 16:42 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಪ್ರತಿನಿಧಿಸುತ್ತಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ’ ಎಂದು ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ನಮ್ಮ ಕುಟುಂಬದವರು ಅಭ್ಯರ್ಥಿಯಾಗಬೇಕೆಂದು ನಾವು ಬೇಡಿಕೆ ಇಟ್ಟಿಲ್ಲ. ನಾನು ಮಾಜಿ ಆಗಿರುವುದರಿಂದ ನನ್ನ ಮಗ ಭರತ್‌ ಹೆಸರು ಕೇಳಿ ಬರುತ್ತಿದೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಅಲ್ಲಿ ಪಕ್ಷ ಸಮೀಕ್ಷೆ ಮಾಡಿ ಯಾರು ಗೆಲ್ಲುತ್ತಾರೆ ಅನ್ನುವುದನ್ನು ನೋಡಿಕೊಂಡು ಟಿಕೆಟ್‌ ನೀಡಲಿ. ಯಾರಿಗೇ ಟಿಕೆಟ್‌ ನೀಡಿದರೂ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡುತ್ತೇವೆ. ಅಲ್ಲದೇ, ಆ ಕ್ಷೇತ್ರದಲ್ಲಿ ಯಾರೇ ಶಾಸಕನಾದರೂ, ಯಾರೇ ಮಂತ್ರಿ ಆದರೂ ಆ ಕ್ಷೇತ್ರದ ಜನತೆಯ ಜೊತೆಗೆ ಅವಿನಾಭಾವ ಸಂಬಂಧ ಇದೆ. ನಾನು ಆ ಕ್ಷೇತ್ರದ ಪ್ರತಿ ಮನೆಯ ಅಣ್ಣ, ತಮ್ಮ, ಮಗ ಆಗಿದ್ದೇನೆ. ಹೀಗಾಗಿ ಆ ಕ್ಷೇತ್ರದ ಜೊತೆಗೆ ಯಾವಾಗಲೂ ಇರುತ್ತೇನೆ’ ಎಂದು ಹೇಳಿದರು.

‘ಈ ಬಾರಿ ಮೈತ್ರಿ ಪಾಲನೆ ಅಗತ್ಯವಿದೆ. ಪಕ್ಷದವರು ನಮ್ಮಿಂದ ಸಹಕಾರ ಬಯಸಿದ್ದರು. ನಾವು ಸಹಕಾರ ನೀಡಿದ್ದೇವೆ. ಮೋದಿಯವರು ನವ ಭಾರತ ಕಟ್ಟುವ ಗುರಿ ಹೊಂದಿದ್ದಾರೆ. ಆ ದೊಡ್ಡ ಗುರಿಯ ಮುಂದೆ, ನಮ್ಮ ಬಯಕೆ ಏನೇ ಇದ್ದರೂ ಅದನ್ನು ಒಪ್ಪಿಕೊಳ್ಳಬೇಕು’ ಎಂದರು.

ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ‍ಪ್ರತಿಕ್ರಿಯಿಸಿ ಅವರು, ‘ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಿದ್ದರಲ್ಲಿ ಅಚ್ಚರಿಯೇನಲ್ಲ. ಅವರು ಹೋರಾಟಗಾರರು. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಹೋರಾಟ ಮಾಡಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆದ್ದು ಬಂದಿದ್ದಾರೆ. ಅವರ ಅನುಭವಕ್ಕೆ ಅವಕಾಶ ದೊರೆತಿದೆ. ಅವರ ಅನುಭವದ ಸೇವೆ ದೇಶಕ್ಕೆ ಸಿಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT