ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 7ರಿಂದ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವ

‘ನೈಸರ್ಗಿಕ ವಿಕೋಪ’ ಈ ಬಾರಿಯ ಥೀಮ್‌
Last Updated 28 ಡಿಸೆಂಬರ್ 2018, 16:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವದ 11ನೇ ಆವೃತ್ತಿಯು 2019ರ ಫೆ.7ರಿಂದ ಫೆ.14ರವರೆಗೆ ನಗರದಲ್ಲಿ ನಡೆಯಲಿದೆ. ಈ ಬಾರಿ ‘ನೈಸರ್ಗಿಕ ವಿಕೋಪ’ವನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡು ಉತ್ಸವನ್ನು ಏರ್ಪಡಿಸಲು ಸಂಘಟನಾ ಸಮಿತಿ ನಿರ್ಧರಿಸಿದೆ.

ಚಲನಚಿತ್ರೋತ್ಸವದ ಪೂರ್ವ ಸಿದ್ಧತೆ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಂಘಟನಾ ಸಮಿತಿ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಈ ಬಾರಿಯ ಉತ್ಸವದ ಲಾಂಛನವನ್ನು ಅವರು ಬಿಡುಗಡೆ ಮಾಡಿದರು.
'ರಾಜಾಜಿನಗರದ ಒರಾಯನ್ ಮಾಲ್‌ನ ಪಿವಿಆರ್‌ ಸಿನಿಮಾಸ್‌ನ 11 ಪರದೆಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಶ್ವದ ವಿವಿಧ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. 7000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಗುಣಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುತ್ತೇವೆ' ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ‘ಏಳು ದಿನ ನಡೆಯುವ ಈ ಉತ್ಸವದಲ್ಲಿ ಏಷ್ಯಾದ ಸಿನಿಮಾಗಳು, ಚಿತ್ರ ಭಾರತಿ (ಭಾರತೀಯ ಸಿನಿಮಾಗಳು) ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಶ್ವ ಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್‌ ಕ್ಲಾಸಿಕ್‌, ಕೆಲ ದೇಶಗಳ ವಿಶೇಷ ಸಿನಿಮಾ, ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತರರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ಏಷ್ಯಾ ಸಿನಿಮಾ ಪ್ರೋತ್ಸಾಹ ಕೂಟದ (ನೆಟ್‌ ಪ್ಯಾಕ್‌) ಪ್ರಶಸ್ತಿ ವಿಭಾಗ,ಹೆಚ್ಚು ಪ್ರಸಿದ್ಧವಲ್ಲದ ಭಾಷೆಗಳ ಸಿನಿಮಾ ಹಾಗೂ ಜೀವನಚರಿತ್ರೆ ಆಧರಿಸಿದ ಚಲನಚಿತ್ರಗಳ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ಇರಲಿದೆ. ದೇಶ ವಿದೇಶಗಳ ಸಿನಿಮಾ ನಿರ್ದೇಶಕರು ಹಾಗೂ ತಂತ್ರಜ್ಞರ ಜೊತೆ ಸಂವಾದ, ವಿಚಾರಸಂಕಿರಣಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ’ ಎಂದು ತಿಳಿಸಿದರು.

ವೆಚ್ಚ ಕಡಿತ: ‘ಕಳೆದ ವರ್ಷ ಸುಮಾರು ₹ 7 ಕೋಟಿ ವೆಚ್ಚವಾಗಿತ್ತು. ಈ ಬಾರಿ ವೆಚ್ಚವನ್ನು ಶೇ 50ರಷ್ಟು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ’ ಎಂದು ಪಾಂಡೆ ತಿಳಿಸಿದರು.

‘ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳಿಗೆ ತಗಲುವ ವೆಚ್ಚ ಕಡಿಮೆ ಮಾಡುತ್ತೇವೆಯೇ ಹೊರತು ಸಿನಿಮಾ ಪ್ರದರ್ಶನಕ್ಕೆ ತಗಲುವ ವೆಚ್ಚವನ್ನಲ್ಲ. ಹಾಗಾಗಿ ಚಿತ್ರನಚಿತ್ರೋತ್ಸವದ ಗುಣಮಟ್ಟದಲ್ಲಿ ಸಂಬಂಧಿಸಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ ಎನ್‌.ಜೋಯಿಸ್‌ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಫೆ. 7ರಂದು ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ ಫೆ. 14ರಂದು ಸಮಾರೋಪ ನಡೆಯಲಿದೆ.

ಆನ್‌ಲೈನ್‌ ನೋಂದಣಿ ಕಡ್ಡಾಯ:

ಉತ್ಸವದಲ್ಲಿ ಚಲನಚಿತ್ರ ವೀಕ್ಷಿಸಲು ಬಯಸುವವರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಚಿತ್ರೋದ್ಯಮಿಗಳು ಹಾಗೂ ಫಿಲಂ ಸೊಸೈಟಿ ಸದಸ್ಯರಿಗೆ ₹ 400 ನೋಂದಣಿ ಶೂಲ್ಕ ಹಾಗೂ ಸಾರ್ವಜನಿಕರಿಗೆ ₹ 800 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ನೋಂದಣಿ ಇನ್ನೂ ಆರಂಭವಾಗಿಲ್ಲ. ನೋಂದಣಿ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ಸಂಘಟನಾ ಸಮಿತಿ ತಿಳಿಸಿದೆ.

ಫೆಬ್ರುವರಿ ಮೊದಲ ಗುರುವಾರದಿಂದ ಉತ್ಸವ:

'7 ದಿನಗಳ ಈ ಚಲನಚಿತ್ರೋತ್ಸವವು ಇನ್ನು ಪ್ರತಿವರ್ಷವೂ ಫೆಬ್ರುವರಿ ತಿಂಗಳ ಮೊದಲ ಗುರುವಾರ ಆರಂಭವಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಇದು ಸಹಕಾರಿ. ನಿರ್ದಿಷ್ಟ ವೇಳಾಪಟ್ಟಿ ಹೊಂದುವುದರಿಂದ ಸಿನಿಮಾ ಆಸಕ್ತರು ಭಾಗವಹಿಸುವುದಕ್ಕೂ ಅನುಕೂಲ' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT