ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit: 50 ಸಾವಿರ ಜನರು ಭಾಗಿ

Published 2 ಡಿಸೆಂಬರ್ 2023, 0:42 IST
Last Updated 2 ಡಿಸೆಂಬರ್ 2023, 0:42 IST
ಅಕ್ಷರ ಗಾತ್ರ

ಬೆಂಗಳೂರು: 45 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಶೃಂಗಸಭೆ ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದಲ್ಲಿ ಮೂರು ದಿನಗಳು ನಡೆದ ಶೃಂಗಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದರು. 

ಬೆಂಗಳೂರು ಹೊರವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನ ಸಮುಚ್ಚಯಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿ, ಪ್ರತಿಭೆಯ ಲಭ್ಯತೆ ಮತ್ತು ಉತ್ತಮ ಮಾರುಕಟ್ಟೆಗೆ ಉತ್ತೇಜನ ನೀಡುವ ಜತೆಗೆ, ಕ್ರಿಯಾತ್ಮಕ ಪರಿಸರ ವ್ಯವಸ್ಥೆ ರೂಪಿಸಲಾಗುತ್ತಿದೆ. 5 ವರ್ಷಗಳಲ್ಲಿ 100 ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಲು ಯೋಜಿಸಲಾಗಿದೆ ಎಂದರು.

ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ 37 ವಿನೂತನ ಚಿಂತನೆಗಳ ಉತ್ಪನ್ನ ಮತ್ತು ಪರಿಹಾರಗಳನ್ನು ಅನಾವರಣಗೊಳಿಸಲಾಗಿದೆ. ಇವು ಐಟಿ–ಐಟಿಇಎಸ್, ಅಗ್ರಿ-ಟೆಕ್, ಮೆಡ್-ಟೆಕ್, ಆರೋಗ್ಯ ರಕ್ಷಣೆ, ಕ್ಲೀನ್-ಟೆಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಸೇರಿದಂತೆ ಹಲವು ಕ್ಷೇತ್ರಗಳನ್ನು ವ್ಯಾಪಿಸಿವೆ ಎಂದು ಹೇಳಿದರು.

ಯುಎಸ್-ಇಂಡಿಯಾ ಬಿಸಿನೆಸ್‌ ಕೌನ್ಸಿಲ್ ಜತೆ ಕರ್ನಾಟಕ ಸಹಯೋಗವನ್ನು ಹೆಚ್ಚಿಸಲು ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪಾಲುದಾರಿಕೆಯು ಯುಎಸ್‌ಐಬಿಸಿ ಸದಸ್ಯ ಕಂಪನಿಗಳು ಹಾಗೂ ಸರ್ಕಾರದ ನಡುವಿನ ಸಂವಹನ ಮಾರ್ಗಗಳು ರಾಜ್ಯದ ಉದ್ಯಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲಿವೆ ಎಂದರು.
 

ಎವಿಜಿಸಿ ಉದ್ಯಮಕ್ಕೆ ಬೆಂಗಳೂರೇ ಜಾಗತಿಕ ಕೇಂದ್ರ

ಬೆಂಗಳೂರು: ಆನಿಮೇಷನ್‌ ಮತ್ತು ವಿಷುವಲ್‌ ಎಫೆಕ್ಟ್‌ ವಲಯದಲ್ಲಿ ಬೆಂಗಳೂರು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಟೆಕ್ನಿಕಲರ್‌ ಕ್ರಿಯೇಟಿವ್‌ ಸರ್ವೀಸಸ್‌ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ಬಿರೇನ್‌ ಘೋಷ್ ಹೇಳಿದರು.

ಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿವುಡ್‌ನ ಬಹುತೇಕ ಸಿನಿಮಾ ಮತ್ತು ಟಿವಿ ಸರಣಿಗಳ ಆನಿಮೇಷನ್‌ ಮತ್ತು ವಿಷುವಲ್‌ ಎಫೆಕ್ಟ್‌ ಬೆಂಗಳೂರಿನಲ್ಲೇ ನಿರ್ಮಾಣಗೊಳ್ಳುತ್ತವೆ ಎಂದರು. ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಂಗಮವಾದ ಎವಿಜಿಸಿ ಭವಿಷ್ಯದ ಮನರಂಜನಾ ಉದ್ಯಮವಾಗಿದೆ. ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳವಣಿಗೆ ಹೊಂದುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಉದ್ಯಮ ಪ್ರಸಕ್ತ ವರ್ಷ ಶೇ 20ರಷ್ಟು ಅಭಿವೃದ್ಧಿ ಹೊಂದಿದೆ. ಗೇಮಿಂಗ್‌ ಉದ್ಯಮವೂ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದೆ. ಪ್ರಸ್ತುತ ಸಿನಿಮಾ ಉದ್ಯಮಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ ಎಂದು ವಿವರ ನೀಡಿದರು. ಎವಿಜಿಸಿ ಮತ್ತು ಎಕ್ಸ್‌ಆರ್‌ ವೇದಿಕೆ ಅಧ್ಯಕ್ಷ ಆಶಿಶ್ ಕುಲಕರ್ಣಿ ವೆಂಟನಾ ವೆಂಚರ್ಸ್‌ನ ಸ್ಥಾಪಕ ಪಾಲುದಾರರಾದ ಶೈಲಜಾ ರಾವ್‌ ಮೊಬೈಲ್‌ ಪ್ರೀಮಿಯರ್ ಲೀಗ್ ಸಿಇಒ ಸಾಯಿ ಶ್ರೀನಿವಾಸ್‌ ಇ-ಗೇಮಿಂಗ್‌ ಫೌಂಡೇಷನ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುರಾಗ ಸಕ್ಸೇನಾ ಎಐಜಿಎಫ್ ಸಂಸ್ಥೆಯ ಧ್ರುವ ಗರ್ಗ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಭಾಗಿತ್ವ

ದೇಶದ ಜಿಡಿಪಿಗೆ ಶೇ 10ರಷ್ಟು ಕೊಡುಗೆ ನೀಡುವ ಪ್ರವಾಸೋದ್ಯಮ ಮಹತ್ವದ ವಲಯವಾಗಿದೆ. ಸಮಗ್ರ ಅಭಿವೃದ್ಧಿಗೆ ಸರ್ಕಾರ ಮತ್ತು ಖಾಸಗಿ ಉದ್ಯಮ ಸಹಭಾಗಿತ್ವ ಅಗತ್ಯ ಎಂದು ಕರ್ನಾಟಕ ಪ್ರವಾಸೋದ್ಯಮ ವಿಷನ್‌ ಗ್ರೂಪ್‌ ಮಾಜಿ ಸಹ ಅಧ್ಯಕ್ಷ ವಿ. ರವಿಚಂದರ್ ಹೇಳಿದರು.

ಇ-ಸಮುದಾಯ್‌ ಸಂಸ್ಥೆ ಸಹಸಂಸ್ಥಾಪಕ ರವಿ ಹಲ್ಲಿಪುರ್ ಡಿಜಿಟಲ್ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರತಿ ಜಿಲ್ಲೆಯನ್ನೂ ಅತ್ಯುತ್ತಮ ಪ್ರವಾಸಿ ತಾಣವಾಗಿಸುವುದು ಹಾಗೂ ಭಾರತೀಯ ಪಾರಂಪರಿಕ ಸ್ಮಾರಕಗಳನ್ನು ಜಾಗತಿಕವಾಗಿ ಆಕರ್ಷಣಾ ಕೇಂದ್ರವಾಗಿಸಲು ಶ್ರಮಿಸಲಾಗುತ್ತಿದೆ ಎಂದರು. ಫಿಎಫ್‌ಆರ್‌ ಸಂಸ್ಥೆಯ ಸಿಇಒ ವಿವೇಕ್ ಜೈನ್ ತಕ್ಷಯ್‌ ಲ್ಯಾಬ್‌ ಸಂಸ್ಥಾಪಕ ಸತೀಶ್‌ ಶೇಖರ್  ಎಡಬ್ಲ್ಯೂಕೆಎಸ್ ಸಂಸ್ಥೆಯ ನಾವೀನ್ಯತಾ ವಿಭಾಗದ ಮುಖ್ಯಸ್ಥ ನಿಖಿಲ್‌ ವೇಲ್‌ ಪನೂರ್‌ ‘ಡೈನ್ ಔಟ್' ಸಂಸ್ಥೆ ಸಹ ಸಂಸ್ಥಾಪಕ ಅಂಕಿತ್ ಮೆಹರೋತ್ರಾ ಟ್ರಾವೆಲ್ಸ್‌ ಸಂಸ್ಥೆ ಸಂಸ್ಥಾಪಕಿ ಸೀಮಾ ಜೈಸಿಂಗ್‌ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT