ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಡ್ಸೆಗೆ ಭಾರತ ರತ್ನ ಕೊಟ್ಟರೂ ಅಚ್ಚರಿ ಇಲ್ಲ: ಡಿ.ರಾಜಾ

ಸಂದರ್ಶನ
Last Updated 25 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲ್ಲಲು ಸಾವರ್ಕರ್‌ಗೆ ಭಾರತರತ್ನ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಕಟಿಸಿತು. ಅದೇ ರೀತಿ, ಮಹಾತ್ಮ ಗಾಂಧೀಜಿ ಅವರ ಹಂತಕ ನಾಥೂರಾವ್‌ ಗೋಡ್ಸೆಗೂ ಭಾರತರತ್ನ ನೀಡಲು ಬಿಜೆಪಿ ಮುಂದಾದರೂ ಅಚ್ಚರಿ ಪಡಬೇಕಿಲ್ಲ’

ಹೀಗೆ ವ್ಯಂಗ್ಯವಾಡಿದವರು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ.

‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ದೇಶದ ಸಮಕಾಲೀನ ಬೆಳವಣಿಗೆಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ‘ಈ ವರ್ಷ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವವನ್ನು ಕೇಂದ್ರ ಸರ್ಕಾರ ಆಚರಿಸುತ್ತಿದೆ. ಈ ಮೂಲಕ ಗಾಂಧಿಗಿರಿ ತೋರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್‌ ನಟರ ಜತೆಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ, ಭಾರತರತ್ನಕ್ಕೆ ಸಾವರ್ಕರ್‌ ಹೆಸರು ಮುನ್ನೆಲೆಗೆ ಬಂದಿದೆ. ಇದು ದೊಡ್ಡ ದುರಂತ. ಗಾಂಧೀಜಿ ಅವರಿಗಿಂತ ಗೋಡ್ಸೆ ಕೊಡುಗೆ ದೊಡ್ಡದು ಎಂದು ಅವರು ಹೇಳುವ ದಿನ ದೂರವಿಲ್ಲ’ ಎಂದರು.

*ರಾಷ್ಟ್ರೀಯತೆ ವಿಚಾರದಲ್ಲಿ ಬಿಜೆಪಿ ಒಡ್ಡಿದ ಬಲೆಗಳಿಗೆ ವಿಪಕ್ಷಗಳು ಸುಲಭವಾಗಿ
ಬೀಳುತ್ತಿವೆಯಲ್ಲವೇ?

ಇದೊಂದು ಹೊಸ ಸನ್ನಿವೇಶ. ಬಿಜೆಪಿ ಅಧಿಕಾರಕ್ಕೆ ಹಿಡಿದ ಕೂಡಲೇ ಪ್ರಭಾವಶಾಲಿಯಾದ ಆರ್‌ಎಸ್‌ಎಸ್‌, ‍ ಈಗ ಮತ್ತಷ್ಟು ಹಿಡಿತ ಬಿಗಿಗೊಳಿಸಿದೆ. ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಅದು, ಹೆಚ್ಚುವರಿ ಸಾಂವಿಧಾನಿಕ ಪ್ರಾಧಿಕಾರವಾಗಿ ಕೆಲಸ ಮಾಡುತ್ತಿದೆ.

ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಅಸ್ತ್ರವಷ್ಟೇ. ಅದು ಹೊಂದಿರುವ ಕೋಮುವಾದಿ ಮತ್ತು ಫ್ಯಾಸಿಸ್ಟ್ ಅಜೆಂಡಾ ವನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಈಗ ಸಂಸತ್ತನ್ನು ದುರ್ಬಲಗೊಳಿಸಲು ಹೊರಟಿದೆ. ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ಸಂವಿಧಾನದ 370 ವಿಧಿ ರದ್ದತಿ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ತುಟಿಪಿಟಿಕ್‌ ಎನ್ನಇಲ್ಲ. ಈ ರೀತಿ, ನೈಜ ವಿಚಾರಗಳನ್ನು ಮರೆಮಾಚಿ, ಜನರ ದಾರಿ ತಪ್ಪಿಸಿ, ತಮ್ಮ ಅಜೆಂಡಾವನ್ನು ಪೂರೈಸಲು ಅವರು ಪ್ರಯತ್ನಿಸುತ್ತಿದ್ದಾರೆ. ಜನರಲ್ಲಿ ಅತಿರೇಕದ ದೇಶಭಕ್ತಿಯ ಭಾವನೆಗಳನ್ನು ಮೂಡಿಸುತ್ತಿದ್ದಾರೆ.

ಅಕ್ರಮ ವಲಸಿಗರನ್ನು ಹೊರದಬ್ಬುತ್ತೇವೆ ಎಂದು ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಅವರ ಪ್ರಕಾರ, ಅಕ್ರಮ ವಲಸಿಗರು ಎಂದರೆ ಮುಸ್ಲಿಮರು ಎಂದರ್ಥ. ಅವರನ್ನು ಎಲ್ಲಿಗೆ ಹೊರ ಹಾಕುತ್ತಾರೆ.

* ಇಷ್ಟೆಲ್ಲ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೀರಿ. ಆದರೆ, ವಿರೋಧ ಪಕ್ಷಗಳು ಧ್ವನಿ
ಎತ್ತುತ್ತಿಲ್ಲವಲ್ಲ?

ಜಾತ್ಯತೀತ ಪ್ರಜಾಪ್ರಭುತ್ವ ಶಕ್ತಿಗಳು ಸರ್ಕಾರಕ್ಕೆ ಸವಾಲು ಹಾಕಬೇಕು. ಸರ್ಕಾರದ ನೀತಿ ಪ್ರಶ್ನಿಸಿ, ಜನರನ್ನು ಒಟ್ಟುಗೂಡಿಸಬೇಕು. ಎಡಪಕ್ಷಗಳು ಮಾತ್ರ ಈ ಕೆಲಸವನ್ನು ಮಾಡುತ್ತಿವೆ. ಉದಾಹರಣೆಗೆ, 370ನೇ ವಿಧಿ ರದ್ದತಿ ಪ್ರಶ್ನಿಸಿ ನಾವು (ಎಡಪಕ್ಷಗಳು) ಪ್ರತಿಭಟನೆ ಆರಂಭಿಸಿದೆವು. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಉಳಿಸಲು, ರಾಜಕೀಯ ನಾಯಕರು, ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿ ನಾವು ಈಗಲೂ ಹೋರಾಡುತ್ತಿದ್ದೇವೆ. ಆದರೆ, ಎಲ್ಲೋ ಒಂದು ಕಡೆ ಕಾಂಗ್ರೆಸ್ ಗೊಂದಲದಲ್ಲಿದೆ.

* ಎಡಪಕ್ಷಗಳ ಹೋರಾಟ ಜನರನ್ನು ತಲುಪುತ್ತಿಲ್ಲವಲ್ಲ. ಹೋರಾಟ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲವಲ್ಲ?

ನಾವು ಈ ಹೋರಾಟವನ್ನು ಇನ್ನಷ್ಟು ಜನರ ಬಳಿಗೆ ಕರೆದೊಯ್ಯಬೇಕಿದೆ. ವಲಯ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಬೇಕಿದೆ. ಇತರ ಎಡಪಕ್ಷಗಳೊಂದಿಗೆ ಸಂವಾದ ನಡೆಸಬೇಕಿದೆ. ನಮ್ಮ ಹೋರಾಟಗಳಿಗೆ, ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರಚಾರ ದೊರೆಯುತ್ತಿಲ್ಲ. ಜೆಎನ್‌ಯು, ಪುದುಚೆರಿ, ಪಂಜಾಬ್, ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯಗಳಲ್ಲಿ ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಗೆದ್ದಿವೆ. ಇದು ದೊಡ್ಡ ಸಾಧನೆ.

* 1982ರಲ್ಲಿ ಕೇವಲ 2 ಸಂಸದರನ್ನು ಹೊಂದಿದ್ದ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಅವರು ರಾಷ್ಟ್ರವಾದವನ್ನು ಅಪ್ಪಿಕೊಂಡಿದ್ದು ಕಾರಣವೇ?

ಇತಿಹಾಸ ನಿಂತ ನೀರಲ್ಲ. ಅದು ಬದಲಾಗುತ್ತಿರುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಇಂದು ಮುಂಚೂಣಿಯಲ್ಲಿರಬಹುದು. ಆದರೆ, ಅದೇ ಅಂತಿಮ ಅಲ್ಲ. ಅಡ್ವಾಣಿ ಸೇರಿದಂತೆ ಬಿಜೆಪಿಯ ನಾಯಕರು ನಮ್ಮನ್ನು ಹುಸಿ ಜಾತ್ಯತೀತರು ಎಂದರು. ಆದರೆ, ಈಗ ಅವರೇ ಹುಸಿ ರಾಷ್ಟ್ರವಾದಿಗಳು.

ಬಿಜೆಪಿ ಕೈಯಲ್ಲಿ ದೇಶದ ಭವಿಷ್ಯ ಸುಭದ್ರವಾಗಿರುವುದಿಲ್ಲ. ಎಡಪಕ್ಷಗಳು ಒಂದು ಶಕ್ತಿಯಾಗಿ ಹೊರಹೊಮ್ಮುವುದರಿಂದ ದೇಶದ ಭವಿಷ್ಯ ಸುಭದ್ರವಾಗಿರುತ್ತದೆ. ಎಡಪಕ್ಷಗಳೇ ದೇಶದ ಭವಿಷ್ಯ, ಭರವಸೆ ಹಾಗೂ ಆತ್ಮ.

* ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಎಡಪಕ್ಷಗಳೇ ಕಾರಣ ಎಂಬ ಮಾತಿದೆಯಲ್ಲ?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಗೆದ್ದಿದೆ ಅಷ್ಟೇ. ಅದೊಂದು ದೊಡ್ಡ ಬೆಳವಣಿಗೆ ಅಲ್ಲ. ಅದು ಶಾಶ್ವತವಾಗಿ ಉಳಿಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT